- 2026ರ ದ್ವಿತೀಯಾರ್ಧದಲ್ಲಿ ಜಗತ್ತಿನ ಹವಾಮಾನ ವ್ಯವಸ್ಥೆಯಲ್ಲಿ ಭಾರಿ ಏರುಪೇರು
- ಜೂನ್ ಮೂರನೇ ವಾರದಲ್ಲಿಯೂ ಇಲ್ಲ ಮಳೆಯಾರ್ಭಟ
- ಈ ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರಿಗೆ ಭಾರಿ ಸಂಕಷ್ಟ
El Nino Effect: ದಕ್ಷಿಣ ಭಾರತದಲ್ಲಿ ಈಗಾಗಲೇ ಮುಂಗಾರು ಪ್ರವೇಶಿಸಿದೆ. ಕರಾವಳಿ, ಮಲೆನಾಡು ಮತ್ತು ಹಲವು ಭಾಗಗಳಲ್ಲಿ ಧಾರಕಾರ ಅಥವಾ ಬಿರುಸಿನ ಬದಲಿಗೆ ಸಾಧಾರಣ ಮಳೆಯಾಗುತ್ತಿದೆ. ಹೀಗಿರುವಾಗಲೇ, ದೇಶದ ಜೀವನಾಡಿಯಾಗಿರುವ ಮುಂಗಾರು ಮಾರುತಕ್ಕೆ ಪ್ರಬಲ ‘ಎಲ್ ನಿನೋ’ ದೊಡ್ಡ ಅಡ್ಡಗಲ್ಲು ಆಗುವ ಮುನ್ಸೂಚನೆಗಳು ಲಭಿಸಿವೆ. ಇದು ರಾಷ್ಟ್ರಕ್ಕೆ ಬರಗಾಲದ ಆತಂಕವನ್ನು ಸೃಷ್ಟಿಸಿದೆ.
ಈ ವರ್ಷ ನೈಋತ್ಯ ಮುಂಗಾರು ತಡವಾಗಿ ಪ್ರವೇಶಿಸಿದ್ದಷ್ಟೇ ಅಲ್ಲದೆ, ಎಲ್ ನಿನೋ ಪ್ರಭಾವದಿಂದಾಗಿ ಸಂಪೂರ್ಣ ದುರ್ಬಲವಾಗಿದೆ. ಇದರ ನೇರ ಪರಿಣಾಮ ಜೂನ್ ಮೊದಲ ಎರಡು ವಾರಗಳಲ್ಲೇ ದೇಶವ್ಯಾಪಿ ಶೇ.64ರಷ್ಟು ಮಳೆ ಕೊರತೆ ಉಂಟಾಗಿದೆ. ಮುಂಬರುವ ಜುಲೈನಿಂದ ನವೆಂಬರ್‌ವರೆಗಿನ ದಿನಗಳು ದೇಶದ ಕೃಷಿ ವಲಯಕ್ಕೆ ಅತ್ಯಂತ ಸವಾಲಾಗಿರಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅನ್ನದಾತನಿಗೆ ಕಂಟಕ
ಜೂನ್ ತಿಂಗಳ ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೂ ದೇಶದ ರೈತಾಪಿ ವರ್ಗವು ಇನ್ನೂ ಬಿತ್ತನೆಗಾಗಿ ಮುಗಿಲತ್ತ ಮುಖಮಾಡಿ ಕೂರುವ ಪರಿಸ್ಥಿತಿ ಎದುರಾಗಿರುವುದು ಆತಂಕಕಾರಿ. ಸಾಮಾನ್ಯವಾಗಿ ಜೂನ್ 4ರಿಂದ 16ರ ನಡುವೆ ದೇಶದಲ್ಲಿ 5.37 ಸೆಂಟಿಮೀಟರ್ ಮಳೆಯಾಗಬೇಕಿತ್ತು. ಆದರೆ, ಆಗಿರುವುದು ಕೇವಲ 1.92 ಸೆಂಟಿಮೀಟರ್ ಮಾತ್ರ. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸದ್ಯ ಶೇ.14ರಷ್ಟು ಮಳೆ ಕೊರತೆ ದಾಖಲಾಗಿದೆ.
ಏನಿದು ಪೆಸಿಫಿಕ್ ಭೀತಿ? ಮುಂಗಾರಿಗೆ ಹೇಗೆ ಪೆಟ್ಟು?
ದೇಶದಲ್ಲಿ ಸುರಿಯುವ ಮಳೆಯಲ್ಲಿ ಶೇ.70ರಷ್ಟು ಪಾಲನ್ನು ನೈಋತ್ಯ ಮುಂಗಾರು ಮಾರುತಗಳೇ ನೀಡುತ್ತವೆ. ಆದರೆ, ಪೆಸಿಫಿಕ್ ಮಹಾಸಾಗರದ ಜಲ ಅತಿಯಾಗಿ ಬಿಸಿಯಾಗುವುದರಿಂದ ಏಳುವ ಮಾರುತಗಳು, ಭಾರತದ ಕಡೆಗೆ ಬರುವ ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತಿವೆ. ಸದ್ಯ ಜೂನ್ 2026ರಲ್ಲಿ ಕೊಂಚ ಪ್ರಭಾವ ತೋರುತ್ತಿದ್ದ ಎಲ್ ನಿನೋ, ಜುಲೈ-ಆಗಸ್ಟ್ ವೇಳೆಗೆ ಶೇ.80ರಿಂದ 90ರಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ.
37 ವರ್ಷಗಳ ಇತಿಹಾಸ ನೆನಪಿಸಿದ ಐಎಂಡಿ!
- ಇತಿಹಾಸವನ್ನು ತಿರುವಿ ಹಾಕಿದರೆ ಎಲ್ ನಿನೋ ಭಾರತಕ್ಕೆ ಕೊಟ್ಟ ಹೊಡೆತ ಸಣ್ಣದೇನಲ್ಲ
- 2009ರಲ್ಲಿ ಎಲ್ ನಿನೋ ದುರ್ಬಲವಾಗಿದ್ದರೂ, ದೇಶದಲ್ಲಿ ಸರಾಸರಿಗಿಂತ ಕೇವಲ ಶೇ.78ರಷ್ಟು ಮಳೆ ಸುರಿದಿತ್ತು.
- ಇದು 37 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಳೆಯಾದ ವರ್ಷ.
- 2015-16ರಲ್ಲಿ ತೀವ್ರಸ್ವರೂಪದ ಎಲ್ ನಿನೋ ದೇಶವನ್ನು ಭೀಕರ ಬರಗಾಲಕ್ಕೆ ದೂಡಿತ್ತು.
ದೇಶದ ಆರ್ಥಿಕತೆಗೆ, ಆಹಾರ ಭದ್ರತೆಗೆ ಆಪತ್ತು
ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಶೇ.70ರಿಂದ 80ರಷ್ಟು ಮಳೆ ಕೊರತೆ ಉಂಟಾಗಿದೆ. ದೇಶದ ಶೇ.50ರಿಂದ 60ರಷ್ಟು ಜನಸಂಖ್ಯೆಗೆ ಜೀವನಾಧಾರವಾಗಿರುವ ಕೃಷಿ ವಲಯಕ್ಕೆ ಸಂಕಷ್ಟ ಎದುರಾಗಲಿದೆ. ಅದು ಇಡೀ ರಾಷ್ಟ್ರದ ಆರ್ಥಿಕತೆಯನ್ನೇ ನಡುಗಿಸಲಿದೆ. ಈ ವರ್ಷ ದೇಶದ ಆಹಾರ ಉತ್ಪಾದನೆಯಲ್ಲಿ ಶೇ.10ರಿಂದ 15ರಷ್ಟು ಕುಸಿತವಾಗುವ ಭೀತಿ ಎದುರಾಗಿದ್ದು, ಇದು ಭಾರತದ ಆಹಾರ ಭದ್ರತೆಗೆ ದೊಡ್ಡ ಸವಾಲಾಗಬಹುದು ಎಂದು ಆರ್ಥಿಕ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಜೂನ್ 23ರ ಬಳಿಕ ಸುಧಾರಣೆ
ಜೂ.23ರ ನಂತರ ಹವಾಮಾನ ಪರಿಸ್ಥಿತಿ ಸುಧಾರಣೆಗೊಳ್ಳಲಿದ್ದು, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ಬಿಹಾರ ರಾಜ್ಯಗಳಲ್ಲಿ ಮುಂಗಾರು ಚುರುಕಾಗಲಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ ಮತ್ತು ತೆಲುಗು ರಾಜ್ಯಗಳಲ್ಲಿ ಮಳೆಯನ್ನೇ ನಂಬಿ ಒಣಭೂಮಿ ಬೇಸಾಯ ಮಾಡುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ವರ್ಷ ಸವಾಲಾಗಲಿದೆ,(ಏಜೆನ್ಸೀಸ್).