Devendra Fadnavis | ಸಿಎಂ ದೇವೇಂದ್ರ ಫಡ್ನವೀಸ್ (ಸಂಗ್ರಹ ಚಿತ್ರ)
ಮುಂಬೈ: ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣವಿದೆ ಎಂಬ ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿರುವ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಬೆಂಬಲಕ್ಕೆ ಸಿಎಂ ದೇವೇಂದ್ರ ಫಡ್ನವೀಸ್ ನಿಂತಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಫಡ್ನವೀಸ್, ಚುನಾವಣೆಯ ಸಂದರ್ಭದಲ್ಲಿ ಅನೇಕ ಬಾರಿ ಹಲವಾರು ವಿಷಯಗಳನ್ನು ಹೇಳಲಾಗುತ್ತದೆ, ಆದರೆ ಅದು ಒಂದೇ ಅರ್ಥವಲ್ಲ ಎಂದು ಫಡ್ನವಿಸ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ನಮ್ಮ ಮಿತ್ರ ಅಥವಾ ಬೇರೆ ಯಾರಾದರೂ ಹಾಗೆ ಹೇಳಿದ್ದರೂ ಸಹ, ಅದು ಉದ್ದೇಶಪೂರ್ವಕ ಹೇಳಿಕೆಯಾಗಿರುವುದಿಲ್ಲ, ಅಜಿತ್ ಯಾವತ್ತೂ ಅಂತಹ ತಾರತಮ್ಯ ಮಾಡುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಖಂಡಿತವಾಗಿಯೂ ನಮ್ಮ ಮೈತ್ರಿಕೂಟ ಗೆಲುವು ಸಾಧಿಸಲಿದ್ದು, ಕೆಲವು ಕ್ಷೇತ್ರಗಳಲ್ಲಿ ಫ್ರೆಂಡ್ಲಿ ಫೈಟ್ ನಡೆಯಬಹುದು ಎಂದಿದ್ದಾರೆ.
ಏನಿದು ವಿವಾದ..
ಪುಣೆ ಜಿಲ್ಲೆಯ ಬಾರಾಮತಿ ತೆಹ್ಸಿಲ್‌ನಲ್ಲಿ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅಜಿತ್, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿಗಳನ್ನು ಗೆಲ್ಲಿಸಲು ಸಹಾಯ ಮಾಡಿದರೆ, ಹಣದ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಮತದಾರರಿಗೆ ಭರವಸೆ ನೀಡಿದ್ದರು. ಒಂದು ವೇಳೆ ಜನರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ತಿರಸ್ಕರಿಸಿದರೆ, ನಾನು ಜನರನ್ನು ತಿರಸ್ಕರಿಸುತ್ತೇನೆ. ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣವಿದೆ ಎಂದಿರುವುದಾಗಿ ವರದಿಯಾಗಿತ್ತು.
ಅಜಿತ್ ಪವಾರ್ ಹೇಳಿಕೆಗೆ ಪ್ರತಿಪಕ್ಷಗಳ ಕಿಡಿ
ಡಿಸಿಎಂ ಅಜಿತ್ ಪವಾರ್ ಹೇಳಿಕೆಯನ್ನು ಬಳಸಿಕೊಂಡಿರುವ ವಿಪಕ್ಷಗಳು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಜಿತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಇದೇ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ (ಪವಾರ್ ಬಣ) ಸಂಸದೆ, ಅಜಿತ್ ಸಹೋದರಿ ಸುಪ್ರಿಯಾ ಸುಳೆ, ಪ್ರಜಾಪ್ರಭುತ್ವ ನೆಲೆಸಿರುವ ದೇಶದಲ್ಲಿ ಈ ರೀತಿ ನಡೆಯಲು ಹೇಗೆ ಸಾಧ್ಯ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಅತುಲ್ ಲೊಂಡೆ ಕೂಡ ಪವಾರ್ ಹೇಳಿಕೆಯನ್ನು ಖಂಡಿಸಿದ್ದು, ಮತದಾರರಿಗೆ ಇದು ನೇರ ಬೆದರಿಕೆಯಾಗಿದೆ, 11 ವರ್ಷಗಳಲ್ಲಿ ಯಾವುದೇ ಕೆಲಸ ಮಾಡಲಾಗಿಲ್ಲ, ಆದ್ದರಿಂದ ಈಗ ಲಂಚದ ಆಮಿಷ ತೋರಿಸುತ್ತಿದ್ದಾರೆ. ಅಜಿತ್ ಅವರೇ ಇದು ಮಹಾರಾಷ್ಟ್ರ, ಇಲ್ಲಿ ಘನತೆ ಮಾತ್ರ ಕೆಲಸ ಮಾಡುತ್ತದೆ, ಲಂಚವಲ್ಲ ಎಂದಿದ್ದಾರೆ.
ಬಿಜೆಪಿ ಮತ್ತು ಏಕನಾಥ್ ಶಿಂಧೆಯ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಅಜಿತ್ ಪವಾರ್, ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ(ಏಜೆನ್ಸೀಸ್).