ಡಿಜಿಟಲ್ ವ್ಯಸನ ಹೆಚ್ಚುತ್ತಿರುವುದು ಈಚಿನ ವರ್ಷಗಳಲ್ಲಿ ಕಳವಳಕಾರಿ ಬೆಳವಣಿಗೆಯಾಗಿದೆ. ಅದರಲ್ಲೂ ಮಕ್ಕಳು ಮತ್ತು ಹರೆಯದವರಲ್ಲಿ ಈ ಹವ್ಯಾಸ ವಿಪರೀತ ಎಂಬಷ್ಟು ಹೆಚ್ಚಿರುವುದು ಆತಂಕದ ಮೊತ್ತವನ್ನು ಇಮ್ಮಡಿಸಿದೆ. ಈ ವ್ಯಸನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಲೋಕಸಭೆಯಲ್ಲಿ ಗುರುವಾರ ಮಂಡನೆಯಾದ ಆರ್ಥಿಕ ಸಮೀಕ್ಷೆಯಲ್ಲಿ ಕೆಲವು ಸಲಹೆಗಳಿರುವುದು ಗಮನಾರ್ಹ. ಮಕ್ಕಳಲ್ಲಿ ಡಿಜಿಟಲ್ ಹವ್ಯಾಸ ತಗ್ಗಿಸಲು ಸಾಮಾಜಿಕ ಜಾಲತಾಣಗಳಿಗೆ ಪ್ರವೇಶ ಕಲ್ಪಿಸಲು ವಯೋಮಿತಿ ಕಡ್ಡಾಯ ಮಾಡಲು ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿದೆ.
ಆಸ್ಟ್ರೇಲಿಯಾ, ಚೀನಾ ಮತ್ತು ದಕ್ಷಿಣ ಕೊರಿಯಾದಂಥ ದೇಶಗಳಲ್ಲಿ ಸಾಮಾಜಿಕ ಜಾಲತಾಣ ಬಳಕೆಗೆ ಈಗಾಗಲೇ ವಯೋಮಿತಿ ನಿಗದಿಪಡಿಸಲಾಗಿರುವುದು ಉಲ್ಲೇಖನೀಯ. ಮಕ್ಕಳ ನಿತ್ಯದ ಚಟುವಟಿಕೆಗಳ ಮೇಲೆ ಶಾಲೆಗಳ ಪ್ರಭಾವ ಅಧಿಕವಾಗಿರುತ್ತದೆ. ಹೀಗಾಗಿ ಸ್ಕ್ರೀನ್ ಟೈಮ್ ಸಾಕ್ಷರತೆ, ಸೈಬರ್ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಅರಿವನ್ನು ಒಳಗೊಂಡ ಡಿಜಿಟಲ್ ಯೋಗಕ್ಷೇಮ ಪಠ್ಯಕ್ರಮವನ್ನು ಪರಿಚಯಿಸಬೇಕು ಎಂದು ಸಹ ವರದಿ ಸರ್ಕಾರಕ್ಕೆ ಸಲಹೆ ನೀಡಿದೆ. 15-24 ವಯೋಮಾನದವರಲ್ಲಿ ಡಿಜಿಟಲ್ ತೊಡಗುವಿಕೆಯ ಪ್ರಮಾಣ ಹೆಚ್ಚು ಎಂದು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಅಧ್ಯಯನಗಳು ತಿಳಿಸಿವೆ.
‘ಸಾಮಾಜಿಕ ಜಾಲತಾಣಗಳು, ಜೂಜಿನ ಆಪ್ಗಳು ಮತ್ತು ಉದ್ದೇಶಿತ ಜಾಹೀರಾತುಗಳ ವಿಷಯದಲ್ಲಿ ವಯಸ್ಸಿನ ದೃಢೀಕರಣ ಮತ್ತು ವಯಸ್ಸಿಗೆ ಅನುಗುಣವಾಗಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಆನ್ಲೈನ್ ಪ್ಲಾ್ಯಟ್ಫಾಮರ್್ಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು’ಎಂದು ಕೂಡ ಆರ್ಥಿಕ ಸಮೀಕ್ಷಾ ವರದಿಯು ಸಲಹೆ ನೀಡಿದೆ. ಸಾಮಾಜಿಕ ಜಾಲತಾಣಗಳ ವ್ಯಸನವು ಆತಂಕ, ಖಿನ್ನತೆ ಮತ್ತು ಸೈಬರ್ ಬೆದರಿಕೆಯ ಒತ್ತಡಗಳಿಗೆ ನೇರವಾಗಿ ಸಂಬಂಧಿಸಿದೆ ಎಂಬುದರತ್ತ ಸಹ ಆರ್ಥಿಕ ಸಮೀಕ್ಷೆ ವರದಿ ಬೊಟ್ಟುಮಾಡಿರುವುದನ್ನು ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ.
ಹದಿಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಾಮಾಜಿಕ ಜಾಲತಾಣ ಬಳಸುವುದಕ್ಕೆ ನಿರ್ಬಂಧ ವಿಧಿಸಬೇಕೆಂದು ಕೋರಿ ಕಳೆದ ವರ್ಷ ಸವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ‘ಇದು ನೀತಿನಿರೂಪಣೆಗೆ ಸಂಬಂಧಿಸಿದ ವಿಷಯ. ಸಂಸತ್ತು ಈ ಬಗ್ಗೆ ಕಾನೂನು ಮಾಡಬೇಕು’ಎಂದು ಕೋರ್ಟ್ ಹೇಳಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಕಂಟೆಂಟ್ಗಳ ಮೇಲೆ ನಿಯಂತ್ರಣ ಬೇಕೆಂಬ ವಿಚಾರದಲ್ಲಿ ನ್ಯಾಯಾಲಯಗಳು ವಿವಿಧ ಸಂದರ್ಭಗಳಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಿದೆ.
ಕೃತಕ ಬುದ್ಧಿಮತ್ತೆ ಬಳಸಿ ಅನ್ಯರ ಅಶ್ಲೀಲ ಚಿತ್ರಗಳನ್ನು ರಚಿಸಿ ಪ್ರಕಟಿಸುವ ಸಂಗತಿ ಈಚೆಗೆ ಭಾರಿ ವಿವಾದವೆಬ್ಬಿಸಿತ್ತು. ಇದರಿಂದ ಅಮಾಯಕರು ತೊಂದರೆಗೆ ಸಿಕ್ಕಿಬೀಳುವಂತಾಗುತ್ತದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಸಂಬಂಧಿಸಿದ ಸಂಸ್ಥೆ ಅಂಥ ಕಂಟೆಂಟ್ಗಳನ್ನು ತೆಗೆದುಹಾಕಿತ್ತು ಮತ್ತು ಅನೇಕ ಖಾತೆಗಳನ್ನು ಡಿಲಿಟ್ ಮಾಡಿತ್ತು. ಈ ಕುರಿತ ಕಾನೂನು ಮತ್ತು ನಿಯಮಗಳನ್ನು ಪಾಲಿಸುವುದಾಗಿಯೂ ಭರವಸೆ ನೀಡಿತ್ತು. ಮಕ್ಕಳು ಸಹ ಸೈಬರ್ ಕಿರುಕುಳಕ್ಕೆ ಒಳಗಾಗುವ ವರದಿಗಳು ಆಗೀಗ ಬರುತ್ತಲೇ ಇರುತ್ತವೆ.
ಸರ್ಕಾರ ಆರ್ಥಿಕ ಸಮೀಕ್ಷೆಯ ವರದಿಯ ಶಿಫಾರಸುಗಳನ್ನು ಗಂಭೀರವಾಗಿ ತೆಗೆದುಕೊಂಡು, ಪರಿಹಾರೋಪಾಯದತ್ತ ಕಾರ್ಯೋನ್ಮುಖವಾಗುವುದು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯ. ತಂತ್ರಜ್ಞಾನವನ್ನು ಸಾರಾಸಗಟಾಗಿ ನಿರಾಕರಿಸಲಾಗದು. ಅದರ ಸಕಾರಾತ್ಮಕ ಪ್ರಯೋಜನಗಳನ್ನು ತೆಗೆದುಕೊಳ್ಳುತ್ತಲೇ ವಿವೇಚನಾಯುಕ್ತ ಬಳಕೆಯತ್ತಲೂ ಜನರಲ್ಲಿನ ಅರಿವು ಮೂಡಿಸುವುದು ಇಂದಿನ ತುರ್ತ. ಈ ದಿಕ್ಕಿನಲ್ಲಿ ಅಗತ್ಯ ನಿಯಮಗಳನ್ನು ರೂಪಿಸಲು ಸರ್ಕಾರ ಮುಂದಾಗಲಿ.