Abhishek Banerjee > ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಕಲ್ಲು, ಮೊಟ್ಟೆ ತೂರಾಟ 
ದೇಶ

ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಕಲ್ಲು, ಮೊಟ್ಟೆ ತೂರಾಟ; ಹೆಲ್ಮೆಟ್ ಧರಿಸಿ ತಪ್ಪಿಸಿಕೊಂಡ ಟಿಎಂಸಿ ನಾಯಕ | Abhishek Banerjee

ಕೊಲ್ಕತ್ತಾ: ಚುನಾವಣೋತ್ತರ ಹಿಂಸಾಚಾರಕ್ಕೆ ತುತ್ತಾದ ಕುಟುಂಬಗಳನ್ನು ಭೇಟಿ ಮಾಡಲು ಶನಿವಾರ ಪಶ್ಚಿಮ ಬಂಗಾಳದ ಸೋನಾರ್‌ಪುರಕ್ಕೆ ತೆರಳಿದ್ದ ತೃಣಮೂಲ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಮೇಲೆ ಮೊಟ್ಟೆ ಮತ್ತು ಕಲ್ಲುಗಳಿಂದ ದಾಳಿ ನಡೆಸಲಾಗಿದೆ. ದಾಳಿಯ ತೀವ್ರತೆಯಿಂದಾಗಿ, ಭದ್ರತಾ ಸಿಬ್ಬಂದಿ ಅಭಿಷೇಕ್ ಅವರನ್ನು ಹೆಲ್ಮೆಟ್ ನೀಡಿ ಅಲ್ಲಿಂದ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.
ಈ ಘಟನೆಯ ಸಂದರ್ಭದಲ್ಲಿ, ಸ್ಥಳೀಯರು ಬ್ಯಾನರ್ಜಿ ವಿರುದ್ಧ ಚೋರ್ ಚೋರ್ (ಕಳ್ಳ ಕಳ್ಳ) ಎಂಬ ಘೋಷಣೆಗಳನ್ನು ಕೂಗಿದ್ದಾರೆ ಎಂದು ತಿಳಿದುಬಂದಿದ್ದು, ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದು ಸ್ಥಳದಿಂದ ಕರೆದೊಯ್ದಿದ್ದಾರೆ.
ಇದು ಬಿಜೆಪಿ ಪ್ರೇರಿತ ದಾಳಿ ಎಂದು ಬ್ಯಾನರ್ಜಿ ಆರೋಪ
ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಬ್ಯಾನರ್ಜಿ, ಇದೆಲ್ಲವೂ ಬಿಜೆಪಿ ಪ್ರಾಯೋಜಿತ ಘಟನೆಯಾಗಿದ್ದು, ಅವರು ಏನು ಮಾಡಿದ್ದಾರೆ ಎಂಬುದನ್ನು ನೋಡಿ. ಇದು ಅವರ ಪ್ರಜಾಪ್ರಭುತ್ವದ ಉದಾಹರಣೆ. ಚುನಾವಣೆ ಮುಗಿದು ತಿಂಗಳು ಕೂಡ ಕಳೆದಿಲ್ಲ, ಅಷ್ಟರಲ್ಲಿಯೇ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಪೊಲೀಸರು ಎಲ್ಲಿಯೂ ಕಾಣಿಸುತ್ತಿಲ್ಲ. ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಸಹ ಸೂಕ್ತ ಭದ್ರತೆಯನ್ನು ಒದಗಿಸಿಲ್ಲ, ಪೊಲೀಸರು ಇಲ್ಲಿ ಭದ್ರತೆಯನ್ನು ಖಚಿತಪಡಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದರು.
ದಾಳಿಕೋರರು ನನ್ನನ್ನು ಕೊಲ್ಲಲು ಬಯಸಿದ್ದಾರೆ, ಇಡೀ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದ್ದು, ನಾವು ಖಂಡಿತವಾಗಿಯೂ ಈ ಬಗ್ಗೆ ಹೈಕೋರ್ಟ್, ರಾಜ್ಯಪಾಲರ ಗಮನಕ್ಕೆ ತರುತ್ತೇವೆ. ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ತಿಳಿಸಿದರು. ತಮಗೆ ಗಂಭೀರ ಗಾಯವಾಗುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿರುವುದಾಗಿ ಹೇಳಿಕೊಂಡ ಬ್ಯಾನರ್ಜಿ, ಅದೃಷ್ಟವಶಾತ್ ನಾನು ಹೆಲ್ಮೆಟ್ ಧರಿಸಿದ್ದರಿಂದ ನನ್ನ ತಲೆಗೆ ಯಾವುದೇ ಅಪಾಯವಾಗಿಲ್ಲ. ಆದರೆ, ಅವರು ನನ್ನ ಬಟ್ಟೆಗಳನ್ನು ಹರಿದು, ಕನ್ನಡಕವನ್ನು ಒಡೆದು ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳು ಶನಿವಾರ ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತ್ತಾ ನಿವಾಸಕ್ಕೆ ಭೇಟಿ ನೀಡಿ, ಜೂನ್ 1 ರಂದು ಪಶ್ಚಿಮ ಬಂಗಾಳ ಪೊಲೀಸ್ ಪ್ರಧಾನ ಕಚೇರಿಯಾದ ಭವಾನಿ ಭವನದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳು ಕೋಲ್ಕತ್ತಾದ ಕಾಳೀಘಾಟ್ ಪ್ರದೇಶದಲ್ಲಿರುವ ಬ್ಯಾನರ್ಜಿ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದು, ಸಮನ್ಸ್‌ನ ವಿವರಗಳನ್ನು ಅಧಿಕಾರಿಗಳು ಇನ್ನು ಬಹಿರಂಗಪಡಿಸದಿದ್ದರೂ, ಸೋಮವಾರ ಹಾಜರಾಗಲು ನಿರ್ದೇಶನ ನೀಡಲಾಗಿದೆ. ಟಿಎಂಸಿ ನಾಯಕನಿಗೆ ಲಿಂಕ್ ಮಾಡಲಾದ ಹಲವಾರು ಆಸ್ತಿಗಳಲ್ಲಿ ಅನಧಿಕೃತ ನಿರ್ಮಾಣ ನಡೆದಿದೆ ಎಂಬ ಆರೋಪದ ಮೇಲೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ನೀಡಿದ ನೋಟಿಸ್‌ಗಳ ಸುತ್ತಲಿನ ವಿವಾದದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ(ಏಜೆನ್ಸೀಸ್​).