Election Commission | ಭಾರತೀಯ ಚುನಾವಣಾ ಆಯೋಗ 
ದೇಶ

ತಮಿಳುನಾಡು, ಬಂಗಾಳದಲ್ಲಿ ಮತದಾನಕ್ಕೂ ಮುನ್ನ 48 ಗಂಟೆಗಳ ಕಾಲ ‘ಡ್ರೈ ಡೇ’; ಏನಿದರ ವಿಶೇಷತೆ..? | Election Commission

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಮುಕ್ತ, ನ್ಯಾಯಯುತ ಮತ್ತು ಶಾಂತಿಯುತವಾಗಿ ನಡೆಸಲು ಭಾರತೀಯ ಚುನಾವಣಾ ಆಯೋಗವು (ಇಸಿಐ) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಏಪ್ರಿಲ್ 23 ರಂದು ಮೊದಲ ಹಂತದ ಮತದಾನ ನಡೆಯಲಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತದಾನಕ್ಕೆ ಮುನ್ನ 48 ಗಂಟೆಗಳ ಕಾಲ ಡ್ರೈ ಡೇ (ಮದ್ಯ ಮಾರಾಟ ನಿಷೇಧ) ಘೋಷಿಸಿ ಸೋಮವಾರ (ಏ.20) ಅಧಿಕೃತ ಆದೇಶ ಹೊರಡಿಸಿದೆ.
1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 135C ಅಡಿಯಲ್ಲಿ ಈ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಮತದಾನಕ್ಕೂ ಮುನ್ನ 48 ಗಂಟೆಗಳ ಮೊದಲು ಯಾವುದೇ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳು ಅಥವಾ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮದ್ಯ ಅಥವಾ ಯಾವುದೇ ಮಾದಕ ದ್ರವ್ಯಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವು ಸ್ಟಾರ್ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಮದ್ಯ ಪೂರೈಸಲು ಪರವಾನಗಿ ಹೊಂದಿರುವ ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಮರು ಮತದಾನ ನಡೆಯುವ ಸಂದರ್ಭಗಳಲ್ಲಿಯೂ ಇದೇ ರೀತಿಯ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಪಿಟಿಐ ವರದಿ ಮಾಡಿದೆ.

ಮೇ 4ರ ಮತ ಎಣಿಕೆಯ ದಿನವೂ ಮದ್ಯ ನಿಷೇಧ

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಮತದಾನದ ಹಂತಗಳಲ್ಲದೆ, ಮೇ 4 ರಂದು ನಡೆಯಲಿರುವ ಮತ ಎಣಿಕೆಯ ದಿನದಂದು ಸಹ ಚುನಾವಣೆ ನಡೆದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ಡೇ ಜಾರಿಯಲ್ಲಿರಲಿದೆ. ವ್ಯಕ್ತಿಗಳು ಮದ್ಯ ಸಂಗ್ರಹಿಸುವುದರ ಮೇಲೆಯೂ ಅಬಕಾರಿ ಕಾನೂನುಗಳ ಅಡಿಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇರಿಸಲಾಗುವುದು ಎಂದು ಆಯೋಗ ಎಚ್ಚರಿಸಿದೆ.

ಚುನಾವಣಾ ವೇಳಾಪಟ್ಟಿ

ಏಪ್ರಿಲ್ 23: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನ.
ಏಪ್ರಿಲ್ 29: ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನ.
ಮೇ 4: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟ.
ಮತದಾರರ ಮೇಲೆ ಯಾವುದೇ ರೀತಿಯ ಅನಗತ್ಯ ಪ್ರಭಾವ ಬೀರದಂತೆ ತಡೆಯಲು ಮತ್ತು ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ(ಏಜೆನ್ಸೀಸ್​).