ಸಾಂದರ್ಭಿಕ ಚಿತ್ರ 
ದೇಶ

ಸಂಪಾದಕೀಯ: ಕಠಿಣ ಕ್ರಮ ಅನಿವಾರ್ಯ

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆಯಂತಹ ಪ್ರಕರಣಗಳು ಸಮಾಜದ ಆತ್ಮಸಾಕ್ಷಿಯನ್ನೇ ಪ್ರಶ್ನಿಸುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರದಿಯಾಗಿರುವ ಅಪ್ರಾಪ್ತೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆಯಂತಹ ಪ್ರಕರಣಗಳು ಸಮಾಜದ ಆತ್ಮಸಾಕ್ಷಿಯನ್ನೇ ಪ್ರಶ್ನಿಸುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರದಿಯಾಗಿರುವ ಅಪ್ರಾಪ್ತೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಸೆ. 18ರಂದು 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಹತ್ಯೆ ಮಾಡಿದ ಆರೋಪ, ಸೆ. 22ರಂದು ಕಲ್ಕಾಜಿ ಬಳಿಯ ಉದ್ಯಾನದಲ್ಲಿ 17 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹಾಗೂ ಸೆ. 24ರಂದು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ವರದಿಯಾಗಿವೆ. ಈ ಘಟನೆಗಳು ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳಕ್ಕೆ ಕಾರಣವಾಗುತ್ತಿ್ತೆ.

ಮಹಿಳೆಯರ ಸುರಕ್ಷತೆ ಕಾನೂನು-ಸುವ್ಯವಸ್ಥೆಯ ವಿಷಯ ಮಾತ್ರವಲ್ಲ; ಅದು ನಾಗರಿಕತೆಗೆ ಮಾನದಂಡವೂ ಹೌದು. ಮಹಿಳೆಯರು ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾದರೆ, ಅಭಿವೃದ್ಧಿ ಮತ್ತು ಪ್ರಗತಿಯ ಕುರಿತ ಎಲ್ಲ ಹೆಗ್ಗಳಿಕೆಗಳೂ ಅರ್ಥ ಕಳೆದುಕೊಳ್ಳುತ್ತವೆ. ಮನೆ, ಕೆಲಸದ ಸ್ಥಳ, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಸಾರಿಗೆ ಮತ್ತು ಸಾಮಾಜಿಕ ಜಾಲತಾಣ- ಯಾವುದೇ ಸ್ಥಳದಲ್ಲೂ ಮಹಿಳೆಯರ ಸುರಕ್ಷತೆಗೆ ಧಕ್ಕೆಯಾಗಬಾರದು.

ಅತ್ಯಾಚಾರ ಮತ್ತು ದೌರ್ಜನ್ಯ ಎಸಗುವವರಿಗೆ ಕಾನೂನಿನ ಭಯ ಇಲ್ಲದಿರುವುದು ಅಪಾಯಕಾರಿ. ಪ್ರಕರಣ ದಾಖಲಿಸುವಲ್ಲಿ ವಿಳಂಬ, ತನಿಖೆಯಲ್ಲಿನ ಲೋಪ, ಸಾಕ್ಷ್ಯ ಸಂಗ್ರಹದ ನಿರ್ಲಕ್ಷ್ಯ ಮತ್ತು ನ್ಯಾಯಾಲಯದಲ್ಲಿ ವಿಚಾರಣೆ ದೀರ್ಘವಾಗುವುದು ಅಪರಾಧಿಗಳಿಗೆ ಪರೋಕ್ಷ ಉತ್ತೇಜನ ನೀಡಬಹುದು. ಹೀಗಾಗಿ ದೂರು ಸ್ವೀಕರಿಸುವುದರಿಂದ ಹಿಡಿದು ನ್ಯಾಯ ದೊರೆಯುವವರೆಗಿನ ಪ್ರತಿಯೊಂದು ಹಂತವೂ ಸಂತ್ರಸ್ತರ ಪರವಾಗಿರಬೇಕು. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ಪ್ರಭಾವಕ್ಕೆ ಮಣಿಯದೆ ಕಾನೂನು ಕ್ರಮ ಜರುಗಬೇಕು.

ಸಂತ್ರಸ್ತೆಯ ಕುಟುಂಬಕ್ಕೆ ಕಾನೂನು ನೆರವು, ವೈದ್ಯಕೀಯ ಚಿಕಿತ್ಸೆ, ಮಾನಸಿಕ ಬೆಂಬಲ ಮತ್ತು ಪುನರ್ವಸತಿ ಒದಗಿಸುವುದೂ ಸರ್ಕಾರದ ಜವಾಬ್ದಾರಿ. ದೌರ್ಜನ್ಯಕ್ಕೆ ಒಳಗಾದವರನ್ನೇ ಅಪರಾಧಿಗಳಂತೆ ನೋಡುವ ಮನೋಭಾವ ಬದಲಾಗಬೇಕು. ಅವರ ಉಡುಗೆ-ತೊಡುಗೆ ಅಥವಾ ಹೊರಗೆ ಸಂಚರಿಸುವ ಸಮಯವನ್ನು ಪ್ರಶ್ನಿಸುವ ಬದಲು, ಅಪರಾಧ ಎಸಗಿದವರ ಹೊಣೆಗಾರಿಕೆಯನ್ನು ಗುರುತಿಸಬೇಕು.

ಮಹಿಳೆಯರ ಸುರಕ್ಷತೆಗೆ ಪೊಲೀಸ್ ಗಸ್ತು, ಉತ್ತಮ ಬೀದಿ ದೀಪಗಳು, ಸುರಕ್ಷಿತ ಸಾರ್ವಜನಿಕ ಸಾರಿಗೆ, ತುರ್ತು ಸಹಾಯ ವ್ಯವಸ್ಥೆ, ಸಿಸಿಟಿವಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಬಲಪಡಿಸಬೇಕು. ತಂತ್ರಜ್ಞಾನವೊಂದರಿಂದಲೇ ಸುರಕ್ಷತೆ ಖಾತ್ರಿಯಾಗುವುದಿಲ್ಲ. ಶಾಲೆ-ಕಾಲೇಜುಗಳಲ್ಲಿ ಲಿಂಗಸಂವೇದನೆ, ಪರಸ್ಪರ ಗೌರವ ಮತ್ತು ಕಾನೂನಿನ ಅರಿವು ಮೂಡಿಸುವ ಶಿಕ್ಷಣ ಅಗತ್ಯ. ಕುಟುಂಬಗಳು ಹಾಗೂ ಸಮಾಜ ಕೂಡ ಅಪರಾಧ ತಡೆಗೆ ಕೈಜೋಡಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯುವುದು ಸರ್ಕಾರದ ಕರ್ತವ್ಯ ಮಾತ್ರವಲ್ಲ; ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ದೂರು ನೀಡುವವರನ್ನು ಪೋ›ತ್ಸಾಹಿಸುವ, ಸಂತ್ರಸ್ತರನ್ನು ಗೌರವಿಸುವ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವಂತಹ ವಾತಾವರಣ ನಿರ್ವಣವಾಗಬೇಕು. ಮಹಿಳೆಯರು ಭಯವಿಲ್ಲದೆ ಬದುಕುವಂತಾದಾಗ ಮಾತ್ರ ದೇಶದ ಅಭಿವೃದ್ಧಿಗೆ ನಿಜವಾದ ಅರ್ಥ ಸಿಗಲು ಸಾಧ್ಯ.