ಇರಾನ್ ಯುದ್ಧದ ಎಫೆಕ್ಟ್!: ಒಂದೇ ದಿನದಲ್ಲಿ 840 ಅಂಕ ಕುಸಿದ ಸೆನ್ಸೆಕ್ಸ್, 23,100 ರ ಗಡಿಗಿಂತ ಕೆಳಕ್ಕೆ ಜಾರಿದ ನಿಫ್ಟಿ!  
ದೇಶ

ಇರಾನ್ ಯುದ್ಧದ ಎಫೆಕ್ಟ್!: ಒಂದೇ ದಿನದಲ್ಲಿ 840 ಅಂಕ ಕುಸಿದ ಸೆನ್ಸೆಕ್ಸ್, 23,100 ರ ಗಡಿಗಿಂತ ಕೆಳಕ್ಕೆ ಜಾರಿದ ನಿಫ್ಟಿ! Share Market Crash

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಜ್ವಾಲೆ ಮತ್ತು ಜಾಗತಿಕ ಮಾರುಕಟ್ಟೆಯ ತಲ್ಲಣಗಳು ಭಾರತೀಯ ಷೇರು ಮಾರುಕಟ್ಟೆಯ(Share Market Crash) ಮೇಲೆ ಭೀಕರ ಪ್ರಭಾವ ಬೀರಿವೆ. ವಾರದ ಮೊದಲ ದಿನವಾದ ಸೋಮವಾರ (ಜೂನ್ 8) ವಹಿವಾಟು ಆರಂಭವಾಗುತ್ತಿದ್ದಂತೆಯೇ ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದ್ದು, ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್' ಬರೋಬ್ಬರಿ 840 ಅಂಕಗಳ ಭಾರಿ ಕುಸಿತ ಕಂಡು 73,403.06 ಕ್ಕೆ ತಲುಪಿತು. ಮತ್ತೊಂದೆಡೆ, ರಾಷ್ಟ್ರೀಯ ಷೇರು ಸೂಚ್ಯಂಕ 'ನಿಫ್ಟಿ' ಕೂಡ 290 ಅಂಕಗಳಷ್ಟು ಕುಸಿದು 23,076.65 ರ ಗಡಿಗೆ ಜಾರಿತು.
ಕೇವಲ ದೊಡ್ಡ ಕಂಪನಿಗಳು ಮಾತ್ರವಲ್ಲದೆ, ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳೂ ಭಾರಿ ಮಾರಾಟದ ಒತ್ತಡಕ್ಕೆ ಸಿಲುಕಿದವು. ಮಾರುಕಟ್ಟೆಯ ಆತಂಕವನ್ನು ಅಳೆಯುವ 'ಇಂಡಿಯಾ ವಿಐಎಕ್ಸ್' ಸೂಚ್ಯಂಕ ಶೇ.10 ಕ್ಕಿಂತ ಹೆಚ್ಚು ಜಿಗಿದು 17.40 ಕ್ಕೆ ತಲುಪಿದ್ದು, ಮಾರುಕಟ್ಟೆಯಲ್ಲಿ ತೀವ್ರ ಏರಿಳಿತ ಇರುವುದನ್ನು ಸಾಬೀತುಪಡಿಸಿದೆ.

ಮಾರುಕಟ್ಟೆ ದಿಢೀರ್ ಕುಸಿಯಲು ಕಾರಣಗಳೇನು?

1. ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಭೀತಿ:

ಬೈರೂತ್​ ಮೇಲಿನ ಇಸ್ರೇಲ್‌ನ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದು, ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿದೆ. ಈ ಜಾಗತಿಕ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ತಮ್ಮ ಹಣವನ್ನು ಹಿಂಪಡೆಯುತ್ತಿದ್ದಾರೆ.

2. ಗಗನಕ್ಕೇರಿದ ಕಚ್ಚಾ ತೈಲ ಬೆಲೆ:

ಯುದ್ಧದ ವಾತಾವರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ 96.59 ಡಾಲರ್‌ಗೆ ಏರಿಕೆಯಾಗಿದೆ. ಭಾರತವು ತನ್ನ ಬಳಕೆಯ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಈ ಬೆಲೆ ಏರಿಕೆ ದೇಶದ ಆರ್ಥಿಕತೆ ಮತ್ತು ಹಣದುಬ್ಬರದ ಮೇಲೆ ನೇರ ಹೊಡೆತ ನೀಡಲಿದೆ.

3. ಜಾಗತಿಕ ಮಾರುಕಟ್ಟೆಗಳ ಪತನ

ಕಳೆದ ಶುಕ್ರವಾರ ಅಮೆರಿಕದ ನಾಸ್ಡಾಕ್ ಮಾರುಕಟ್ಟೆ ಶೇ. 4.18 ರಷ್ಟು ಕುಸಿದಿತ್ತು. ಇದರ ಬೆನ್ನಲ್ಲೇ ಇಂದು ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ಜಪಾನ್‌ನ ನಿಕ್ಕಿ (ಶೇ. 4.2 ಕುಸಿತ) ಮತ್ತು ದಕ್ಷಿಣ ಕೊರಿಯಾದ ಕಾಸ್ಪಿ (ಶೇ. 6.8 ಕುಸಿತ) ಭೀಕರ ಹಿನ್ನಡೆ ಅನುಭವಿಸಿದವು.

ಯಾವ ವಲಯಗಳಿಗೆ ನಷ್ಟ? ಯಾವ ಕಂಪನಿಗಳು ತತ್ತರಿಸಿದವು?

ಇಂದಿನ ವಹಿವಾಟಿನಲ್ಲಿ ರಿಯಾಲ್ಟಿ, ಮೆಟಲ್, ಆಟೋಮೊಬೈಲ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಷೇರುಗಳು ಅತಿ ಹೆಚ್ಚು ನಷ್ಟ ಅನುಭವಿಸಿದವು. ಸೆನ್ಸೆಕ್ಸ್ ಪಟ್ಟಿಯಲ್ಲಿರುವ ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್, ಟಿಸಿಎಸ್ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಗಳು ಭಾರಿ ಹಿನ್ನಡೆ ಕಂಡವು. ಆದರೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಫಾರ್ಮಾ (ಔಷಧ) ಮತ್ತು ಹೆಲ್ತ್‌ಕೇರ್ ವಲಯದ ಷೇರುಗಳು ಮಾತ್ರ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ನಿಗಾ ವಹಿಸಿದವು. ಇದರಲ್ಲಿ ಸನ್ ಫಾರ್ಮಾ ಮತ್ತು ಟೆಕ್ ಮಹೀಂದ್ರಾ ಕಂಪನಿಗಳು ಮಾತ್ರ ಅಲ್ಪ ಲಾಭ ಗಳಿಸಿದವು.
ಒಟ್ಟಾರೆಯಾಗಿ, ಜಾಗತಿಕ ಯುದ್ಧದ ವಾತಾವರಣ ತಿಳಿಯಾಗುವವರೆಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ,(ಏಜೆನ್ಸೀಸ್​).