ಸಂಪಾದಕೀಯ: ನೈಜ ಸಾಧಕರಿಗೆ ಸಂದ ಗೌರವ
ಸಂಪಾದಕೀಯ: ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನ ಪ್ರಕಟವಾಗುವ ಪದ್ಮ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಗೌರವಗಳು. 2026ನೇ ಸಾಲಿಗೆ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೊಷಿಸಲಾಗಿದ್ದು, ಇದರಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಇವೆ. ಈ ಬಾರಿಯ ಪಟ್ಟಿಯನ್ನು ಗಮನಿಸಿದರೆ, ಪ್ರಚಾರದ ಬೆಳಕಿನಿಂದ ದೂರವಿದ್ದು, ತಳಮಟ್ಟದಲ್ಲಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ‘ಅನ್ಸಂಗ್ ಹೀರೋಸ್’ (ಅನಾಮಧೇಯ ಸಾಧಕರು) ಮತ್ತು ಕಾಯಕಯೋಗಿಗಳಿಗೆ ಹೆಚ್ಚಿನ ಮನ್ನಣೆ ಸಿಕ್ಕಿರುವುದು ಎದ್ದು ಕಾಣುತ್ತಿದೆ. ಇದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸುವುದಲ್ಲದೆ, ‘ಜನಸಾಮಾನ್ಯರ ಪದ್ಮ’ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ.
ಈ ಬಾರಿಯ ಪಟ್ಟಿಯಲ್ಲಿ 19 ಮಹಿಳೆಯರು ಇದ್ದಾರೆ. ಇತ್ತೀಚೆಗೆ ನಿಧನರಾದ ನಟ ಧಮೇಂದ್ರ , ಕೇರಳದ ವಿ.ಎಸ್. ಅಚ್ಯುತಾನಂದನ್ರಂತಹ ಗಣ್ಯರಿಗೆ ಮರಣೋತ್ತರ ಪ್ರಶಸ್ತಿ ಘೊಷಿಸಲಾಗಿದೆ. ರೋಹಿತ್ ಶರ್ವ, ವಿಜಯ್ ಅಮೃತರಾಜ್, ಸವಿತಾ ಪೂನಿಯಾರಂತಹ ಕ್ರೀಡಾಪಟುಗಳು, ಗಾಯಕಿ ಅಲ್ಕಾ ಯಾಗ್ನಿಕ್, ನಟ ಮಮ್ಮೂಟ್ಟಿ, ಉದ್ಯಮಿ ಉದಯ್ ಕೋಟಕ್ರಂತಹ ಪ್ರಸಿದ್ಧರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನಸಾಮಾನ್ಯರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ.
ಇದರೊಂದಿಗೆ, ಕರ್ನಾಟಕದ ಎಂಟು ಜನ ಸಾಧಕರಿಗೆ ಈ ಬಾರಿ ಗೌರವ ಸಂದಿರುವುದು ಹೆಮ್ಮೆಯ ವಿಷಯ. ಶತಾವಧಾನಿ ಡಾ. ಆರ್. ಗಣೇಶ್ ಪದ್ಮಭೂಷಣಕ್ಕೆ ಪಾತ್ರರಾಗಿದ್ದರೆ, ಕೆಎಲ್ಇ ಶಿಕ್ಷಣ ಸಂಸ್ಥೆ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ, ಮಂಡ್ಯದ ಪುಸ್ತಕಮನೆಯ ಅಂಕೇಗೌಡ, ಸಾಹಿತ್ಯ-ಶಿಕ್ಷಣ ಕ್ಷೇತ್ರದ ಶಶಿಶೇಖರ ವೇಂಪತಿ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಶುಭಾ ವೆಂಕಟೇಶ ಅಯ್ಯಂಗಾರ್, ವೈದ್ಯಕೀಯ ಕ್ಷೇತ್ರದ ಡಾ. ಸುರೇಶ ಹನಗವಾಡಿ, ವ್ಯಾಪಾರ-ಕೈಗಾರಿಕೆ ಕ್ಷೇತ್ರದ ಟಿ.ಟಿ. ಜಗನ್ನಾಥನ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಬಾರಿಯ ಪದ್ಮ ಪ್ರಶಸ್ತಿ ಪಟ್ಟಿ ಕೇವಲ ಪ್ರಸಿದ್ಧ ವ್ಯಕ್ತಿಗಳಿಗೆ ಅಥವಾ ಗಣ್ಯರಿಗೆ ಸೀಮಿತವಾಗದೆ, ಸಮಾಜದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಜನರನ್ನೂ ಗುರುತಿಸಿರುವುದು ಅಭಿನಂದನಾರ್ಹ. ಪ್ರಚಾರದ ಹಪಾಹಪಿಯಿಲ್ಲದೆ, ಅದ್ದೂರಿತನ-ಆರ್ಭಟಗಳಿಂದ ದೂರವಿದ್ದು, ಹಳ್ಳಿ-ಪಟ್ಟಣಗಳ ಮೂಲೆಯಲ್ಲಿ ಮೌನವಾಗಿ ಕ್ರಾಂತಿ ಮಾಡುತ್ತಿರುವ ಸಾಧಕರನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಈ ಸಾಧಕರ್ಯಾರೂ ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ; ತಮ್ಮ ಬದ್ಧತೆ ಮತ್ತು ಸಮಾಜದ ಹಿತಕ್ಕಾಗಿ ಜೀವನವನ್ನೇ ಸವೆಸಿದವರು. ದೊಡ್ಡ ಸಾಧನೆ ಮಾಡಲು ಪ್ರಚಾರ, ಅಧಿಕಾರ ಅಥವಾ ಹಣಕ್ಕಿಂತಲೂ ‘ದೃಢ ಸಂಕಲ್ಪ’ ಮುಖ್ಯ ಎಂಬುದನ್ನು ಈ ಸಾಧಕರು ಸಾಬೀತುಪಡಿಸಿದ್ದಾರೆ. ಇಂತಹ ಅಪ್ರತಿಮ ಸಾಧಕರನ್ನು ಗುರುತಿಸುವ ಕೇಂದ್ರ ಸರ್ಕಾರದ ಕೆಲಸ ಇಡೀ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತದೆ.
ಈ ಪ್ರಶಸ್ತಿಗಳು ಕೇವಲ ವೈಯಕ್ತಿಕ ಗೌರವವಲ್ಲ, ಬದಲಾಗಿ ಅವರು ಪ್ರತಿನಿಧಿಸುವ ಕ್ಷೇತ್ರ ಮತ್ತು ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಸಿಕ್ಕ ಜಯ. ಅನಾಮಧೇಯ ಸಾಧಕರಿಗೆ ಈ ಉನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡುವ ಮೂಲಕ ಪ್ರಶಸ್ತಿಯ ಘನತೆ ಮತ್ತು ಮೌಲ್ಯ ಎರಡೂ ಹೆಚ್ಚಿವೆ. ಪ್ರಚಾರದ ಬೆಳಕಿನಿಂದ ದೂರವಿರುವ ಇಂತಹ ರತ್ನಗಳನ್ನು ಹುಡುಕಿ ಗೌರವಿಸುವ ಪದ್ಧತಿ ಮುಂದುವರಿಯಲಿ.