Eknath Shinde | ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ 
ದೇಶ

ಬಾಳಾಸಾಹೇಬ್​ರ ಸಿದ್ಧಾಂತ ಕೈ ಬಿಟ್ಟಾಗ..ಇಲ್ಲಿದೆ ನೋಡಿ ಅಘಾಡಿ ಸರ್ಕಾರ ಪತನದ ಅಸಲಿ ಕಹಾನಿ | Eknath Shinde

ಮುಂಬೈ: ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯಲು ಅಧಿಕಾರದಲ್ಲಿ ಬದಲಾವಣೆ ತಂದಿದ್ದೇನೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.
ಮಂಗಳವಾರ ಸತಾರಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಿಂಧೆ, ಬಾಳಾಸಾಹೇಬ್ ಠಾಕ್ರೆ ಚಿಂತನೆಗಳು ಮತ್ತು ತತ್ವಗಳ ಮೇಲೆ ಶಿವಸೇನೆ ಮುಂದುವರಿಯುತ್ತಿದೆ, ಅವರ ಸಿದ್ಧಾಂತವನ್ನು ಕೈಬಿಟ್ಟು ವಿರುದ್ಧವಾದ ವಿಚಾರಗಳನ್ನು ಪ್ರಚಾರ ಮಾಡಿದಾಗ, ಈ ಸ್ವಾಭಿಮಾನಿ ಏಕನಾಥ್ ಶಿಂಧೆ ಸರ್ಕಾರವನ್ನು ಉರುಳಿಸಿ ಮಹಾಯುತಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಇದನ್ನು ಮಾಡಲು ಧೈರ್ಯ ಬೇಕು ಎಂದರು.
ಸತಾರ ಭೂಮಿ ಛತ್ರಪತಿ ಶಿವಾಜಿ ಮಹಾರಾಜರಿಂದ ಆಶೀರ್ವದಿಸಲ್ಪಟ್ಟಿದ್ದು, ಇಲ್ಲಿನ ಪ್ರತಿ ಮಣ್ಣಿನಲ್ಲೂ ದೇಶಭಕ್ತಿ ತುಂಬಿದೆ, ಸ್ವಾಭಿಮಾನವನ್ನು ಒತ್ತೆ ಇಡುವ ಪ್ರಯತ್ನಗಳು ನಡೆದಾಗ, ನಾನು ದೃಢವಾಗಿ ನಿಂತು ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತವನ್ನು ಅನುಸರಿಸುವಂತಹ ಸರ್ಕಾರವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಿದೆ ಎಂದು ಹೇಳಿದರು.

ಶಿವಸೇನೆ ವಿಭಜನೆ

ಶಿವಸೇನೆಯೊಳಗಿನ ಆಂತರಿಕ ದಂಗೆ ಮತ್ತು ಬದಲಾಗುತ್ತಿರುವ ರಾಜಕೀಯ ಮೈತ್ರಿಗಳಿಂದಾಗಿ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಜೂನ್ 2022 ರಲ್ಲಿ ಪತನಗೊಂಡಿತು. ಪಕ್ಷದ ಹಿರಿಯ ನಾಯಕ ಏಕನಾಥ್ ಶಿಂಧೆ ಮತ್ತು 44 ಶಾಸಕರ ದೊಡ್ಡ ಗುಂಪಿನೊಂದಿಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು.
2019 ರಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಲು ಕಾಂಗ್ರೆಸ್ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಪಕ್ಷವು ತನ್ನ ಮೂಲ ಸಿದ್ಧಾಂತವನ್ನು ರಾಜಿ ಮಾಡಿಕೊಂಡಿದೆ ಎಂದು ಶಿಂಧೆ ಆರೋಪಿಸಿದರು.
ಬಂಡಾಯ ಎದ್ದಂತಹ ಶಾಸಕರುಗಳು ತಾವು ನಿಜವಾದ ಶಿವಸೇನೆಯನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಂಡು ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡರು. ರಾಜಕೀಯ ಅನಿಶ್ಚಿತತೆಯ ಕಾರಣ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಆದೇಶಿಸಿದರು. ಪ್ರಕ್ರಿಯೆ ನಡೆಯುವ ಮುನ್ನವೇ ಅಂದಿನ ಸಿಎಂ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಏಕನಾಥ್ ಶಿಂಧೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಂಬಲದೊಂದಿಗೆ ಹೊಸ ಸರ್ಕಾರವನ್ನು ರಚಿಸಿ, ಮುಖ್ಯಮಂತ್ರಿಯಾದರು(ಏಜೆನ್ಸೀಸ್​​).