ಸಂಪಾದಕೀಯ: ಸಾಮಾಜಿಕ ಮಾಧ್ಯಮಗಳ ನಕಲಿ ಖಾತೆಗಳು ಮತ್ತು ಸುಳ್ಳು ಸುದ್ದಿಗಳು ಬಳಕೆದಾರರನ್ನು ಪೇಚಿಗೆ ಸಿಲುಕಿಸಿರುವುದು ಹೌದು. ಈಗಂತೂ, ಕೃತಕ ಬುದ್ಧಿಮತ್ತೆ (ಎಐ) ಯುಗ. ಎಐ ಸಾಧನ ಬಳಸಿಕೊಂಡು ವಂಚನೆಯ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆಯಾದರೆ, ಜನರ ದಾರಿ ತಪ್ಪಿಸುವ ಕಂಟೆಂಟ್ ಮತ್ತೊಂದೆಡೆ. ಯಾವುದು ಅಸಲಿ, ಯಾವುದು ನಕಲಿ ಎಂಬುದು ಪತ್ತೆ ಹಚ್ಚುವುದು ಸಾಮಾನ್ಯ ಬಳಕೆದಾರರಿಗೆ ತಲೆನೋವಿನ ಸಂಗತಿಯಾಗಿದೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಈಗ ವಿಚಿತ್ರ ವಿಡಿಯೋ ಮತ್ತು ಚಿತ್ರಗಳು ಕಾಣಿಸಿಕೊಂಡು, ಜನರ ದಿಕ್ಕು ತಪ್ಪಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಕುರಿತಾಗಿ ಕೆಲ ನಿಯಮಗಳು ಇದ್ದರೂ, ಅದರ ಅನುಷ್ಠಾನ ತೃಪ್ತಿಕರವಾಗಿಲ್ಲ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಎಐ ಕಂಟೆಂಟ್ ಸೃಷ್ಟಿಸಿರುವ ಹಾವಳಿ ತೀವ್ರ ಸ್ವರೂಪದ್ದು. ಇದರ ಗಂಭೀರತೆಯನ್ನು ಅರಿತು ಕೇಂದ್ರ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವುದು ಸಮಾಧಾನಕರ ಬೆಳವಣಿಗೆ.
ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ಮತ್ತು ಡೀಪ್ಫೇಕ್ ತಂತ್ರಜ್ಞಾನ ಬಳಸಿ ತಯಾರಿಸಿದ ಕಂಟೆಂಟ್ ನಿರ್ವಹಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದು ಸೂಕ್ತ ಮತ್ತು ಸಕಾಲಿಕ ನಿರ್ಧಾರವಾಗಿದೆ. ಸಾಮಾಜಿಕ ಜಾಲತಾಣಗಳು ಕೃತಕವಾಗಿ ರಚಿಸಿದ ಎಲ್ಲ ಮಾಹಿತಿಗಳನ್ನು ಬಳಕೆದಾರರು ತಕ್ಷಣವೇ ಗುರುತಿಸುವಂತೆ ಸ್ಪಷ್ಟವಾಗಿ ಲೇಬಲ್ ಮಾಡಬೇಕು. ಅಂತ ಸಿಂಥೆಟಿಕ್ ಕಂಟೆಂಟ್ಗಳನ್ನು ಐಡೆಂಟಿಫಯರ್ಗಳೊಂದಿಗೆ ಎಂಬೆಡ್ ಮಾಡಬೇಕು. ಒಮ್ಮೆ ಅಂತಹ ಲೇಬಲ್ಗಳನ್ನು ಅಳವಡಿಸಿದ ಬಳಿಕ ಅವುಗಳನ್ನು ಮಾರ್ಪಡಿಸಲು, ಅಳಿಸಲು ಅಥವಾ ಮರೆಮಾಚಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರ ಗೊಂದಲ ನಿವಾರಣೆ ಆಗಲಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021ಕ್ಕೆ ತಿದ್ದುಪಡಿ ಮಾಡಿದ್ದು, ಹೊಸ ನಿಯಮ ಫೆಬ್ರವರಿ 20ರಂದು ಜಾರಿಗೆ ಬರಲಿದೆ. ಡೀಪ್ಫೇಕ್ ಸೇರಿದಂತೆ ಎಐ ರಚಿತ ಮತ್ತು ಸಿಂಥೆಟಿಕ್ ಕಂಟೆಂಟ್ಗಳನ್ನು ನಿರ್ವಹಿಸಲು ಕಠಿಣ ಮಾರ್ಗಸೂಚಿ ಪರಿಚಯಿಸಲಾಗುತ್ತದೆ ಎಂದಿರುವ ಸರ್ಕಾರ, ಯಾವುದೇ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಲಯಗಳು ಅಂತಹ ಕಂಟೆಂಟ್ಗಳ ಬಗ್ಗೆ ಗಮನ ಸೆಳೆದಾಗ ಎಕ್ಸ್, ಇನ್ಸ್ಟಾಗ್ರಾಂ, ಫೇಸ್ಬುಕ್ನಂಥ ಸಾಮಾಜಿಕ ಜಾಲತಾಣಗಳು ಮೂರು ಗಂಟೆಯೊಳಗೆ ಅವುಗಳನ್ನು ತೆಗೆದುಹಾಕಬೇಕು ಎಂದು ತಿಳಿಸಿದೆ.
ಅಲ್ಲದೆ, ವಂಚಿಸುವ, ಲೈಂಗಿಕವಾಗಿ ಶೋಷಿಸುವ, ಒಪ್ಪಿಗೆ ಇಲ್ಲದ ಅಥವಾ ಸುಳ್ಳು ದಾಖಲೆಗಳು, ಮಕ್ಕಳ ಮೇಲಿನ ದೌರ್ಜನ್ಯದ ಕಂಟೆಂಟ್ ಇತ್ಯಾದಿಗಳಿಗೆ ಸಂಬಂಧಿಸಿದ ಎಐ ಕಂಟೆಂಟ್ಗಳನ್ನು ಪತ್ತೆ ಹಚ್ಚಲು ಮತ್ತು ತಡೆಯಲು ಸ್ವಯಂಚಾಲಿತ ಟೂಲ್ ಅಳವಡಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸರ್ಕಾರ ಆಗ್ರಹಿಸಿರುವುದು, ಡಿಜಿಟಲ್ ಸುರಕ್ಷತೆ ನಿಟ್ಟಿನಲ್ಲಿ ಅಗತ್ಯ ಕ್ರಮವಾಗಿದೆ. ಸ್ವಯಂಚಾಲಿತ ಟೂಲ್ ಅಳವಡಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕಾಲಮಿತಿ ನಿಗದಿಪಡಿಸುವುದು ಸೂಕ್ತ. ಡೀಪ್ಫೇಕ್ ಮೂಲಕ ಸೃಷ್ಟಿಯಾಗುತ್ತಿರುವ ನಕಲಿ ಮತ್ತು ವಿಕೃತ ವಿಡಿಯೋಗಳಂತೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಸವಾಲಾಗಿ ಪರಿಣಮಿಸಿವೆ.
ಈ ಬಗ್ಗೆ ಸಾಮಾಜಿಕ ಗಣ್ಯರು ಕೂಡ ಕಳವಳ ವ್ಯಕ್ತಪಡಿಸಿದ್ದಲ್ಲದೆ, ಸಂಸತ್ತಿನಲ್ಲಿಯೂ ಈ ಸಮಸ್ಯೆ ಮಾರ್ದನಿಸಿದೆ. ಈ ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಕಠಿಣ ಮಾರ್ಗಸೂಚಿಗಳ ಅಗತ್ಯವಿತ್ತು. ಕೇಂದ್ರ ಇದಕ್ಕೆ ಸ್ಪಂದಿಸಿದ್ದು, ಹೊಸ ನಿಯಮಗಳ ಅನುಷ್ಠಾನ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಹೊಸ ತಂತ್ರಜ್ಞಾನ ಅಥವಾ ಕೃತಕ ಬುದ್ಧಿಮತ್ತೆ ತಂದೊಡ್ಡುತ್ತಿರುವ ಹೊಸ ಸಮಸ್ಯೆಗಳ ವಿರುದ್ಧ ಕಾವಲು ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸುವುದು ಈಗಿನ ಅಗತ್ಯವೇ ಹೌದು.