Eknath Shinde | ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ 
ದೇಶ

ಅಭಿವೃದ್ಧಿ ವಿರೋಧಿಗಳಿಗೆ ಜನರೇ ತಕ್ಕ ಪಾಠ ಕಲಿಸಿದ್ದಾರೆ..ಪ್ರಗತಿಗಿರುವ ಅಡೆತಡೆಗಳನ್ನು ಮತದಾರರು ಇಷ್ಟಪಡಲ್ಲ ಅಂದ್ರು ಡಿಸಿಎಂ ಶಿಂಧೆ | Eknath Shinde

ಮುಂಬೈ: ಅಭಿವೃದ್ಧಿ ವಿರೋಧಿಸಿದವರನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ, ಮಹಾಯುತಿ ರಾಜ್ಯದ ಬೆಳವಣಿಗೆಗೆ ವೇಗ ನೀಡುತ್ತದೆ ಎಂದಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಸ್ಪಷ್ಟ ಜನಾದೇಶ ನೀಡಿರುವ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.
ಥಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಸಿಎಂ ಶಿಂಧೆ, ಮುಂಬೈನಲ್ಲಿ ಮಹಾಯುತಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸುತ್ತಾ ಭಾರತದ ಆರ್ಥಿಕ ರಾಜಧಾನಿಯ ಪಾಲಿಕೆಯ ಮೇಯರ್​ ಕುರ್ಚಿಯನ್ನು ಈ ಬಾರಿ ಮೈತ್ರಿಕೂಟದ ಅಭ್ಯರ್ಥಿಯೊಬ್ಬರು ಅಲಂಕರಿಸಲಿದ್ದಾರೆ ಎಂದರು.
ಕಳೆದ ಮೂರುವರೆ ವರ್ಷಗಳಲ್ಲಿ, ನಮ್ಮ ಮೈತ್ರಿ ಸರ್ಕಾರ ಮುಂಬೈ ನಗರದ ಅಭಿವೃದ್ಧಿಗೆ ಶ್ರಮಿಸಿದೆ. ಪ್ರಧಾನಿ ಮುಂಬೈಗೆ ಭೇಟಿ ನೀಡಿದಾಗಲೆಲ್ಲಾ ಮುಂಬೈ ಅಂತರರಾಷ್ಟ್ರೀಯ ನಗರವಾಗಬೇಕೆಂದು ಹೇಳುತ್ತಿದ್ದರು. ನಾವು ಮುಂಬೈಯನ್ನು ಗುಂಡಿ ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತಗೊಳಿಸುತ್ತೇವೆ. ಬಾಳಾಸಾಹೇಬ್ ಠಾಕ್ರೆ ಆಪ್ಲಾ ದವಾಖಾನಾವನ್ನು ಮೇಲ್ದರ್ಜೆಗೇರಿಸುತ್ತೇವೆ ಎಂದು ಭರವಸೆ ನೀಡಿದರು.
2022 ರಲ್ಲಿ ಅವಿಭಜಿತ ಶಿವಸೇನೆಯಲ್ಲಿನ ವಿಭಜನೆಯ ಬಳಿಕ ಪಕ್ಷವು ಸತತ ಪಕ್ಷಾಂತರಗಳಿಗೆ ಸಾಕ್ಷಿಯಾಗಿದ್ದು, 2017 ರಲ್ಲಿ ಆಯ್ಕೆಯಾದ ಅವಿಭಜಿತ ಶಿವಸೇನೆಯ 84 ಬಿಎಂಸಿ ಕಾರ್ಪೊರೇಟರ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಸೇರ್ಪಡೆಗೊಂಡರು, ಇದು ಉದ್ಧವ್ ಠಾಕ್ರೆ ಬೆಂಬಲದ ನೆಲೆಯನ್ನು ಕ್ಷೀಣಿಸುವಂತೆ ಮಾಡಿತು. ದೊಡ್ಡ ಹೊಡೆತ ತಿಂದರೂ ಸುಧಾರಿಸಿಕೊಂಡ ಉದ್ಧವ್,​ ಹೊಸ ತಂಡ ರಚಿಸಿ ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಸಿಎಂ ಫಡ್ನವೀಸ್ ರಿಯಾಕ್ಷನ್​

ರಾಜ್ಯದ 29 ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಜನರು ಪ್ರಾಮಾಣಿಕತೆ ಮತ್ತು ಅಭಿವೃದ್ಧಿಯನ್ನು ಬಯಸಿದ್ದರಿಂದ ಬಿಜೆಪಿ ನೇತೃತ್ವದ ಮಹಾಯುತಿ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಸಂಭ್ರಮಾಚರಣೆಯಲ್ಲಿ ಮಾತನಾಡಿದ ಸಿಎಂ ಫಡ್ನವೀಸ್​, ಮುಂಬೈ ಸೇರಿದಂತೆ 29 ಮಹಾನಗರ ಪಾಲಿಕೆಗಳ ಪೈಕಿ 25ರಲ್ಲಿ ಮಹಾಯುತಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅಭಿನಂದನೆ

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ಮೋದಿ, ಜನರು ಪ್ರಗತಿಗೆ ವೇಗ ನೀಡಲು ಮತ್ತು ರಾಜ್ಯವು ಸಂಬಂಧಿಸಿರುವ ಅದ್ಭುತ ಸಂಸ್ಕೃತಿಯನ್ನು ಆಚರಿಸಲು ತಮ್ಮ ಒಂದು ಮತವನ್ನು ಮೀಸಲಿಟ್ಟಿದ್ದಾರೆ ಎಂದರು.
ಮಹಾರಾಷ್ಟ್ರದಾದ್ಯಂತ ಜನರ ನಡುವೆ ಅವಿಶ್ರಾಂತವಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ನಮ್ಮ ಮೈತ್ರಿಕೂಟದ ಹಿಂದಿನ ಸಾಧನೆಗಳ ಬಗ್ಗೆ ಮಾತನಾಡಿದರು, ಮುಂಬರುವ ಕಾಲಕ್ಕೆ ನಮ್ಮ ದೃಷ್ಟಿಕೋನವನ್ನು ರಾಜ್ಯಕ್ಕೆ ಎತ್ತಿ ತೋರಿಸಿದರು ಮತ್ತು ವಿರೋಧ ಪಕ್ಷದ ಸುಳ್ಳುಗಳನ್ನು ಪರಿಣಾಮಕಾರಿಯಾಗಿ ಎದುರಿಸಿದರು. ಅವರೆಲ್ಲರಿಗೂ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್​).