ಸಾಂದರ್ಭಿಕ ಚಿತ್ರ  
ದೇಶ

ಸಂಪಾದಕೀಯ: ಆಹಾರ ಸುರಕ್ಷತೆಗೆ ದಾರಿ

ಜನರ ದಿನನಿತ್ಯದ ಬದುಕಿನಲ್ಲಿ ಹೋಟೆಲ್, ರೆಸ್ಟೋರೆಂಟ್​ಗಳ ಪಾತ್ರ ದೊಡ್ಡದು. ಆದರೆ, ಜನರು ಸವಿಯುವ ಆಹಾರವನ್ನು ಎಂತಹ ವಾತಾವರಣದಲ್ಲಿ ತಯಾರಿಸಲಾಗುತ್ತದೆ ಎಂಬ ಪ್ರಶ್ನೆಗೆ ಬಹುತೇಕ ಕಡೆ ಸಮಾಧಾನಕರ ಉತ್ತರ ಸಿಗುವುದಿಲ್ಲ. ಇತ್ತೀಚೆಗೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೆರೇಷನ್ ತನ್ನ ವ್ಯಾಪ್ತಿಯ ಸುಮಾರು 11,000 ಹೋಟೆಲ್​ಗಳಿಗೆ ತಮ್ಮ ಅಡುಗೆಮನೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಗ್ರಾಹಕರಿಗೆ ಅವುಗಳ ಲೈವ್​ಫೀಡ್ ಕಾಣಿಸುವಂತೆ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ನಾಗರಿಕರ ಆರೋಗ್ಯ ಮತ್ತು ಆಹಾರ ನೈರ್ಮಲ್ಯದ ದೃಷ್ಟಿಯಿಂದ ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ.

ತಾವು ಸೇವಿಸುವ ಆಹಾರ ಹೇಗೆ ಸಿದ್ಧವಾಗುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ಪ್ರತಿಯೊಬ್ಬ ಗ್ರಾಹಕನಿಗೂ ಇದೆ. ಆದರೆ, ಹೋಟೆಲ್​ಗಳಲ್ಲಿ ‘ಅಡುಗೆಮನೆಗೆ ಪ್ರವೇಶವಿಲ್ಲ’ ಎಂಬ ಬೋರ್ಡ್ ಸರ್ವೆಸಾಮಾನ್ಯ. ಇತ್ತೀಚೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಹಾಗೂ ವಿವಿಧ ರಾಜ್ಯಗಳ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಅಧಿಕಾರಿಗಳು ದೇಶಾದ ಹಲವೆಡೆ ಪ್ರಸಿದ್ಧ ಹೋಟೆಲ್​ಗಳ ಮೇಲೆ ನಡೆಸಿದ ದಿಢೀರ್ ದಾಳಿಗಳು ಸಾರ್ವಜನಿಕರಲ್ಲಿ ದಿಗಿಲು ಹುಟ್ಟಿಸಿದ್ದವು. ಅನೈರ್ಮಲ್ಯ, ಕೊಳೆತ ತರಕಾರಿಗಳು, ಗಡುವು ಮುಗಿದ ರಾಸಾಯನಿಕಗಳ ಬಳಕೆ, ನೊಣ-ಜಿರಳೆಗಳ ಉಪಟಳ... ಇಂತಹ ವಾತಾವರಣದಲ್ಲಿ ಅಡುಗೆ ತಯಾರಾಗುತ್ತಿರುವುದು ಈ ದಾಳಿ ವೇಳೆ ಬಯಲಾಗಿದೆ. ದುಬಾರಿ ಹಣ ತೆತ್ತರೂ ಗ್ರಾಹಕರಿಗೆ ಸಿಗುತ್ತಿರುವುದು ರೋಗರುಜಿನಗಳನ್ನು ಆಹ್ವಾನಿಸುವ ಕಳಪೆ ಆಹಾರ ಎಂಬುದು ಸಾಬೀತಾಗಿದೆ.

ವ್ಯಾಪಾರಿಗಳ ಲಾಭಕೋರತನ ಹಾಗೂ ಬೇಜವಾಬ್ದಾರಿಗೆ ತಡೆ ಹಾಕಲು ತಂತ್ರಜ್ಞಾನದ ಬಳಕೆ ಅತ್ಯಂತ ಪರಿಣಾಮಕಾರಿ ಮಾರ್ಗ. ಅಡುಗೆಮನೆಗಳಲ್ಲಿ ಸಿಸಿಟಿವಿ ಅಳವಡಿಸಿ, ಡೈನಿಂಗ್ ಏರಿಯಾದಲ್ಲಿರುವ ಗ್ರಾಹಕರಿಗೆ ಕಾಣುವಂತೆ ಸಣ್ಣ ಎಲ್​ಇಡಿ ಪರದೆಗಳಲ್ಲಿ ಅದರ ನೇರ ದೃಶ್ಯಾವಳಿ ಪ್ರದರ್ಶಿಸುವುದರಿಂದ ಹೋಟೆಲ್ ಆಡಳಿತ ಮಂಡಳಿ ಹಾಗೂ ಬಾಣಸಿಗರಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಅಡುಗೆ ತಯಾರಿಸುವ ಸ್ಥಳ, ತರಕಾರಿ ತೊಳೆಯುವ ವಿಧಾನ ಹಾಗೂ ಬಳಸುವ ಪಾತ್ರೆಗಳ ನೈರ್ಮಲ್ಯ ಪಾರದರ್ಶಕವಾಗಿ ಸಾರ್ವಜನಿಕರಿಗೆ ಕಾಣಿಸಿದಾಗ, ಹೋಟೆಲ್ ಸಿಬ್ಬಂದಿಯೂ ಕಟ್ಟುನಿಟ್ಟಿನ ನೈರ್ಮಲ್ಯ ನಿಯಮಗಳನ್ನು ಪಾಲಿಸುವುದು ಅನಿವಾರ್ಯವಾಗುತ್ತದೆ. ಇದು ಕೇವಲ ಗ್ರಾಹಕರ ಹಕ್ಕನ್ನು ರಕ್ಷಿಸುವುದು ಮಾತ್ರವಲ್ಲದೆ, ಹೋಟೆಲ್ ಉದ್ಯಮದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಹೋಟೆಲ್ ಉದ್ಯಮಿಗಳು ಇದನ್ನು ಆಡಳಿತಾತ್ಮಕ ಹೊರೆ ಅಥವಾ ವೆಚ್ಚ ಎಂದು ಭಾವಿಸದೆ, ಗ್ರಾಹಕರ ಸೇವಾ ಗುಣಮಟ್ಟ ಮತ್ತು ಆರೋಗ್ಯ ರಕ್ಷಣೆಯ ಭಾಗವಾಗಿ ನೋಡಬೇಕಿದೆ. ಆಹಾರ ಸುರಕ್ಷತಾ ಇಲಾಖೆ ಕೇವಲ ದೂರುಗಳು ಬಂದಾಗ ಅಥವಾ ಅಪರೂಪಕ್ಕೊಮ್ಮೆ ದಾಳಿ ನಡೆಸುವುದಕ್ಕೆ ಸೀಮಿತವಾಗಬಾರದು. ಕೇಂದ್ರ ಸರ್ಕಾರ ಹಾಗೂ ಎಲ್ಲ ರಾಜ್ಯ ಸರ್ಕಾರಗಳು ಅಹಮದಾಬಾದ್ ಮಾದರಿಯನ್ನು ಗಂಭೀರವಾಗಿ ಪರಿಗಣಿಸಿ, ದೇಶದಾದ್ಯಂತ ಎಲ್ಲ ಸಣ್ಣ ಮತ್ತು ದೊಡ್ಡ ಆಹಾರ ಸಂಸ್ಥೆಗಳಲ್ಲಿ ‘ಪಾರದರ್ಶಕ ಅಡುಗೆಮನೆ’ ನೀತಿಯನ್ನು ಕಡ್ಡಾಯಗೊಳಿಸಬೇಕು. ನಾಗರಿಕರ ಆರೋಗ್ಯ ಮತ್ತು ಜೀವದ ರಕ್ಷಣೆ ಎಲ್ಲಕ್ಕಿಂತ ಮಿಗಿಲಾದುದು. ಸ್ವಚ್ಛ ಹಾಗೂ ಸುರಕ್ಷಿತ ಆಹಾರವನ್ನು ಪಡೆ ಯುವುದು ನಾಗರಿಕರ ಮೂಲಭೂತ ಹಕ್ಕು. ಆಹಾರ ನೈರ್ಮಲ್ಯದಲ್ಲಿ ಪಾರದರ್ಶಕತೆ ತರುವ ಇಂತಹ ಕಟ್ಟುನಿಟ್ಟಿನ ನಿಯಮಗಳನ್ನು ದೇಶಾದ್ಯಂತ ಜಾರಿಗೆ ತರುವ ಮೂಲಕ ನಕಲಿ, ಕಳಪೆ ಮತ್ತು ಅನೈರ್ಮಲ್ಯ ಆಹಾರ ತಯಾರಿಕೆಗೆ ಶಾಶ್ವತ ತಡೆ ಹಾಕಬೇಕಿದೆ.