ಡಾ.ಓಂ ತನೇಜ ಮತ್ತು ಪತ್ನಿ ಡಾ.ಇಂದಿರಾ ತನೇಜ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನಿವಾಸಿ ಭಾರತೀಯ ವೃದ್ಧ ದಂಪತಿಯನ್ನು 17 ದಿನಗಳ ಕಾಲ ಡಿಜಿಟಲ್ ಅರೆಸ್ಟ್‌ನಲ್ಲಿ(Digitally arrested) ಇರಿಸಿರುವ ಸೈಬರ್ ದುರುಳರು, ದಂಪತಿಯಿಂದ ಸುಮಾರು 14.85 ಕೋಟಿ ರೂ. ವಂಚಿಸಿದ್ದಾರೆ ಎಂದು ವರದಿಯಾಗಿದೆ.
ಡಾ.ಓಂ ತನೇಜ ಹಾಗೂ ಅವರ ಪತ್ನಿ ಡಾ.ಇಂದಿರಾ ತನೇಜ ವಂಚನೆಗೀಡಾದವರು. ಅಮೆರಿಕದಲ್ಲಿ ಸುಮಾರು 48 ವರ್ಷಗಳ ಕಾಲ ಸೇವೆಯಲ್ಲಿದ್ದ ಈ ದಂಪತಿ 2015ರಲ್ಲಿ ಭಾರತಕ್ಕೆ ಆಗಮಿಸಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ವರ್ಷ ಡಿ. 24ರಂದು ಕರೆ ಮಾಡಿದ ಸೈಬರ್ ವಂಚಕರು ಕಾನೂನು ಅಧಿಕಾರಿಗಳು ಎಂದು ಹೇಳಿ ವಂಚನೆ ಆರಂಭಿಸಿದ್ದಾರೆ. ರಾಷ್ಟ್ರೀಯ ಭದ್ರತೆ ಉಲ್ಲಂಘನೆಗೆ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದಿದ್ದಲ್ಲದೆ, ಅರೆಸ್ಟ್ ವಾರಂಟ್ ಮತ್ತು ಕ್ರಿಮಿನಲ್ ಕೇಸ್‌ಗಳ ಬೆದರಿಕೆಯೊಡ್ಡಿ ಅವರನ್ನು ಡಿಜಿಟಲ್ ಅರೆಸ್ಟ್‌ನಲ್ಲಿ ಇರಿಸಿಕೊಂಡಿದ್ದರು ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ದಂಪತಿಯನ್ನು ಡಿ.24ರಿಂದ ಜ.10ರ ವರೆಗೆ ವಿಡಿಯೋ ಕಾಲ್‌ಗಳ ಮೂಲಕ ನಿರಂತರ ನಿಗಾದಲ್ಲಿ ಇರಿಸಿಕೊಂಡಿದ್ದ ವಂಚಕರು, 8 ವಿವಿಧ ಖಾತೆಗಳಿಗೆ ಹಣ 2 ಕೋಟಿ, 1 ಕೋಟಿ ಹಂತ ಹಂತವಾಗಿ 14.85 ಕೋಟಿ ರೂ. ವರ್ಗಾಯಿಸಿಕೊಂಡಿದ್ದರು. ಪ್ರತಿ ಸಲ ಬ್ಯಾಂಕ್‌ಗೆ ಹೋದಾಗಲೂ ದೊಡ್ಡಮಟ್ಟದ ಹಣದ ವರ್ಗಾವಣೆ ಬಗ್ಗೆ ಬ್ಯಾಂಕ್‌ನವರು ವಿಚಾರಿಸಿದರೆ ಏನು ಹೇಳಬೇಕು ಎಂಬ ಸಬೂಬುಗಳನ್ನೂ ವಂಚಕರೇ ಸೂಚಿಸುತ್ತಿದ್ದರು ಎಂದು ಡಾ.ಇಂದಿರಾ ತನೇಜ ವಿವರಿಸಿದ್ದಾಗಿ ತಿಳಿಸಿದ್ದಾರೆ.
ಜ.10ರಂದು ಕರೆ ಮಾಡಿದ್ದ ವಂಚಕರು, ಆರ್‌ಬಿಐನಿಂದ ಹಣ ಹಿಂಪಾವತಿ ಆಗಲಿದೆ, ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಎಂದಿದ್ದರು. ವಿಡಿಯೋ ಕಾಲ್‌ನಲ್ಲಿದ್ದುಕೊಂಡೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿದ್ದು, ಅಲ್ಲಿ ವಂಚಕರು ಪೊಲೀಸ್ ಸಿಬ್ಬಂದಿ ಜತೆ ಕಟುವಾಗಿ ಮಾತನಾಡಿದಾಗಲೇ ವೈದ್ಯೆಗೆ ವಂಚನೆ ಅರಿವಾಗಿದೆ. ಹಣ ಹಿಂಪಾವತಿ ಭರವಸೆ ಕೂಡ ಸುಳ್ಳೆಂದು ಗೊತ್ತಾಗಿದೆ.
ತಮ್ಮ ಜೀವಮಾನದ ಉಳಿತಾಯದ ನಷ್ಟದ ನಂತರ ದಂಪತಿಗಳು ಆಘಾತಕ್ಕೊಳಗಾಗಿದ್ದು, ಈ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಾಧದ ಗಂಭೀರತೆಯನ್ನು ಉಲ್ಲೇಖಿಸಿ ತನಿಖೆಯನ್ನು ವಿಶೇಷ ಕೋಶದ ಸೈಬರ್ ಘಟಕವಾದ ಗುಪ್ತಚರ ಸಮ್ಮಿಳನ ಮತ್ತು ಕಾರ್ಯತಂತ್ರದ ಕಾರ್ಯಾಚರಣೆಗಳಿಗೆ (IFSO) ವರ್ಗಾಯಿಸಿದ್ದಾರೆ (ಏಜೆನ್ಸೀಸ್).