ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸುವೇಂದು ಅಧಿಕಾರಿ ನೇತೃತ್ವದ ಭಾರತೀಯ ಜನತಾ ಪಕ್ಷದ (BJP) ಸರ್ಕಾರಕ್ಕೆ ಈಗ ಮೊದಲ ಭಾರಿ ರಾಜಕೀಯ ಹಾಗೂ ಧಾರ್ಮಿಕ ಸವಾಲು ಎದುರಾಗಿದೆ.
ಮುಂಬರುವ ಈದ್ ಅಲ್-ಅಧಾ (ಬಕ್ರೀದ್) ಹಬ್ಬದ(EidAlAdha) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಠಿಣ ಗೋಹತ್ಯೆ ನಿಯಮಗಳ ವಿರುದ್ಧ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಮ್ ಜನತಾ ಉನ್ನಯನ್ ಪಾರ್ಟಿ (AJUP) ಮುಖ್ಯಸ್ಥ ಹಾಗೂ ಶಾಸಕ ಹುಮಾಯೂನ್ ಕಬೀರ್ ಅವರು ಸರ್ಕಾರದ ನಿರ್ಬಂಧಗಳನ್ನು ಬಹಿರಂಗವಾಗಿ ಪ್ರಶ್ನಿಸಿದ್ದು, ಯಾವುದೇ ಕಾರಣಕ್ಕೂ ಈದ್ ಕುರ್ಬಾನಿ (ಆಚರಣೆ) ನಿಲ್ಲುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ (TMC) ಶಾಸಕ ಅಖ್ರುಜ್ಜಮಾನ್ ಈ ಹೊಸ ನಿಯಮಾವಳಿಗಳನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
1,400 ವರ್ಷಗಳ ಸಂಪ್ರದಾಯ ನಿಲ್ಲಲ್ಲ - ಕಬೀರ್
ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶಾಸಕ ಹುಮಾಯೂನ್ ಕಬೀರ್, "ಕುರ್ಬಾನಿ ಎಂಬುದು ಇಸ್ಲಾಂ ಧರ್ಮದಲ್ಲಿ ಕಳೆದ 1,400 ವರ್ಷಗಳಿಂದ ನಡೆದುಕೊಂಡು ಬಂದಿರುವ ಪವಿತ್ರ ಸಂಪ್ರದಾಯವಾಗಿದೆ. ಈ ಜಗತ್ತು ಇರುವವರೆಗೂ ಇದು ಮುಂದುವರಿಯುತ್ತದೆ. ಮುಸ್ಲಿಮರು ಗೋಮಾಂಸ ತಿನ್ನಬಾರದು ಎಂದು ನಿಯಮ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ, ಆದರೆ ಧಾರ್ಮಿಕ ಆಚರಣೆಯಾದ ಕುರ್ಬಾನಿಯಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಒಪ್ಪುವುದಿಲ್ಲ ಮತ್ತು ಯಾವುದೇ ನಿರ್ಬಂಧಗಳಿಗೆ ನಾವು ಕಿವಿಗೊಡುವುದಿಲ್ಲ" ಎಂದು ಗುಡುಗಿದ್ದಾರೆ. ಈ ಹಿಂದೆ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಮಂತ್ರಿಯಾಗಿದ್ದ ಕಬೀರ್, ಬಂಗಾಳದಲ್ಲಿ ಬಾಬರಿ ಮಸೀದಿ ನಿರ್ಮಾಣದ ಪ್ರಸ್ತಾಪ ಮಾಡಿ ಟಿಎಂಸಿಯಿಂದ ಉಚ್ಚಾಟನೆಗೊಂಡಿದ್ದರು. ಆ ನಂತರ ಎಜೆಯುಪಿ ಪಕ್ಷ ಕಟ್ಟಿ 2026ರ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ವಿವಾದ
ಟಿಎಂಸಿ ಶಾಸಕ ಅಖ್ರುಜ್ಜಮಾನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಸರ್ಕಾರದ ಹೊಸ ನಿಯಮಗಳು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿವೆ ಎಂದು ವಾದಿಸಿದ್ದಾರೆ. ಟಿಎಂಸಿ ಸಂಸದೆಯೂ ಆಗಿರುವ ವಕೀಲೆ ಮಹುವಾ ಮೊಯಿತ್ರಾ ಅವರು ಕೋರ್ಟ್‌ನಲ್ಲಿ ವಾದ ಮಂಡಿಸಿ, "ಸರ್ಕಾರದ ಈ ದಿಢೀರ್ ನಿರ್ಧಾರದಿಂದಾಗಿ ಜಾನುವಾರು ಸಾಕಾಣಿಕೆಯನ್ನೇ ನಂಬಿಕೊಂಡಿರುವ ಬಡ ರೈತರು ಮತ್ತು ವ್ಯಾಪಾರಿಗಳಿಗೆ ಭಾರಿ ಆರ್ಥಿಕ ನಷ್ಟವಾಗಲಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಿಪಿಐ(ಎಂಎಲ್) ಪಕ್ಷವೂ ಕೂಡ ಈ ನಿಯಮಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಇದರಿಂದ ಹಿಂದೂ ಧರ್ಮದ ಜಾನುವಾರು ವ್ಯಾಪಾರಿಗಳಿಗೂ ಹೊಡೆತ ಬೀಳಲಿದೆ ಎಂದು ವಾದಿಸಿದೆ. ಸದ್ಯ ಹೈಕೋರ್ಟ್ ಈ ಅರ್ಜಿಗಳ ಮೇಲಿನ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಸರ್ಕಾರದ ಸಮರ್ಥನೆ ಮತ್ತು ಕಠಿಣ ನಿಯಮಗಳು
ಈ ನಡುವೆ, ಪಶ್ಚಿಮ ಬಂಗಾಳದ ಪ್ರಾಣಿ ಸಂಪನ್ಮೂಲ ಅಭಿವೃದ್ಧಿ ಸಚಿವ ಹಾಗೂ ಬಿಜೆಪಿ ನಾಯಕ ದಿಲೀಪ್ ಘೋಷ್ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಜಾನುವಾರು ಹತ್ಯೆ ನಿಯಂತ್ರಣ ಕಾಯ್ದೆಯನ್ನು ಧಾರ್ಮಿಕ ಆಚರಣೆಗಳಿಗೆ ಲಿಂಕ್ ಮಾಡುವುದು ತಪ್ಪು. ದೇಶದ ಕಾನೂನಿಗೆ ಗೌರವ ನೀಡುವುದು ಎಲ್ಲರ ಕರ್ತವ್ಯ" ಎಂದಿದ್ದಾರೆ. ಸರ್ಕಾರದ ಹೊಸ ನೋಟಿಸ್ ಪ್ರಕಾರ, 1950ರ ಪಶ್ಚಿಮ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆಯನ್ವಯ 14 ವರ್ಷ ಮೇಲ್ಪಟ್ಟ, ಕೆಲಸಕ್ಕೆ ಬಾರದ ಅಥವಾ ತೀವ್ರವಾಗಿ ಗಾಯಗೊಂಡ ಜಾನುವಾರುಗಳಿಗೆ ಮಾತ್ರ ಪಶುವೈದ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜಂಟಿಯಾಗಿ ಲಿಖಿತ ಪ್ರಮಾಣಪತ್ರ ನೀಡಿದ ನಂತರವೇ ಹತ್ಯೆ ಮಾಡಲು ಅವಕಾಶವಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದ್ದು, ನಿಯಮ ಮೀರಿದರೆ 6 ತಿಂಗಳ ಜೈಲು ಮತ್ತು ದಂಡ ವಿಧಿಸಲಾಗುತ್ತದೆ.
ಸಾಮರಸ್ಯಕ್ಕೆ ಕರೆ ನೀಡಿದ ಮುಸ್ಲಿಂ ಧರ್ಮಗುರುಗಳು
ರಾಜಕೀಯ ನಾಯಕರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದರೆ, ಕೋಲ್ಕತ್ತಾದ ಪ್ರಸಿದ್ಧ ನಾಖೋಡಾ ಮಸೀದಿಯ ಇಮಾಮ್ ಮೌಲಾನಾ ಮೊಹಮ್ಮದ್ ಶಫೀಕ್ ಖಾಸ್ಮಿ ಮತ್ತು ಫುರ್ಫುರಾ ಷರೀಫ್‌ನ ಪೀರ್‌ಜಾದಾ ತೋಹಾ ಸಿದ್ದಿಕಿ ಸೇರಿದಂತೆ ಹಲವು ಪ್ರಮುಖ ಮುಸ್ಲಿಂ ಧರ್ಮಗುರುಗಳು ಸಮುದಾಯಕ್ಕೆ ವಿಭಿನ್ನ ಮತ್ತು ಶಾಂತಿಯುತ ಕರೆ ನೀಡಿದ್ದಾರೆ. "ನಮ್ಮ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದು ನಮ್ಮ ಕರ್ತವ್ಯ. ಗೋಹತ್ಯೆಯಿಂದ ಸಮಾಜದಲ್ಲಿ ಉದ್ವಿಗ್ನತೆ ಮತ್ತು ವಿವಾದ ಸೃಷ್ಟಿಯಾಗುವುದನ್ನು ತಡೆಯಲು ಈ ಬಾರಿ ಬಕ್ರೀದ್ ಹಬ್ಬಕ್ಕೆ ಗೋವಿನ ಬಲಿ ನೀಡಬೇಡಿ. ಅದರ ಬದಲು ಆಡು ಅಥವಾ ಇಸ್ಲಾಂ ಧರ್ಮದಲ್ಲಿ ಅನುಮತಿಸಲಾದ ಇತರ ಪ್ರಾಣಿಗಳನ್ನು ಕುರ್ಬಾನಿ ನೀಡಿ" ಎಂದು ಅವರು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಲು ಸಾಧ್ಯವಾಗದಿದ್ದರೆ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ, ಬೀಫ್ ರಫ್ತನ್ನು ಸಂಪೂರ್ಣ ನಿಷೇಧಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ಹೊಸ ಬಿಜೆಪಿ ಸರ್ಕಾರಕ್ಕೆ ಈ ಹಬ್ಬದ ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ,(ಏಜೆನ್ಸೀಸ್).