ಆಗ ಮೂರು ಈಗ ಆರು... ಎಲ್ ನಿನೊ ಎಫೆಕ್ಟ್ಗೆ ತತ್ತರಿಸಿದ ತೆಂಗಿನಮರ, ಎಳನೀರು ಪ್ರಮಾಣದಲ್ಲಿ ಭಾರಿ ಕುಸಿತ! El Nino
- ಎಲ್ ನಿನೊ ಪ್ರಹಾರಕ್ಕೆ ಎಳನೀರಿನಲ್ಲಿ ನೀರು ಕಮ್ಮಿ ವ್ಯಾಪಾರಿಗಳು ಮತ್ತು ರೈತರು ತೀವ್ರ ಕಂಗಾಲು
- ಒಂದು ಲೀಟರ್ ಎಳನೀರು ತುಂಬಿಸಲು ಈಗ ಬೇಕು ಆರು ಕಾಯಿ ವ್ಯಾಪಾರಿಗಳ ಅಳಲು
- ಬಿಸಿಲಿನ ತಾಪಕ್ಕೆ ಕಲ್ಪವೃಕ್ಷ ತೆಂಗಿನ ತೋಟಗಳು ಭಸ್ಮ ಎಳನೀರು ಸಿಹಿಯ ಬದಲು ಒಗರು
- ಎಲ್ ನಿನೊ ಎಫೆಕ್ಟ್ ನಿಂದ ಗಗನಕ್ಕೇರಿದ ಎಳನೀರು ಬೆಲೆ ಖರೀದಿ ಮಾಡಲು ಗ್ರಾಹಕರು ಹಿಂದೇಟು
El Nino : ಎಲ್ ನಿನೊ ಸೃಷ್ಟಿಸಿರುವ ಬಿಸಿಲಿನ ತಾಪ ಮತ್ತು ಮಳೆಯ ಅಭಾವವು ಕೇವಲ ನದಿ-ನಾಲೆ, ಕೆರೆ-ಕಟ್ಟೆಗಳನ್ನು ಬತ್ತಿಸುವುದು ಮಾತ್ರವಲ್ಲದೆ, ಇದೀಗ ರೈತರ ಕಲ್ಪವೃಕ್ಷ ತೆಂಗಿನ ತೋಟಗಳ ಮೇಲೂ ಭಾರಿ ಪ್ರಹಾರ ನಡೆಸಿದೆ. ಉಷ್ಣಾಂಶದ ತೀವ್ರ ಏರಿಕೆಯಿಂದಾಗಿ ಎಳನೀರಿನಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಮಾರುಕಟ್ಟೆಗೆ ಪೂರೈಕೆಯಾಗುವ ಎಳನೀರಿನ ಪ್ರಮಾಣದಲ್ಲೂ ಭಾರಿ ಅಭಾವ ಸೃಷ್ಟಿಯಾಗಿದೆ. ಪರಿಣಾಮವಾಗಿ, ಗ್ರಾಹಕರಿಂದ ವಿಪರೀತ ಬೇಡಿಕೆಯಿದ್ದರೂ ಸಹ, ಪೂರಕ ಪ್ರಮಾಣದ ಎಳನೀರು ಸಿಗದೆ ವ್ಯಾಪಾರಿಗಳು ತೀವ್ರ ನಷ್ಟ ಮತ್ತು ಆತಂಕ ಎದುರಿಸುವಂತಾಗಿದೆ.
ಹಿಂದೆಲ್ಲಾ ಒಂದು ಲೀಟರ್ ಎಳನೀರು ತುಂಬಿಸಲು ಕೇವಲ ಮೂರು ಎಳನೀರು ಕಾಯಿಗಳು ಸಾಕಾಗುತ್ತಿದ್ದವು, ಆದರೆ ಈಗ 'ಎಲ್ ನಿನೊ' ಪ್ರಭಾವದಿಂದಾಗಿ ಪ್ರತಿಯೊಂದು ಕಾಯಿಯಲ್ಲಿನ ನೀರಿನ ಪ್ರಮಾಣ ಅರ್ಧದಷ್ಟು ಕುಸಿದಿದ್ದು, ಪ್ರಸ್ತುತ ಒಂದು ಲೀಟರ್ ಬಾಟಲಿಯನ್ನು ಭರ್ತಿ ಮಾಡಲು ಬರೊಬ್ಬರಿ ಆರು ಎಳನೀರು ಕಾಯಿಗಳನ್ನು ಕೆತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಿರ್ವಹಣಾ ವೆಚ್ಚ ಹೆಚ್ಚಿ ಲಾಭ ಸಂಪೂರ್ಣವಾಗಿ ಕೈಜಾರುತ್ತಿದೆ. ಇನ್ನೊಂದೆಡೆ, ಮಾರುಕಟ್ಟೆಯಲ್ಲಿ ಎಳನೀರಿನ ಬೆಲೆ ಗಗನಕ್ಕೇರಿರುವುದರಿಂದ, ಕಾಯಿ ಚಿಕ್ಕದಾಗಿ ನೀರು ಕಡಿಮೆಯಿರುವಾಗ ಹೆಚ್ಚಿನ ಹಣ ನೀಡಿ ಖರೀದಿಸಲು ಗ್ರಾಹಕರೂ ಸಹ ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಎಳನೀರಿನಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದ್ದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಮಾರಾಟ ಮಂದಗತಿಯಲ್ಲಿ ಸಾಗಿರುವುದು ತಮ್ಮ ವ್ಯಾಪಾರದ ಮೇಲೆ ತೀವ್ರ ಹೊಡೆತ ನೀಡಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಎಲ್ ನಿನೊ' ಪ್ರಭಾವ ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ ಎಳನೀರಿನ ಲಭ್ಯತೆ ಮತ್ತಷ್ಟು ಕಡಿಮೆಯಾಗಿ, ರೈತರು ಹಾಗೂ ವ್ಯಾಪಾರಿಗಳಿಬ್ಬರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ನೈಸರ್ಗಿಕ ಹವಾಮಾನ ಪರಿಸ್ಥಿತಿ ಬೇಗನೇ ಯಥಾಸ್ಥಿತಿಗೆ ಮರಳಿ ತಮಗೆ ಕೊಂಚ ಸಮಾಧಾನ ತರಬಹುದು ಎಂಬ ನಿರೀಕ್ಷೆಯಲ್ಲಿ ತೆಂಗು ಬೆಳೆಗಾರರು ಮತ್ತು ವ್ಯಾಪಾರಿಗಳಿದ್ದಾರೆ.
ಎಳನೀರಿನ ಪ್ರಮಾಣದ ಮೇಲೆ ಎಲ್ ನಿನೊ ಹೇಗೆ ಪರಿಣಾಮ ಬೀರುತ್ತೆ?
ತೆಂಗಿನ ಮರಕ್ಕೆ ಪ್ರತಿದಿನ ಅಧಿಕ ಪ್ರಮಾಣದ ನೀರು ಮತ್ತು ತೇವಾಂಶದ ಅಗತ್ಯವಿರುತ್ತದೆ. ಮಳೆ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಾಗ ಅಥವಾ ವಾತಾವರಣದ ತಾಪಮಾನ ಹೆಚ್ಚಾದಾಗ, ಮರಕ್ಕೆ ಬೇರುಗಳಿಂದ ಸರಿಯಾಗಿ ನೀರನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಎಳನೀರಿನ ಕಾಯಿಯೊಳಗೆ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಅಲ್ಲದೆ, ಪೂರ್ಣ ಪ್ರಮಾಣದಲ್ಲಿ ಬೆಳೆಯಬೇಕಾದ ಕಾಯಿಗಳು ಸಣ್ಣದಾಗುತ್ತವೆ ಅಥವಾ ಬೋಳು ಬೀಳುತ್ತದೆ.
ಇನ್ನೂ ಅತಿಯಾದ ಬಿಸಿಲು ಮತ್ತು ನೀರಿನ ಅಭಾವದಿಂದಾಗಿ ಎಳನೀರಿನ ರಾಸಾಯನಿಕ ಸಂಯೋಜನೆಯಲ್ಲಿಯೂ ವ್ಯತ್ಯಾಸ ಉಂಟಾಗುತ್ತದೆ. ಮರಕ್ಕೆ ಸರಿಯಾದ ನೀರು ಸಿಗದಿದ್ದಾಗ ದ್ಯುತಿಸಂಶ್ಲೇಷಣೆ ಕ್ರಿಯೆ ಕುಂಠಿತಗೊಂಡು, ನೀರಿನಲ್ಲಿರಬೇಕಾದ ನೈಸರ್ಗಿಕ ಸಿಹಿ ಹಾಗೂ ಖನಿಜಗಳ ಸಮತೋಲನ ಏರುಪೇರಾಗುತ್ತದೆ. ತೇವಾಂಶ ಕಡಿಮೆಯಾದಾಗ ನೀರಿನಲ್ಲಿರುವ ಸೋಡಿಯಂ ಮತ್ತು ಇತರ ಲವಣಗಳ ಸಾಂದ್ರತೆ ಹೆಚ್ಚಾಗಿ, ಎಳನೀರು ಸಿಹಿಯಾಗಿರುವ ಬದಲು ಸ್ವಲ್ಪ ಉಪ್ಪು ಅಥವಾ ಒಗರು ರುಚಿಗೆ ತಿರುಗಬಹುದು.
ಒಟ್ಟಾರೆಯಾಗಿ, ಮಳೆಯಿಲ್ಲದೆ ಉಷ್ಣಾಂಶ ಹೆಚ್ಚಾದಾಗ ಎಳನೀರಿನ ಸಾಂದ್ರತೆ ಕಡಿಮೆಯಾಗಿ ನೀರು ಕಡಿಮೆಯಾಗುತ್ತದೆ, ಗಾತ್ರ ಚಿಕ್ಕದಾಗುತ್ತದೆ ಹಾಗೂ ರುಚಿಯಲ್ಲಿ ವ್ಯತ್ಯಾಸವಾಗುತ್ತದೆ, (ಏಜೆನ್ಸೀಸ್).