WEB
ದೇಶ

ಸಂಪಾದಕೀಯ: ಕಾನೂನು ಮೀರುವಂತಿಲ್ಲ

ವೈದ್ಯರು ಮತ್ತು ಸರ್ಕಾರಿ ನೌಕರರ ಮೇಲೆ ಹೆಚ್ಚುತ್ತಿರುವ ಹಲ್ಲೆಗಳ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಾನೂನನ್ನು ಗೌರವಿಸುವ ಹೊಣೆಗಾರಿಕೆ ಎಲ್ಲಕ್ಕಿಂತ ಹೆಚ್ಚಾಗಿ ಜನಪ್ರತಿನಿಧಿಗಳ ಮೇಲಿರುತ್ತದೆ ಎಂದಿರುವ ನ್ಯಾಯಾಲಯ, ಅವರ ಹುದ್ದೆಯ ಅಧಿಕಾರವು ಎಂದಿಗೂ ಕಾನೂನಿಗಿಂತ ಮಿಗಿಲಾಗಿರಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಹೇಳಿದೆ.

ವೈದ್ಯರು ಮತ್ತು ಸರ್ಕಾರಿ ನೌಕರರ ಮೇಲೆ ಹೆಚ್ಚುತ್ತಿರುವ ಹಲ್ಲೆಗಳ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಾನೂನನ್ನು ಗೌರವಿಸುವ ಹೊಣೆಗಾರಿಕೆ ಎಲ್ಲಕ್ಕಿಂತ ಹೆಚ್ಚಾಗಿ ಜನಪ್ರತಿನಿಧಿಗಳ ಮೇಲಿರುತ್ತದೆ ಎಂದಿರುವ ನ್ಯಾಯಾಲಯ, ಅವರ ಹುದ್ದೆಯ ಅಧಿಕಾರವು ಎಂದಿಗೂ ಕಾನೂನಿಗಿಂತ ಮಿಗಿಲಾಗಿರಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಹೇಳಿದೆ. ಕಾನೂನನ್ನು ಗೌರವಿಸುವ ಮತ್ತು ಸಾಂಸ್ಥಿಕ ವ್ಯವಸ್ಥೆಗಳ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆಯನ್ನು ಬಲಪಡಿಸುವ ಹೆಚ್ಚಿನ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನ ಮತ್ತು ಕಾನೂನಿಗಿಂತ ಯಾರೂ ಮಿಗಿಲಲ್ಲ; ಜನಪ್ರತಿನಿಧಿಗಳ ಅಧಿಕಾರ ಕಾನೂನನ್ನು ಮುರಿಯಲು ಪರವಾನಗಿಯಲ್ಲ ಎಂದು ನ್ಯಾಯಾಲಯ ನೀಡಿರುವ ಖಡಕ್ ಎಚ್ಚರಿಕೆ ಸಮಯೋಚಿತ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಂತಿದೆ.

ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಜನಪ್ರತಿನಿಧಿಗಳು, ಅವರ ಬೆಂಬಲಿಗರು ಕರ್ತವ್ಯನಿರತ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ಇತರ ವಿಭಾಗಗಳ ಸರ್ಕಾರಿ ಅಧಿಕಾರಿಗಳ ಮೇಲೆ ನಡೆಸುತ್ತಿರುವ ಬಲಪ್ರಯೋಗ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಬಹಿರಂಗ ಬೆದರಿಕೆಗಳು ಆತಂಕಕಾರಿ ಮಟ್ಟಕ್ಕೆ ತಲುಪಿವೆ. ಕೋವಿಡ್ ಕಾಲದಿಂದ ಹಿಡಿದು ಇಂದಿನವರೆಗೂ ಜೀವದ ಹಂಗು ತೊರೆದು ದುಡಿಯುವ ವೈದ್ಯಕೀಯ ವರ್ಗ ಹಾಗೂ ಆಡಳಿತ ಯಂತ್ರದ ಚಕ್ರಗಳಂತಿರುವ ನೌಕರರ ಮೇಲೆ ಇಂತಹ ದಬ್ಬಾಳಿಕೆ ನಡೆದಾಗ, ಇಡೀ ಸಾಂಸ್ಥಿಕ ವ್ಯವಸ್ಥೆಯ ನೈತಿಕ ಸ್ಥೈರ್ಯ ಕುಸಿಯುತ್ತದೆ, ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ತೊಂದರೆಯಾಗುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ರಕ್ಷಕರಾಗಬೇಕೇ ವಿನಃ ತಾವೇ ಸರ್ವಾಧಿಕಾರಿಗಳಂತೆ ವರ್ತಿಸಬಾರದು. ನ್ಯಾಯಾಲಯ ಸ್ಪಷ್ಟಪಡಿಸಿರುವಂತೆ, ಜನಪ್ರತಿನಿಧಿಗಳು ಕಾನೂನನ್ನು ಗೌರವಿಸಿದಾಗ ಮಾತ್ರ ಸಾರ್ವಜನಿಕರಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಗಟ್ಟಿಯಾಗುತ್ತದೆ.ಜನಪ್ರತಿನಿಧಿಗಳ ಸಲಹೆ, ಮಾರ್ಗದರ್ಶನ ಆಡಳಿತಕ್ಕೆ ಶಕ್ತಿಯಾಗಬೇಕೇ ಹೊರತು, ಹಲ್ಲೆ ಮತ್ತು ದೌರ್ಜನ್ಯಗಳ ಮೂಲಕ ಸರ್ಕಾರಿ ಯಂತ್ರವನ್ನು ನಿಷ್ಕ್ರಿಯಗೊಳಿಸುವುದು ಖಂಡನೀಯ.

ನ್ಯಾಯಾಲಯದ ಈ ಎಚ್ಚರಿಕೆ ಕೇವಲ ಮಾತುಗಳಿಗೆ ಸೀಮಿತವಾಗದೆ, ಅಂತಹ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮವಾಗಿ ಬದಲಾಗಬೇಕಿದೆ. ಜನಪ್ರತಿನಿಧಿಗಳು ಅಥವಾ ರಾಜಕಾರಣಿಗಳು ಎಷ್ಟೇ ಪ್ರಭಾವಿಯಾಗಿದ್ದರೂ, ಕಾನೂನು ಉಲ್ಲಂಘಿಸಿದಾಗ ತಕ್ಷಣವೇ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸುವ ವಾತಾವರಣ ನಿರ್ವಣವಾಗಬೇಕು. ರಾಜಕೀಯ ಪಕ್ಷಗಳು ಸಹ ಇಂತಹ ನಡವಳಿಕೆ ತೋರುವ ಮುಖಂಡರನ್ನು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು, ಶಿಸ್ತುಕ್ರಮ ಕೈಗೊಳ್ಳುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ. ಪ್ರಜಾಪ್ರಭುತ್ವ ಉಳಿಯುವುದು ಕಾನೂನಿನ ಪರಿಣಾಮಕಾರಿ ಅನುಷ್ಠಾನದಿಂದ. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸರ್ಕಾರಿ ಇಲಾಖೆಗಳ ಇತರ ಸಿಬ್ಬಂದಿ ಒತ್ತಡ ಹಾಗೂ ಆತಂಕಮುಕ್ತ ವಾತಾವರಣದಲ್ಲಿ ಕೆಲಸ ಮಾಡುವಂತಾಗಬೇಕು. ಈಗಿನ ವ್ಯವಸ್ಥೆಯ ಕಟು ವಾಸ್ತವವನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸಿ, ಪ್ರತಿಕ್ರಿಯಿಸಿದ್ದು ಈ ಮಾತುಗಳು ಅಧಿಕಾರದ ಪ್ರತಿಷ್ಠೆಯಲ್ಲಿ ತೇಲುತ್ತಿರುವ ಪ್ರತಿಯೊಬ್ಬ ರಾಜಕಾರಣಿಗೂ ಆತ್ಮಾವಲೋಕನದ ಸಂದೇಶವಾಗಲಿ.