ಸಂಪಾದಕೀಯ: ತನ್ನದೇ ನೀತಿಗಳನ್ನು ಒಪ್ಪಿಕೊಳ್ಳಬೇಕು ಎಂಬ ಒತ್ತಡವನ್ನು ಸೃಷ್ಟಿಸಿ ಅಮೆರಿಕ ಇತರ ರಾಷ್ಟ್ರಗಳ ಮೇಲೆ ಸುಂಕ ಸಮರ ಸಾರಿದೆ. ಇದು ವಾಣಿಜ್ಯ ವಲಯದಲ್ಲಿ ಗೊಂದಲವನ್ನು, ಅಸ್ಥಿರತೆಯನ್ನು ಸೃಷ್ಟಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ಭಾರತ ಮತ್ತು ಚೀನಾದ ಮೇಲೆ ಹೆಚ್ಚು ಸುಂಕ ವಿಧಿಸಿದ್ದು, ಬೆದರಿಕೆ ತಂತ್ರವನ್ನು ಮುಂದುವರಿಸಿದ್ದಾರೆ. ಭಾರತವು ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಅಮೆರಿಕದ ಜತೆ ಮಾತುಕತೆ ನಡೆಸುತ್ತಿರುವಾಗಲೇ, ಇತರ ರಾಷ್ಟ್ರಗಳೊಂದಿಗಿನ ವಾಣಿಜ್ಯ ಸಂಬಂಧವನ್ನು ಗಟ್ಟಿಯಾಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಭಾರತ ಯಾವುದೇ ಒತ್ತಡ ಅಥವಾ ಬೆದರಿಕೆ ತಂತ್ರಕ್ಕೆ ಮಣಿಯುವುದಿಲ್ಲ ಎಂದು ಈ ಮೂಲಕ ಅಮೆರಿಕಕ್ಕೆ ಸ್ಪಷ್ಟ ಸಂದೇಶವೂ ರವಾನೆಯಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಭಾರತದ ಜತೆಗೆ ವ್ಯಾಪಾರ&ವಹಿವಾಟು ಹೆಚ್ಚಿಸಲು ಹಲವು ಪ್ರಮುಖ ರಾಷ್ಟ್ರಗಳು ಉತ್ಸಾಹ ತೋರಿವೆ.
ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತವು ಈವರೆಗೆ ಶ್ರೀಲಂಕಾ, ಭೂತಾನ್, ಥಾಯ್ಲೆಂಡ್, ಸಿಂಗಾಪುರ, ಮಲೇಷ್ಯಾ, ಕೊರಿಯಾ, ಜಪಾನ್, ಆಸ್ಟ್ರೆಲಿಯಾ, ಸಂಯುಕ್ತ ಅರಬ್ ಸಂಸ್ಥಾನ, ಮಾರಿಷಸ್ ಮತ್ತು ಆಗ್ನೇಯ ಏಷ್ಯಾದ ಆಸಿಯಸ್ನ 10 ರಾಷ್ಟ್ರಗಳು ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಐಸ್ಲೆಂಡ್, ಲಿಕ್ಟನ್ ಸ್ಪೈನ್, ನಾರ್ವೆ ಮತ್ತು ಸ್ವಿರ್ಜರ್ಲೆ0ಡ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ, ಐರೋಪ್ಯ ಒಕ್ಕೂಟ, ಚಿಲಿ, ಪೆರು ಮತ್ತು ಇಸ್ರೇಲ್ ಜತೆಗೂ ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿ ಮಾತುಕತೆ ನಡೆಯುತ್ತಿದೆ.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ರಾಷ್ಟ್ರಗಳ ನಡುವೆ ನಡೆಯುವ ಆರ್ಥಿಕ ಹೊಂದಾಣಿಕೆಯೇ ಎಫ್ಟಿಎ. ಇದು ರಫ್ತು ಹಾಗೂ ಹೂಡಿಕೆಯನ್ನು ಹೆಚ್ಚಿಸುವ ಕ್ರಮವಾಗಿದೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಹಲವು ಪ್ರಯೋಜನಗಳಿವೆ. ಪಾಲುದಾರ ರಾಷ್ಟ್ರಗಳ ಉತ್ಪನ್ನಗಳು ಭಾರತಕ್ಕೆ ಶೂನ್ಯ ತೆರಿಗೆಯೊಂದಿಗೆ ಪ್ರವೇಶಿಸುತ್ತವೆ. ಇದರಿಂದ ರ್ತು ಮಾರುಕಟ್ಟೆಯಲ್ಲಿ ವೈವಿಧ್ಯ ಮತ್ತು ವಿಸ್ತರಣೆಗೂ ಅನುಕೂಲವಾಗುತ್ತದೆ. ಈ ಮಧ್ಯೆ, ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಸಂಬಂಧ ಒಮ್ಮತ ಮೂಡಿರುವುದು ಗಮನಾರ್ಹ. ನ್ಯೂಜಿಲೆಂಡ್ ಜತೆ ಬರುವ ಮೂರು ತಿಂಗಳಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಬೀಳುವ ಸಾಧ್ಯತೆ ಇದೆ. ಒಪ್ಪಂದ ಅಧಿಕೃತವಾಗಿ ಜಾರಿಯಾದ ಬಳಿಕ ಭಾರತದ ಜವಳಿ, ಪ್ಲಾಸ್ಟಿಕ್ ವಸ್ತುಗಳು, ಚಮೋರ್ತ್ಯನ್ನ ಹಾಗೂ ಇಂಜಿನಿಯರಿಂಗ್ ಸರಕುಗಳು ಯಾವುದೇ ಸುಂಕವಿಲ್ಲದೆ ನ್ಯೂಜಿಲೆಂಡ್ ಪ್ರವೇಶಿಸುತ್ತವೆ. ಮುಂದಿನ 15 ವರ್ಷಗಳ ಅವಧಿಯಲ್ಲಿ 20 ಶತಕೋಟಿ ಡಾಲರ್ ನೇರ ಬಂಡವಾಳ ಹೂಡಿಕೆಗೆ ಸಿದ್ಧ ಎಂದು ನ್ಯೂಜಿಲೆಂಡ್ ಹೇಳಿದ್ದು, ಈ ಮೂಲಕ ಉಭಯ ರಾಷ್ಟ್ರಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.