WEB
ದೇಶ

ಸಂಪಾದಕೀಯ: ನಕಲಿ ವಿಶ್ವವಿದ್ಯಾಲಯಗಳ ಹಾವಳಿ

ಉನ್ನತ ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಭದ್ರ ಬುನಾದಿ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಕಲಿ ವಿಶ್ವವಿದ್ಯಾಲಯಗಳ ಹಾವಳಿ ಮಿತಿಮೀರುತ್ತಿರುವುದು ಇಡೀ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಕಳೆದ ಮೂರು ವರ್ಷಗಳಲ್ಲಿ ನಕಲಿ ವಿವಿಗಳ ಸಂಖ್ಯೆ 20ರಿಂದ 32ಕ್ಕೆ ಏರಿಕೆಯಾಗಿರುವುದು ಕೇವಲ ಅಂಕಿಅಂಶಗಳ ಹೆಚ್ಚಳವಲ್ಲ; ಬದಲಾಗಿ, ಅದು ಆಡಳಿತಾತ್ಮಕ ವೈಫಲ್ಯ ಮತ್ತು ಶಿಕ್ಷಣದ ವ್ಯಾಪಾರೀಕರಣದ ಕರಾಳ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ.

ಉನ್ನತ ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಭದ್ರ ಬುನಾದಿ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ನಕಲಿ ವಿಶ್ವವಿದ್ಯಾಲಯಗಳ ಹಾವಳಿ ಮಿತಿಮೀರುತ್ತಿರುವುದು ಇಡೀ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಕಳೆದ ಮೂರು ವರ್ಷಗಳಲ್ಲಿ ನಕಲಿ ವಿವಿಗಳ ಸಂಖ್ಯೆ 20ರಿಂದ 32ಕ್ಕೆ ಏರಿಕೆಯಾಗಿರುವುದು ಕೇವಲ ಅಂಕಿಅಂಶಗಳ ಹೆಚ್ಚಳವಲ್ಲ; ಬದಲಾಗಿ, ಅದು ಆಡಳಿತಾತ್ಮಕ ವೈಫಲ್ಯ ಮತ್ತು ಶಿಕ್ಷಣದ ವ್ಯಾಪಾರೀಕರಣದ ಕರಾಳ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೀಡಿರುವ ಎಚ್ಚರಿಕೆ ಅತ್ಯಂತ ಗಂಭೀರವಾಗಿದ್ದು, ವಿದ್ಯಾರ್ಥಿಗಳು, ಪಾಲಕರು ಮತ್ತು ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಾದ ತುರ್ತು ಅಗತ್ಯವನ್ನು ಒತ್ತಿಹೇಳುತ್ತಿದೆ.

ಈ ಬೆಳವಣಿಗೆಯಲ್ಲಿ ಅತ್ಯಂತ ಆತಂಕಕಾರಿ ಸಂಗತಿಯೆಂದರೆ, 2023ರ ಮಾರ್ಚ್​ನಲ್ಲಿ ಯುಜಿಸಿ ಎಚ್ಚರಿಕೆ ನೀಡಿದ್ದ 20 ನಕಲಿ ಸಂಸ್ಥೆಗಳ ಪೈಕಿ 18 ಸಂಸ್ಥೆಗಳು ಇಂದಿಗೂ ಯಾವುದೇ ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು. ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು, ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಿದ ನಂತರವೂ ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪದವಿಗಳನ್ನು ನೀಡುತ್ತಿರುವುದು ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ.

ನಕಲಿ ವಿವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಕೈತೊಳೆದುಕೊಳ್ಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುವ ಇಂತಹ ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಕಚೇರಿಗಳಿಗೆ ಬೀಗಮುದ್ರೆ ಹಾಕುವುದು ಮತ್ತು ಅವುಗಳ ರೂವಾರಿಗಳಿಗೆ ಕಠಿಣ ಜೈಲು ಶಿಕ್ಷೆ ವಿಧಿಸುವಂತಹ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗದ ಹೊರತು ಇವುಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ.

ಉತ್ತರ ಪ್ರದೇಶದ ಇಟಾದಲ್ಲಿನ ಒಂದು ಫಾಮರ್್​ಹೌಸ್​ನಲ್ಲಿ ನಕಲಿ ವೈದ್ಯಕೀಯ ಕಾಲೇಜು ನಡೆಯುತ್ತಿದ್ದ ಪ್ರಕರಣವು ಈ ದಂಧೆಯ ಭೀಕರತೆಯನ್ನು ಅನಾವರಣಗೊಳಿಸಿದೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಯುಜಿಸಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ. ನಕಲಿ ವಿವಿಗಳ ಜಾಲಕ್ಕೆ ಬೀಳುವವರಲ್ಲಿ ಬಹುಪಾಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಸುಲಭವಾಗಿ ಪದವಿ ಪಡೆಯುವ ಆಸೆ ಹೊಂದಿದವರು ಇರುತ್ತಾರೆ. ತಮ್ಮ ಜೀವಮಾನದ ಉಳಿತಾಯವನ್ನು ವ್ಯಯಿಸಿ, ವರ್ಷಗಟ್ಟಲೇ ಸಮಯ ಕಳೆದು ಪಡೆದ ಪದವಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ತಿಳಿದಾಗ ಆ ವಿದ್ಯಾರ್ಥಿ ಮತ್ತು ಕುಟುಂಬ ಅನುಭವಿಸುವ ಮಾನಸಿಕ ಆಘಾತ ಅಷ್ಟಿಷ್ಟಲ್ಲ. ಇದು ಕೇವಲ ಆರ್ಥಿಕ ವಂಚನೆಯಲ್ಲ, ಬದಲಾಗಿ ಒಂದು ತಲೆಮಾರಿನ ಕನಸುಗಳ ಕಗ್ಗೊಲೆ.

ಯುಜಿಸಿ ಕಾಯ್ದೆಯಡಿ ನಕಲಿ ವಿವಿಗಳಿಗೆ ವಿಧಿಸಲಾಗುವ ದಂಡದ ಪ್ರಮಾಣ ಅತ್ಯಲ್ಪವಾಗಿದೆ. ಈ ಕಾನೂನಿಗೆ ತಿದ್ದುಪಡಿ ತಂದು, ಶಿಕ್ಷಣ ವಂಚನೆಯನ್ನು ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸಬೇಕು. ಯುಜಿಸಿ ಪಟ್ಟಿ ಬಿಡುಗಡೆ ಮಾಡಿದ ತಕ್ಷಣ ಆಯಾ ರಾಜ್ಯಗಳ ಉನ್ನತ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಅಂತಹ ಸಂಸ್ಥೆಗಳನ್ನು ತಕ್ಷಣವೇ ಮುಚ್ಚಿಸಬೇಕು. ಈ ಪಿಡುಗನ್ನು ಬೇರುಸಹಿತ ಕಿತ್ತುಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕಿದೆ. ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುವುದು ಅನಿವಾರ್ಯವಾಗಿದೆ.