ಅನುಮತಿ ಪಡೆಯದೆ ರೋಡ್ ಶೋ ನಡೆಸಿದ ದಳಪತಿ ವಿಜಯ್
- ಏಪ್ರಿಲ್ 23 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ
- ಅನುಮತಿ ಪಡೆಯದೆ ರೋಡ್ ಶೋ ನಡೆಸಿದ ದಳಪತಿ ವಿಜಯ್
- ಟಿವಿಕೆ ಪಕ್ಷದ ಮುಖ್ಯಸ್ಥ ಜೋಸೆಫ್ ವಿಜಯ್ ಮೇಲೆ ಪ್ರಕರಣ ದಾಖಲು
ಚೆನ್ನೈ: ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನಟ, ರಾಜಕಾರಣಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಆದರೆ ಚೆನ್ನೈನಲ್ಲಿ ಅನುಮತಿ ಪಡೆಯದೆ ರೋಡ್ ಶೋ ನಡೆಸಿದ ಹಿನ್ನಲೆಯಲ್ಲಿ ವಿಜಯ್ ಮೇಲೆ ಪ್ರಕರಣ ದಾಖಲಾಗಿದೆ.
ಅನಧಿಕೃತ ರೋಡ್ ಶೋ
ಗುರುವಾರ (ಏ.16) ಚೆನ್ನೈ ಪಟ್ಟಣದ ಮೆಂಬ್ಲಮ್ ಪೊಲೀಸ್ ಠಾಣೆಯಲ್ಲಿ ವಿಜಯ್, ಬುಸ್ಸಿ ಆನಂದ್ ಮತ್ತು ಅಪ್ಪನ್ನು ಎಂಬುವವರ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಪೊಲೀಸರಿಂದ ಅನುಮತಿ ಪಡೆಯದೆ, ರೋಡ್ ಶೋ ನಡೆಸಲು ವಿಜಯ್ ಮುಂದಾಗಿದ್ದಾರೆ. ಆ ವೇಳೆ ಪೊಲೀಸರು ಇದನ್ನು ತಡೆಯಲು ಮುಂದಾದಾಗ ಸಾವಿರಾರು ಜನ ಸೇರಿದ್ದರಿಂದ ನಟ ವಿಜಯ್ ಪೊಲೀಸರ ಮಾತನ್ನು ಕೇಳಿಸಿಕೊಳ್ಳದೆ ರೋಡ್ ಶೋ ನಡೆಸಿದ್ದಾರೆ. ಆದ್ದರಿಂದ ಪೊಲೀಸರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಮಿಳುನಾಡು ಚುನಾವಣೆ
ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದ್ದು, ಇದರ ಫಲಿತಾಂಶವು ಮೇ 4 ರಂದು ಹೊರ ಬೀಳಲಿದೆ.
ಈ ಭಾರಿಯ ಚುನಾವಣೆಯಲ್ಲಿ ಆಡಳಿತರೂಢ ಡಿಎಂಕೆ ಪಕ್ಷವು ಕಾಂಗ್ರೆಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿ ಎಐಎಡಿಎಂಕೆ ಪಕ್ಷದೊಟ್ಟಿಗೆ ಈ ಭಾರಿ ಚುನಾವಣೆಯನ್ನು ಎದುರಿಸಲಿದೆ. ಚೊಚ್ಚಲ ಭಾರಿಗೆ ಚುನಾವಣೆಗೆ ಇಳಿದಿರುವ ತಮಿಳಿಗ ವೆಟ್ರಿಗ ಕಳಗಂ(ಟಿವಿಕೆ) ಪಕ್ಷ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಲಿದೆ. ಈ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಪೆರಂಬೂರು ಹಾಗೂ ತಿರುಚ್ಚಿ(ಪೂರ್ವ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ, (ಏಜನ್ಸೀಸ್).