ಸಾಂದರ್ಭಿಕ ಚಿತ್ರ 
ದೇಶ

ಸಂಪಾದಕೀಯ: ವಿದ್ಯಾರ್ಥಿಗಳು ನಿರಾಳ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿ ಸೇರಿದಂತೆ ಇತರ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರದ ಆರೋಪದ ಮೇಲೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. 
ಈ ಮೂಲಕ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ. ಅಲ್ಲದೆ, ಯಾವುದೇ ಹೋರಾಟ ಮತ್ತು ಪ್ರತಿಭಟನೆಯನ್ನು ಶಾಂತಿಗೆ ಧಕ್ಕೆ ಬಾರದಂತೆ ನಡೆಸಬೇಕು ಎಂಬ ಮಹತ್ವದ ಸಂದೇಶವನ್ನು ಈ ಮೂಲಕ ವಿದ್ಯಾರ್ಥಿಗಳು ಮತ್ತು ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.
2026ರ ಜುಲೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗಳನ್ನು ರದ್ದುಗೊಳಿಸುವಂತೆ ದೆಹಲಿ ಪೊಲೀಸರು ಹಾಗೂ ಮಹಾರಾಷ್ಟ್ರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯಮಾಲ್ಯಾ ಬಾಗ್ಚಿ, ವಿ.ಮೋಹನಾ ಅವರನ್ನು ಒಳಗೊಂಡ ನ್ಯಾಯಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. 
ಪ್ರತಿಭಟನಾಕಾರರ ವಿರುದ್ಧದ ಎಫ್​ಐಆರ್​ಗಳನ್ನು ರದ್ದುಗೊಳಿಸಲು ಸಂವಿಧಾನದ 142ನೇ ವಿಧಿಯಡಿಯಲ್ಲಿ ಸುಪ್ರೀಂ ಕೋರ್ಟ್​ಗೆ ಇರುವ ವಿಶೇಷ ಅಧಿಕಾರವನ್ನು ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸೆಪ್ಟೆಂಬರ್ 5ರ ಪ್ರತಿಭಟನಾ ರ್ಯಾಲಿಯನ್ನು ಹಿಂಪಡೆದಿದೆ.
ಪರೀಕ್ಷಾ ಅಕ್ರಮದ ವಿರುದ್ಧ ಧ್ವನಿಯೆತ್ತಿ, ತಮ್ಮ ಉಜ್ವಲ ಭವಿಷ್ಯಕ್ಕಾಗಿ ರಸ್ತೆಗಿಳಿದಿದ್ದ ಸಾವಿರಾರು ಯುವಜನರ ಮೇಲೆ ಕ್ರಿಮಿನಲ್ ಪ್ರಕರಣಗಳ ತೂಗುಗತ್ತಿ ನೇತಾಡುತ್ತಿತ್ತು. ಈ ತೀರ್ಪು ಅವರ ಶೈಕ್ಷಣಿಕ ಮತ್ತು ವೃತ್ತಿ ಬದುಕಿನ ಮೇಲಿದ್ದ ದೊಡ್ಡ ಆತಂಕವನ್ನು ದೂರಮಾಡಿ ನಿರಾಳತೆ ತಂದಿದೆ. ನ್ಯಾಯಯುತ ಬೇಡಿಕೆಗಳಿಗಾಗಿ ಶಾಂತಿಯುತವಾಗಿ ಪ್ರತಿಭಟಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯು ನಾಗರಿಕರಿಗೆ ನೀಡಿರುವ ಸಂವಿಧಾನಬದ್ಧ ಹಕ್ಕು. ಪರೀಕ್ಷಾ ಅವ್ಯವಸ್ಥೆಯಿಂದ ಕಂಗಾಲಾಗಿದ್ದ ವಿದ್ಯಾರ್ಥಿ ಸಮುದಾಯ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದು ಅನಿವಾರ್ಯವಾಗಿತ್ತು. 
ಏಕೆಂದರೆ, ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಫಲಿತಾಂಶದ ಗೊಂದಲಗಳು ಕೇವಲ ಒಂದು ದಿನದ ಸಮಸ್ಯೆಯಲ್ಲ; ಅವು ಲಕ್ಷಾಂತರ ಯುವಜನರ ವರ್ಷಗಳ ಪರಿಶ್ರಮ, ತ್ಯಾಗ ಮತ್ತು ಭವಿಷ್ಯದ ಮೇಲಿನ ನೇರ ಹೊಡೆತ. ಆದರೆ ಆ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿ ಅವರ ಭವಿಷ್ಯವನ್ನೇ ಸಂಕಷ್ಟಕ್ಕೆ ತಳ್ಳಿದ್ದು ಸರಿಯಾದ ಕ್ರಮವಾಗಿರಲಿಲ್ಲ. ನ್ಯಾಯಾಲಯ ಈ ಸೂಕ್ಷ ್ಮೆಯನ್ನು ಪರಿಗಣಿಸಿ ಮಾನವೀಯ ನೆಲೆಗಟ್ಟಿನಲ್ಲಿ ತೀರ್ಪು ನೀಡಿರುವುದು ಸ್ವಾಗತಾರ್ಹ.
ಸುಪ್ರೀಂ ಕೋರ್ಟ್​ನ ಈ ತೀರ್ಪಿನೊಂದಿಗೆ ಒಂದು ಎಚ್ಚರಿಕೆಯ ಸಂದೇಶವೂ ಅಡಗಿದೆ. ಹೋರಾಟದ ಹಕ್ಕು ಎಷ್ಟೇ ಪವಿತ್ರವಾಗಿದ್ದರೂ, ಅದು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಾರದು. ವಿದ್ಯಾರ್ಥಿ ಹೋರಾಟಗಳ ನೇತೃತ್ವ ವಹಿಸಿಕೊಳ್ಳುವ ಸಂಘಟನೆಗಳು ಹಾಗೂ ನಾಯಕರು ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆಯದಂತೆ ನಿಗಾ ವಹಿಸುವುದು ಅತ್ಯಗತ್ಯ. 
ಪ್ರತಿಭಟನೆಯನ್ನು ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆಯಾಗಿ ನೋಡುವ ಬದಲು, ಯುವಜನರ ಅಸಮಾಧಾನದ ಮೂಲ ಕಾರಣವನ್ನು ಬಗೆಹರಿಸಲು ಸರ್ಕಾರಗಳು ಮುಂದಾಗಬೇಕು. ನ್ಯಾಯಾಲಯದ ಈ ತೀರ್ಪು ಯುವಜನರಿಗೆ ಹೊಸ ಭರವಸೆ ನೀಡುವ ಜತೆಗೆ, ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಶಿಸ್ತು ಮತ್ತು ಹೊಣೆಗಾರಿಕೆಯ ಮಹತ್ವವನ್ನು ನೆನಪಿಸಿದೆ.