ಮೂರು ದಿನಗಳ ಕಾಲ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಗುರುವಾರ ತೆರೆ ಬಿದ್ದಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಗುರುತುಗಳನ್ನು ದಾಖಲಿಸಿರುವ ಬೆಂಗಳೂರು ಈ ಶೃಂಗಸಭೆಯ ಮೂಲಕ ತನ್ನ ಶಕ್ತಿ ಮತ್ತು ಸಾಧ್ಯತೆಗಳನ್ನು ಪ್ರದರ್ಶಿಸಿತು. ಐಟಿ ಉದ್ಯಮ ವಿಸ್ತಾರಕ್ಕೆ ರಾಜ್ಯ ಹಲವು ಅವಕಾಶಗಳನ್ನು ಹೊಂದಿದೆ. ಇದನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡು ಮಾಹಿತಿ&ತಂತ್ರಜ್ಞಾನ ಉದ್ಯಮವನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಮತ್ತು ಇದಕ್ಕಾಗಿ "ನಿಪುಣ ಕರ್ನಾಟಕ' ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ.
ಸ್ಥಳಿಯ ಆರ್ಥಿಕ ಉತ್ತೇಜನ ಕಾರ್ಯಕ್ರಮವನ್ನು (ಲೀಪ್) ಉನ್ನತಿಕರಿಸಿ ಎರಡನೇ ಹಂತದ ನಗರಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಉದ್ಯಮಗಳೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಯೋಜನೆಗಳ ಪ್ರಸ್ತಾವನೆಯೊಂದಿಗೆ ಆಶಯ ಪತ್ರಕ್ಕೆ (ಎಲ್ಐಒ) ಆರು ಪ್ರಮುಖ ಕಂಪನಿಗಳು ಸಹಿ ಹಾಕಿವೆ. ಒಟ್ಟು 2,600 ಕೋಟಿ ರೂ. ಹೂಡಿಕೆ ಉದ್ದೇಶದ ಈ ಒಡಂಬಡಿಕೆಯಡಿ 3500 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಮೂಲಕ ಎರಡನೇ ಹಂತದ ನಗರಗಳಲ್ಲಿ ಉದ್ಯೋಗಸೃಷ್ಟಿ ಜತೆಗೆ ಆರ್ಥಿಕ ಚಟುವಟಿಕೆಗಳು ವೇಗ ಪಡೆಯಲಿವೆ.
"ಬೆಂಗಳೂರಿನ ಆಚೆಗೆ ಮಾಹಿತಿ& ತಂತ್ರಜ್ಞಾನ ಉದ್ಯಮವನ್ನು ವಿಸ್ತರಿಸಲು ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಇದರ ಭಾಗವಾಗಿಯೇ ಕೌಶಲ ತರಬೇತಿ ಮತ್ತು ಉದ್ಯೋಗ ಒದಗಿಸುವ ನಿಪುಣ, ಲೀಪ್ ಯೋಜನೆಗೆ ಒತ್ತು ನೀಡಲಾಗಿದೆ, ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ, ಡೇಟಾ ಸೈನ್ಸ್ ಕ್ಷೇತ್ರಗಳಲ್ಲಿ ತರಬೇತಿ ನೀಡಿ ಹೆಚ್ಚಿನ ಉದ್ಯೋಗಸೃಷ್ಟಿ ನಿರೀಸಲಾಗಿದೆ' ಎಂದು ಮಾಹಿತಿ&ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 450ಕ್ಕೂ ಹೆಚ್ಚು ನವೋದ್ಯಮಗಳು ಬೆಂಗಳೂರಿನ ಆಚೆಗಿನ ಮಂಗಳೂರು, ಮೈಸೂರು, ಹುಬ್ಬಳ್ಳಿ&ಧಾರವಾಡ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ.
ರಾಜ್ಯದ ಬೃಹತ್ ಕೈಗಾರಿಕಾ ವಲಯದಲ್ಲೂ ಬಂಡವಾಳ ಹೂಡಿಕೆ ಆಕರ್ಷಿಸಲು ಪೂರಕ ಕ್ರಮಗಳಾಗುತ್ತಿರುವುದು, ಹೊಸ ಕ್ಷೇತ್ರಗಳನ್ನು ಆಕರ್ಷಿಸುತ್ತಿರುವುದು ವಿಕಾಸದ ವೇಗವನ್ನು ವೃದ್ಧಿಸಲಿದೆ. ಈ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರು ಭಾರತದಲ್ಲಿನ ಅಮೆರಿಕನ್ ಕಾನ್ಸುಲ್ ಜನರಲ್ ಕ್ರಿಸ್ ಹಾಡ್ಜಸ್, ಪೋಲೆಂಡ್ ದೇಶದ ಡಿಜಿಟಲೀಕರಣ ಖಾತೆ ಸಹಾಯಕ ಸಚಿವ ರಫಾಲ್ ರೊಸಿನ್ಸ್ಕಿ, ಬವೇರಿಯಾದ ಪ್ರಾಂತೀಯ ಸಂಸತ್ತಿನ ಅಧ್ಯಕ್ಷೆ ಐಲ್ ಏಗ್ನರ್, ಅಮೆರಿಕದ ಉತಾ ಪ್ರಾಂತ್ಯದ ಸೆನೆಟ್ ಅಧ್ಯಕ್ಷ ಜಬೇಜ್ ಸ್ಟುವರ್ಟ್ ಆ್ಯಡಮ್ಸ್, ಆಸ್ಟ್ರೆಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್&ಗೀಚಿ, ಸಿಂಗಾಪುರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಗಾನ್ ಸಿಯೋವೋ ಹುವಾಂಗ್ ಮುಂತಾದವರ ನೇತೃತ್ವದ ನಿಯೋಗಗಳ ಜತೆಯೂ ಇತ್ತೀಚಿನ ದಿನಗಳಲ್ಲಿ ಮಾತುಕತೆ ನಡೆಸಿ ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಪ್ರಯತ್ನ ಮಾಡಿರುವುದು ಶ್ಲಾಘನೀಯ.
ಅಲ್ಲದೆ, ಇಂಗ್ಲೆಂಡಿನ ಪ್ರಮುಖ ಕಂಪನಿಗಳಿಂದ ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸಚಿವ ಎಂ.ಬಿ.ಪಾಟೀಲ್ ನವೆಂಬರ್ 24ರಿಂದ 26ರವರೆಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಲಂಡನ್ಗೆ ಭೇಟಿ ನೀಡುತ್ತಿರುವುದು ಮಹತ್ವದ ಬೆಳವಣಿಗೆ.
ಕೈಗಾರಿಕಾ ವಲಯದ ಸಮಗ್ರ ಬೆಳವಣಿಗೆ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ವಾತಾವರಣವನ್ನು ಕರ್ನಾಟಕ ಹೊಂದಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ರಾಜ್ಯದ ಆರ್ಥಿಕ ಮತ್ತು ಉದ್ಯೋಗ ಶಕ್ತಿ ಹೆಚ್ಚಿಸಲು ನೆರವಾಗಲಿವೆ.