ಸಿಎಂ ಮಮತಾ ಬ್ಯಾನರ್ಜಿ 
ದೇಶ

ಚುನಾವಣೆ ಆಯೋಗ SIR​ಗೆ ಬಿಜೆಪಿ ಐಟಿ ಸೆಲ್ ರಚಿಸಿದ ಮೊಬೈಲ್ ಆ್ಯಪ್ ಬಳಸ್ತಿದೆ: ಸಿಎಂ ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್​ಐಆರ್) ಪ್ರಕ್ರಿಯೆಗಾಗಿ ಭಾರತೀಯ ಚುನಾವಣೆ ಆಯೋಗವು ಬಿಜೆಪಿ ಐಟಿ ಸೆಲ್ ರೂಪಿಸಿದ ಮೊಬೈಲ್ ಆ್ಯಪ್​ ಅನ್ನು ಬಳಸುತ್ತಿದೆ ಎಂದು ಮಂಗಳವಾರ(ಜ. 06) ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. 
ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮಾತನಾಡಿರುವ ಅವರು, ಎಸ್​ಐಆರ್ ನಡೆಸಲು ಆಯೋಗವು ಎಲ್ಲಾ ರೀತಿಯ ತಪ್ಪು ಕ್ರಮಗಳನ್ನು ಅವಲಂಬಿಸಿದೆ. ಅರ್ಹ ಮತದಾರರನ್ನು ಮೃತಪಟ್ಟವರು ಎಂದು ಗುರುತಿಸುತ್ತಿದೆ. ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಅಸ್ವಸ್ಥರನ್ನು ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸುತ್ತಿದೆ. ಬಿಜೆಪಿಯ ಐಟಿ ಸೆಲ್ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್​ ಅನ್ನು ಈ ಪ್ರಕ್ರಿಯೆ ಬಳಸಿದೆ. ಇದು ಕಾನೂನುಬಾಹಿರ, ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಸ್​ಐಆರ್​ ವಿರುದ್ಧ ಸುಪ್ರೀಂ ಮೊರೆ ಹೋದ ತಮ್ಮ ಪಕ್ಷದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟ. ನಾವು ಕಾನೂನಿನ ಸಹಾಯವನ್ನು ಬಯಸುತ್ತಿದ್ದೇವೆ. ಈ ಎಸ್​ಐಆರ್​ ಪ್ರಕ್ರಿಯೆಯಿಂದ ಹಲವು ಜನ ಮೃತಪಟ್ಟಿದ್ದಾರೆ. ಹಾಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಹೇಳಿದ್ದಾರೆ.
ಈಗ ಕೃತಕ ಬುದ್ದಿಮತ್ತೆ ಚಾಲ್ತಿಯಲ್ಲಿದೆ. ಚಿತ್ರಗಳು ಮತ್ತು ಧ್ವನಿಗಳನ್ನು ಬಳಸಿ ಸುಳ್ಳುಗಳನ್ನು ಹರಡಬಹುದು, ಅದನ್ನು ಬಳಸಿ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಶಾಸನಬದ್ಧ ನಮೂನೆಗಳ ಮೂಲಕ ಮತದಾರರಿಗೆ ಪ್ರತಿಕ್ರಿಯಿಸಲು ಸಾಕಷ್ಟು ಅವಕಾಶ ನೀಡದೆ ಲಕ್ಷಾಂತರ ಹೆಸರುಗಳನ್ನು ಅಳಿಸಲಾಗಿದೆ. ಯಾರ ಉಪನಾಮ ಬದಲಾಗಿದೆ, ಯಾರು ಮದುವೆಯಾದರು, ಯಾವ ಹುಡುಗಿ ತನ್ನ ಅತ್ತೆಯ ಮನೆಗೆ ಹೋಗಿದ್ದಾಳೆ ಎಂಬುದನ್ನು AI ನಿರ್ಧರಿಸುತ್ತಿದೆ. ಕೊಲೆಗಾರನಿಗೂ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಅವಕಾಶ ಸಿಗುತ್ತದೆ. ಆದರತೆ ಇಲ್ಲಿ ಜನರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಡಿ. 16ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಿದ್ದ ಆಯೋಗ, 58 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಅಳಿಸಿದೆ. ಒಟ್ಟು 7.6 ಕೋಟಿಯ ಮತದಾರರಲ್ಲಿ 1.66 ಕೋಟಿ ಮತದಾರರ ಪ್ರಮಾಣಿಕತೆ ಪರಿಶೀಲಿಸುತ್ತಿದೆ (ಏಜೆನ್ಸೀಸ್).