ಭಾರತವು ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಇತ್ತೀಚಿನ ವರ್ಷಗಳಲ್ಲಿ ಹಲವು ಪ್ರಮುಖ ದೇಶಗಳೊಂದಿಗೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ಶೀಘ್ರವೇ ಜರ್ಮನಿ ಜತೆ ನಡೆಯಲಿರುವ ಒಪ್ಪಂದ. ಆರು ಸುಧಾರಿತ ಸಾಂಪ್ರದಾಯಿಕ ಜಲಾಂತರ್ಗಾಮಿಗಳ ನಿಮಾಣ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ. ಈ ಪ್ರಸ್ತಾವನೆಯು ಶೀಘ್ರವೇ ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿ (ಸಿಎಸ್ಎಸ್) ಮುಂದೆ ಅನುಮೋದನೆಗಾಗಿ ಬರಲಿದೆ. ಮುಂಬರುವ ದಿನಗಳಲ್ಲಿ ಜರ್ಮನಿಯು ಈ ಜಲಾಂತರ್ಗಾಮಿಗಳ ವಿನ್ಯಾಸ ಮತ್ತು ಎಐಪಿ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸಲಿದೆ. ಮೊದಲ ಜಲಾಂತರ್ಗಾಮಿಯಲ್ಲಿ ಕನಿಷ್ಠ ಶೇಕಡ 45 ಮತ್ತು ಅಂತಿಮ ಹಂತದಲ್ಲಿ ಶೇ.60ರಷ್ಟು ಭಾರತೀಯ ನಿರ್ವಿುತ ಉಪಕರಣಗಳನ್ನು ಬಳಸಲಾಗುತ್ತದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನದ ಜಂಟಿ ನೌಕಾ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ನೌಕಾಪಡೆಗೆ ಇದು ಅತ್ಯಗತ್ಯ ಜಲಗಡಿ ಭದ್ರತೆ ಹಾಗೂ ನಿಗಾ ಸಾಮರ್ಥ್ಯವನ್ನು ನೀಡುತ್ತದೆ. ಸಾಮಾನ್ಯ ಡೀಸೆಲ್ ಜಲಾಂತರ್ಗಾಮಿಗಳು ಬ್ಯಾಟರಿ ಚಾರ್ಜ್ ಮಾಡಲು ಪದೇಪದೆ ಮೇಲ್ಮೈಗೆ ಬರಬೇಕಾಗುತ್ತದೆ. ಆದರೆ ಎಐಪಿ ತಂತ್ರಜ್ಞಾನದಿಂದಾಗಿ ಈ ಜಲಾಂತರ್ಗಾಮಿಗಳು ವಾರಗಳ ಕಾಲ ನೀರಿನಡಿಯಲ್ಲೇ ಶತ್ರುಗಳ ಕಣ್ತಪ್ಪಿಸಿ ಕಾರ್ಯಾಚರಣೆ ನಡೆಸಬಲ್ಲವು. ಅಲ್ಲದೆ, ರಕ್ಷಣಾ ಉಪಕರಣಗಳಿಗಾಗಿ ರಷ್ಯಾದ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಯುರೋಪಿಯನ್ ರಾಷ್ಟ್ರಗಳೊಂದಿಗೆ ಬಲವಾದ ತಂತ್ರಜ್ಞಾನ ಪಾಲುದಾರಿಕೆಯನ್ನು ವಿಸ್ತರಿಸಲು ಭಾರತಕ್ಕೆ ಇದು ಸಹಕಾರಿಯಾಗಿದೆ.
ಭಾರತದ ರಕ್ಷಣಾ ವಲಯ ಆಧುನೀಕರಣ ಹಾಗೂ ಉನ್ನತ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳುತ್ತಿದ್ದು, ಯಾವುದೇ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳೊಂದಿಗೆ ಸಹಭಾಗಿತ್ವದ ಮಾರ್ಗವನ್ನು ಮುಕ್ತವಾಗಿ ಇರಿಸಿರುವುದು ಮಹತ್ವದ ಬೆಳವಣಿಗೆ. ಫ್ರಾನ್ಸ್ ಮತ್ತು ಭಾರತದ ನಡುವಿನ ರಕ್ಷಣಾ ಪಾಲುದಾರಿಕೆಯು ವಾಯುಪಡೆ ಮತ್ತು ನೌಕಾಪಡೆಯ ಆಧುನೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದೆ. 2016ರಲ್ಲಿ ಭಾರತ ಸರ್ಕಾರವು ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ಜೊತೆ 59 ಸಾವಿರ ಕೋಟಿ ರೂ. ಮೌಲ್ಯದ 36 ರಫೇಲ್ ಜೆಟ್ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತು. ಈ ಎಲ್ಲ 36 ವಿಮಾನಗಳು ಪೂರ್ಣವಾಗಿ ಪೂರೈಕೆಯಾಗಿದ್ದು, ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಭಾರತ ಮತ್ತು ಇಸ್ರೇಲ್ ನಡುವಿನ ರಕ್ಷಣಾ ಸಹಯೋಗವು ಮುಖ್ಯವಾಗಿ ಜಂಟಿ ಸಂಶೋಧನೆ, ತಂತ್ರಜ್ಞಾನ ವರ್ಗಾವಣೆ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳ ಮೇಲೆ ಆಧಾರಿತವಾಗಿದೆ. ಭಾರತದ ಡಿಆರ್ಡಿಒ ಮತ್ತು ಇಸ್ರೇಲ್ನ ಐಎಐ ಜಂಟಿಯಾಗಿ ಬರಾಕ್-8 ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿವೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ಲೇಸರ್ ಗೈಡೆಡ್ ಬಾಂಬ್ಗಳು ಮತ್ತು ಕಣ್ಗಾವಲು ಸಾಧನಗಳನ್ನು ತುರ್ತಾಗಿ ಪೂರೈಸುವ ಮೂಲಕ ಇಸ್ರೇಲ್ ವಿಶ್ವಾಸಾರ್ಹತೆ ಸಾಬೀತುಪಡಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಹಲವು ಮಹತ್ವದ ದೇಶಗಳೊಂದಿಗೆ ಒಪ್ಪಂದಗಳು ಏರ್ಪಟ್ಟ ಪರಿಣಾಮವಾಗಿ, ಜೆಟ್ ಇಂಜಿನ್ ಮತ್ತು ಜಲಾಂತರ್ಗಾಮಿಗಳಂತಹ ಸಂಕೀರ್ಣ ತಂತ್ರಜ್ಞಾನಗಳು ಭಾರತಕ್ಕೆ ವರ್ಗಾವಣೆಯಾಗುತ್ತಿದ್ದು, ಮೇಕ್ ಇನ್ ಇಂಡಿಯಾ ಹಾಗೂ ‘ಆತ್ಮನಿರ್ಭರ ಭಾರತ’ಕ್ಕೆ ಬಲ ಸಿಕ್ಕಿದೆ.