ಸಂಪಾದಕೀಯ: ಡಿಜಿಟಲ್ ಸುರಕ್ಷತೆ ಸವಾಲು 
ದೇಶ

ಸಂಪಾದಕೀಯ: ಡಿಜಿಟಲ್ ಸುರಕ್ಷತೆ ಸವಾಲು

ವಿಶ್ವಾಸ್​ ಎನ್​ ಜೋಳದಾಳು
ಸಂಪಾದಕೀಯ: ಭಾರತವು ‘ಡಿಜಿಟಲ್ ಇಂಡಿಯಾ’ ಕನಸಿನೊಂದಿಗೆ ತಾಂತ್ರಿಕವಾಗಿ ಮುನ್ನುಗ್ಗುತ್ತಿರುವ ಈ ಕಾಲಘಟ್ಟದಲ್ಲಿ, ಅದರ ಕರಾಳ ಮುಖವೊಂದು ಸಂಸತ್ ಅಧಿವೇಶನದ ಅಂಕಿಅಂಶಗಳ ಮೂಲಕ ಅನಾವರಣಗೊಂಡಿದೆ. ಕಳೆದ ಐದು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳು ಶೇ. 140ರಷ್ಟು ಏರಿಕೆಯಾಗಿರುವುದು ಆತಂಕಕಾರಿ ವಿಷಯ ಮಾತ್ರವಲ್ಲ, ನಮ್ಮ ಸಾಮಾಜಿಕ ಸ್ವಾಸ್ಥ್ಯದ ಪತನಕ್ಕೆ ಹಿಡಿದ ಕನ್ನಡಿಯಾಗಿದೆ. ಇಂಟರ್ನೆಟ್ ಸೌಲಭ್ಯ ಮಹಿಳೆಯರ ಸಬಲೀಕರಣಕ್ಕೆ ದಾರಿಯಾಗಬೇಕಿತ್ತು, ಆದರೆ ದುರದೃಷ್ಟವಶಾತ್ ಅದು ಸೈಬರ್ ಕಿರುಕುಳದ ವೇದಿಕೆಯಾಗಿ ಮಾರ್ಪಡುತ್ತಿದೆ.
ಡಿಜಿಟಲ್ ಲೋಕದಲ್ಲಿ ನಡೆಯುತ್ತಿರುವ ವಂಚನೆಗಳು ಕೇವಲ ಹಣ ದೋಚುವುದಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ‘ಇಂಪರ್ಸನೇಷನ್’ ಪ್ರಕರಣಗಳು ಶೇ. 200ರಷ್ಟು ಹೆಚ್ಚಾಗಿವೆ. ಕೇವಲ ಒಂದು ಫೋಟೋ ಅಥವಾ ವಿಡಿಯೊವನ್ನು ಕೃತಕ ಬುದ್ಧಿಮತ್ತೆಯ (ಎಐ) ಸಹಾಯದಿಂದ ತಿರುಚಿ, ಮಹಿಳೆಯರನ್ನು ಬ್ಲ್ಯಾಕ್​​ವೆುೕಲ್ ಮಾಡುವ ‘ಡೀಪ್​ಫೇಕ್’ ತಂತ್ರಜ್ಞಾನ ಇಂದು ಹೊಸ ಮಾದರಿಯ ಸೈಬರ್ ಭಯೋತ್ಪಾದನೆಯಾಗಿ ಬೆಳೆಯುತ್ತಿದೆ. ಇದರೊಂದಿಗೆ, ಆನ್​ಲೈನ್ ಡೇಟಿಂಗ್ ಆಪ್​ಗಳ ಮೂಲಕ ಸ್ನೇಹ ಬೆಳೆಸಿ, ಭಾವನಾತ್ಮಕವಾಗಿ ವಂಚಿಸಿ ಹಣ ಪಡೆಯುವ ‘ರೊಮಾನ್ಸ್ ಸ್ಕ್ಯಾಮ್​ಗಳು ಹಾಗೂ ಕೆಲಸದ ಆಮಿಷವೊಡ್ಡಿ ಹಣ ವಸೂಲಿ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.
ಕೇಂದ್ರ ಸರ್ಕಾರ ಸೈಬರ್ ಸುರಕ್ಷತೆಗಾಗಿ 132 ಕೋಟಿ ರೂ.ಗಿಂತ ಅಧಿಕ ಹಣ ಮೀಸಲಿಟ್ಟಿರುವುದಾಗಿ ಹೇಳಿಕೊಂಡಿದೆ. ದೇಶಾದ್ಯಂತ ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯಗಳು ಸ್ಥಾಪನೆಯಾಗಿವೆ. ಆದರೆ, ವಾಸ್ತವದಲ್ಲಿ ಸಂತ್ರಸ್ತೆಯರಿಗೆ ನ್ಯಾಯ ಮರೀಚಿಕೆಯಾಗಿದೆ. ದೂರುಗಳು ದಾಖಲಾದ ನಂತರ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿದೆ ಎಂಬುದರ ನಿಖರ ಅಂಕಿಅಂಶಗಳೇ ಲಭ್ಯವಿಲ್ಲ. ಪೊಲೀಸ್ ಇಲಾಖೆಯಲ್ಲಿ ತಾಂತ್ರಿಕ ನೈಪುಣ್ಯದ ಕೊರತೆ ಮತ್ತು ಸೈಬರ್ ಕಾನೂನುಗಳ ಅನುಷ್ಠಾನದಲ್ಲಿರುವ ವಿಳಂಬ ನೀತಿ ಅಪರಾಧಿಗಳಿಗೆ ವರದಾನವಾಗುತ್ತಿದೆ. ಶಿಕ್ಷೆಯ ಭಯವಿಲ್ಲದಿದ್ದರೆ ಅಪರಾಧಗಳು ಇನ್ನೂ ಹತ್ತು ಪಟ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳ ಈ ಏರಿಕೆಗೆ ಇನ್ನೊಂದು ಕಾರಣವೆಂದರೆ, ಡಿಜಿಟಲ್ ಜಗತ್ತಿನಲ್ಲಿ ಒದಗಿಸಲಾಗುತ್ತಿರುವ ‘ಅನಾಮಧೇಯತೆ’. ಡಿಜಿಟಲ್ ಅರೆಸ್ಟ್ನಂತಹ ಹೊಸ ಮಾದರಿಯ ವಂಚನೆಗಳು ಹೆಚ್ಚಾಗುತ್ತಿವೆ. ಅದರಲ್ಲಿ ಮುಗ್ಧ ಮಹಿಳೆಯರಿಗೆ ಕಾನೂನಿನ ಭಯವೊಡ್ಡಿ ಗಂಟೆಗಟ್ಟಲೆ ಅಥವಾ ದಿನಗಟ್ಟಲೆ ವಿಡಿಯೋ ಕರೆಗಳಲ್ಲಿ ‘ಬಂಧಿಸಿಟ್ಟು’ ಹಣ ಸುಲಿಗೆ ಮಾಡಲಾಗುತ್ತಿದೆ. ಇಂತಹ ಮಾನಸಿಕ ಕಿರುಕುಳ ವ್ಯಕ್ತಿಯ ಆತ್ಮವಿಶ್ವಾಸವನ್ನೇ ಕುಂದಿಸುತ್ತದೆ.
ತಂತ್ರಜ್ಞಾನದ ಸುಳಿಯಲ್ಲಿ ಸಿಲುಕದಿರಲು ಜಾಗೃತಿಯೇ ಪ್ರಮುಖ ಅಸ್ತ್ರ. ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ವಿವರಗಳನ್ನು ಹಂಚಿಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸಬೇಕಿದೆ. ಅಪರಿಚಿತ ಲಿಂಕ್​ಗಳ ಮೇಲೆ ಕ್ಲಿಕ್ ಮಾಡುವುದು ಅಥವಾ ಅಪರಿಚಿತರೊಂದಿಗೆ ಸಂವಹನ ನಡೆಸುವುದು ಅಪಾಯಕಾರಿ. ಮಹಿಳೆಯರು ಸೈಬರ್ ಕಿರುಕುಳಕ್ಕೆ ಒಳಗಾದಾಗ ಮುಜುಗರಪಡದೆ ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೖೆಮ್ ಪೋರ್ಟಲ್ ಅಥವಾ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಕೇವಲ ಬಜೆಟ್ ಮೀಸಲಿಟ್ಟರೆ ಸಾಲದು; ಡಿಜಿಟಲ್ ಲೋಕದಲ್ಲಿ ಮಹಿಳೆಯರ ಘನತೆಯನ್ನು ರಕ್ಷಿಸುವ ದಿಸೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸಮಾಜವಾಗಿ ನಾವು ಡಿಜಿಟಲ್ ನೈತಿಕತೆಯನ್ನು ಮೈಗೂಡಿಸಿಕೊಳ್ಳದಿದ್ದರೆ, ಈ ತಾಂತ್ರಿಕ ಪ್ರಗತಿ ಕೇವಲ ಶಾಪವಾಗಿ ಉಳಿಯಲಿದೆ.