ದೇಶ

ಸಂಪಾದಕೀಯ| ಸುಭದ್ರ ಆರ್ಥಿಕತೆಗೆ ಸ್ವದೇಶಿ ಮಂತ್ರ

ದೀಪಾವಳಿ ಹಬ್ಬವು ಭಾರತೀಯ ಸಂಸ್ಕೃತಿಯಲ್ಲಿ ಕೇವಲ ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸಾರುವ ಧಾರ್ವಿುಕ ಆಚರಣೆಯಷ್ಟೇ ಅಲ್ಲ; ಅದು ದೇಶದ ಆಂತರಿಕ ಆರ್ಥಿಕತೆಯ ಚಕ್ರಕ್ಕೆ ಹೊಸ ಚೈತನ್ಯ ನೀಡುವ ಬಹುದೊಡ್ಡ ಆರ್ಥಿಕ ಹಬ್ಬವೂ ಹೌದು. ಕೃಷಿ ಸುಗ್ಗಿಯ ಬೆನ್ನಲ್ಲೇ ಬರುವ ಈ ಹಬ್ಬದ ಋತುವಿನಲ್ಲಿ ಮಾರುಕಟ್ಟೆಗಳಲ್ಲಿ ಹಣದ ಹರಿವು ತೀವ್ರಗೊಳ್ಳುತ್ತದೆ. ಆದರೆ, ಈ ಬಾರಿಯ ದೀಪಾವಳಿಯು ಅತ್ಯಂತ ಸಂಕೀರ್ಣ ಮತ್ತು ಸವಾಲಿನ ಜಾಗತಿಕ ವಾತಾವರಣದಲ್ಲಿ ಎದುರಾಗಿದೆ. ರಷ್ಯಾ-ಯೂಕ್ರೇನ್ ಸಂಘರ್ಷ ದೀರ್ಘಕಾಲದಿಂದ ಮುಂದುವರಿದಿದ್ದು, ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ಬಿಕ್ಕಟ್ಟು ಇಂಧನ ಮಾರುಕಟ್ಟೆ ಹಾಗೂ ಜಾಗತಿಕ ವ್ಯಾಪಾರ ಮಾರ್ಗಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಮತ್ತೊಂದೆಡೆ, ಅಮೆರಿಕ ಸಾರಿರುವ ಸುಂಕ ಸಮರವು ಅಂತಾರಾಷ್ಟ್ರೀಯ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿವೆ.

ಇಂತಹ ಸ್ಥಿತಿಯಲ್ಲಿ ಭಾರತದ ಆರ್ಥಿಕತೆಯನ್ನು ಸ್ಥಿರವಾಗಿಡಲು ಸ್ವದೇಶಿಯೊಂದೇ ನಮಗೆ ನೈಜ ರಕ್ಷಣಾ ಕವಚವಾಗಬಲ್ಲದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ನೀಡಿರುವ ಕರೆ ಪ್ರಸ್ತುತ ಭೌಗೋಳಿಕ-ಆರ್ಥಿಕ ಸನ್ನಿವೇಶದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ದೀಪಾವಳಿ ಹಬ್ಬದ ಖರೀದಿ ವೇಳೆ ಸ್ಥಳೀಯ ಕುಶಲಕರ್ವಿುಗಳು ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳನ್ನು ಕೋರಿದ್ದಾರೆ. ಇದು ಕೇವಲ ಭಾವನಾತ್ಮಕ ಕರೆಯಲ್ಲ, ಬದಲಿಗೆ ಆರ್ಥಿಕ ಸ್ವಾವಲಂಬನೆಯ ದೀರ್ಘಕಾಲೀನ ತಂತ್ರಗಾರಿಕೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ತಳಮಟ್ಟದಿಂದಲೇ ಜೀವ ಬರುತ್ತದೆ. ಮಣ್ಣಿನ ಹಣತೆ ಮಾಡುವ ಕುಂಬಾರನಿಂದ ಹಿಡಿದು ಕೈಮಗ್ಗದ ನೇಕಾರರವರೆಗೆ ಎಲ್ಲರ ಮುಖದಲ್ಲೂ ಹಬ್ಬದ ನಗು ಮೂಡಿಸಲು ಇದು ಸಹಕಾರಿಯಾಗುತ್ತದೆ.

ಸ್ವದೇಶಿ ವಸ್ತುಗಳ ಬಳಕೆಯಿಂದ ಆರ್ಥಿಕತೆಗೆ ಬಲ ಬರುವುದಷ್ಟೇ ಅಲ್ಲ, ನಮ್ಮ ಪರಂಪರೆ, ಪರಿಸರಸ್ನೇಹಿ ಜೀವನಶೈಲಿ ಮತ್ತು ಸಾಂಸ್ಕೃತಿಕ ಹೆಮ್ಮೆಯೂ ಜಾಗೃತಗೊ ಳ್ಳುತ್ತದೆ. ಮಣ್ಣಿನ ಹಣತೆಗಳು ಪರಿಸರಕ್ಕೆ ಪೂರಕವಾಗಿದ್ದರೆ, ಕೈಮಗ್ಗದ ಉಡುಪುಗಳು ಭಾರತದ ವೈವಿಧ್ಯಮಯ ನೇಯ್ಗೆ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ, ಕರೆನ್ಸಿ ಏರಿಳಿತ ಹಾಗೂ ರಫ್ತು ಮಾರುಕಟ್ಟೆಯ ಕುಸಿತದಂತಹ ಬಾಹ್ಯ ಆಘಾತಗಳು ಎದುರಾದಾಗ, ದೇಶದ ಬೃಹತ್ ಆಂತರಿಕ ಬೇಡಿಕೆಯೇ ಆರ್ಥಿಕತೆಯನ್ನು ಕುಸಿಯದಂತೆ ಹಿಡಿದಿಟ್ಟುಕೊಳ್ಳುತ್ತದೆ. ಆದರೆ, ಸ್ವದೇಶಿ ಆಂದೋಲನವು ಕೇವಲ ಹಬ್ಬದ ಋತುವಿಗೆ ಸೀಮಿತವಾಗಿರಬಾರದು.

ಸ್ಥಳೀಯ ಉತ್ಪಾದಕರು ಗುಣಮಟ್ಟ, ನಾವೀನ್ಯ ಹಾಗೂ ಸ್ಪರ್ಧಾತ್ಮಕ ಬೆಲೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಹೊರಬೇಕು; ಸರ್ಕಾರಗಳು ಅವರಿಗೆ ಅಗತ್ಯ ಸಾಲ ಸೌಲಭ್ಯ, ಮಾರುಕಟ್ಟೆ ವೇದಿಕೆ ಮತ್ತು ತಂತ್ರಜ್ಞಾನದ ನೆರವು ನೀಡಬೇಕು. ಅದೇ ವೇಳೆ ನಾಗರಿಕರು ಕೂಡ ಸ್ವದೇಶಿ ಖರೀದಿಯನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು. ಪ್ರತಿಯೊಬ್ಬ ಗ್ರಾಹಕನೂ ಸ್ಥಳೀಯ ಉತ್ಪನ್ನಕ್ಕೆ ನೀಡುವ ಆದ್ಯತೆಯು ದೇಶದ ಹಣ ದೇಶದ ಒಳಗೇ ಸುತ್ತುವಂತೆ ಮಾಡಿ, ದೇಶೀಯ ಮಾರುಕಟ್ಟೆಯನ್ನು ಆಂತರಿಕವಾಗಿ ಬಲಪಡಿಸುತ್ತದೆ. ಜಾಗತಿಕ ಅನಿಶ್ಚಿತತೆ ಮತ್ತು ಪ್ರತಿಕೂಲ ಆರ್ಥಿಕ ವಾತಾವರಣದ ನಡುವೆಯೂ ಭಾರತವನ್ನು ತಲೆಎತ್ತಿ ನಿಲ್ಲಿಸಲು ಸ್ವದೇಶಿ ಮಂತ್ರವೇ ನಿಜವಾದ ದಾರಿದೀಪ ಎಂಬುದನ್ನು ಅರಿತು, ಆ ನಿಟ್ಟಿನಲ್ಲಿ ಹೆಜ್ಜೆ ಇರಿಸುವುದು ಅತ್ಯಂತ ಸೂಕ್ತ.