Editorial 
ದೇಶ

ಸಂಪಾದಕೀಯ: ತಪ್ಪುಗಳ ಪುನರಾವರ್ತನೆ

ಉತ್ತರ ಗೋವಾದ ಅರ್ಪೇರಾದಲ್ಲಿರುವ ‘ಬರ್ಚ್ ಬೈ ರೋಮಿಯೋ ಲೇನ್’ ನೈಟ್ ಕ್ಲಬ್​ನಲ್ಲಿ ಶನಿವಾರ ತಡರಾತ್ರಿ 1 ಗಂಟೆಗೆ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಐವರು ಪ್ರವಾಸಿಗರು, ಇಪ್ಪತ್ತು ಸಿಬ್ಬಂದಿ ಸೇರಿದಂತೆ 25 ಜನ ಮೃತಪಟ್ಟು ಐವತ್ತಕ್ಕೂ ಹೆಚ್ಚು ಜನ ಗಾಯಗೊಂಡಿರುವುದು ವಿಷಾದನೀಯ. ಕ್ಲಬ್ ಅಲಂಕಾರಕ್ಕೆ ಅಳವಡಿಸಿದ್ದ ತಾಳೆ ಗರಿಗಳು ನೋಡನೋಡುತ್ತಿದ್ದಂತೆ ಹೊತ್ತಿ ಉರಿದಿದ್ದರಿಂದ ಕ್ಷಣಾರ್ಧದಲ್ಲಿ ಇಡೀ ಕ್ಲಬ್​ಗೆ ಬೆಂಕಿ ಆವರಿಸಿ ದುರಂತ ಸಂಭವಿಸಿದೆ. ಅಗ್ನಿಕಾಂಡದ ಸಂಬಂಧ ಕ್ಲಬ್ ಮ್ಯಾನೇಜರ್​ನನ್ನು ಬಂಧಿಸಲಾಗಿದ್ದು ಮಾಲೀಕನ ಸೆರೆಗೆ ವಾರಂಟ್ ಹೊರಡಿಸಲಾಗಿದೆ. ಅಗ್ನಿ ಸುರಕ್ಷತಾ ನಿಯಮ ಮತ್ತು ನಿರ್ಮಾಣ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ದುರಂತಕ್ಕೆ ಕಾರಣ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ದೇಶಾದ್ಯಂತ ಹಲವು ಕಡೆ ಪದೇಪದೆ ಅಗ್ನಿ ಅವಘಡಗಳು ಸಂಭವಿಸಿದರೂ ಅವುಗಳಿಂದ ಜನರಾಗಲಿ, ಸರ್ಕಾರಗಳಾಗಲಿ ಪಾಠ ಕಲಿಯುವುದಿಲ್ಲ ಎಂಬುದಕ್ಕೆ ಗೋವಾ ಘಟನೆ ಜ್ವಲಂತ ನಿದರ್ಶನ. ಕ್ಲಬ್ ಒಳಗೇ ಒಳಾಂಗಣ ಸಿಡಿಮದ್ದು (ಇಂಡೋರ್ ಫೈರ್​ಕ್ರ್ಯಾಕರ್ಸ್) ಸಿಡಿಸಿದ್ದು ಈ ಅಗ್ನಿ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಆದರೆ ಅಲ್ಲಿ ಮೂಲತಃ ಅಗ್ನಿ ಸುರಕ್ಷತೆಗೆ ಇರಬೇಕಾದ ಮುನ್ನೆಚ್ಚರಿಕೆ ಕ್ರಮಗಳೇ ಇರಲಿಲ್ಲ ಎಂಬುದು ಪೊಲೀಸರ ಹೇಳಿಕೆ. ಈ ರೀತಿಯ ಸುರಕ್ಷತಾ ಕ್ರಮಗಳಿಲ್ಲದ ಸಾವಿರಾರು ಕಟ್ಟಡಗಳು ಎಲ್ಲೆಡೆ ಇವೆ. ಈಗಲಾದರೂ ಎಲ್ಲ ಸರ್ಕಾರಗಳು ಆಮೂಲಾಗ್ರ ಅಗ್ನಿ ಸುರಕ್ಷಾ ಆಡಿಟ್ ನಡೆಸಬೇಕು. ಸುರಕ್ಷಾ ಕ್ರಮಗಳ ಕಟ್ಟುನಿಟ್ಟಾದ ಜಾರಿಗೆ ಕ್ರಮ ಕೈಗೊಳ್ಳಬೇಕು.
ಕ್ಲಬ್ ಕಟ್ಟಡ ಅಕ್ರಮವಾಗಿ ನಿರ್ವಣವಾಗಿತ್ತು. ಕ್ಲಬ್​ಗೆ ಯಾವುದೇ ನಿರ್ಮಾಣ ಪರವಾನಗಿ ಇರಲಿಲ್ಲ. ಈ ಹಿಂದೆ ನಿಯಮ ಉಲ್ಲಂಘನೆಗಾಗಿ ಪಂಚಾಯತ್ ವತಿಯಿಂದ ಕ್ಲಬ್ ಕೆಡವಲು ನೋಟಿಸ್ ನೀಡಲಾಗಿತ್ತು. ಆದರೆ, ಮಾಲೀಕರು ಮೇಲ್ಮನವಿ ಸಲ್ಲಿಸಿ, ತಡೆಯಾಜ್ಞೆ ತಂದಿದ್ದರು ಎಂದು ಅರಪೋರಾ-ನಾಗೋವಾ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಕಟ್ಟಡಗಳ ವಿರುದ್ಧ ಮತ್ತು ಸುರಕ್ಷಾ ಕ್ರಮಗಳನ್ನು ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೆ ಇರುವುದು, ಇಂಥ ದುರಂತಗಳಿಗೆ ಕಾರಣವಾಗುತ್ತಿದೆ. ಯಾರೋ ಮಾಡುವ ತಪ್ಪಿಗೆ ಅಮಾಯಕರು ಪ್ರಾಣ ಕಳೆದುಕೊಳ್ಳುವುದು ದುಃಖದ ಸಂಗತಿ.
ಗೋವಾ ಪ್ರವಾಸೋದ್ಯಮಕ್ಕೆ ಹೆಸರಾದ ರಾಜ್ಯ. ದೇಶದ ಎಲ್ಲ ರಾಜ್ಯಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯೇನೋ ಹೆಚ್ಚುತ್ತಿದೆ. ಆದರೆ, ಪ್ರವಾಸಿಗರನ್ನು ನಿರ್ವಹಿಸಬೇಕಾದ ವ್ಯವಸ್ಥೆ ಸನ್ನದ್ಧಗೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರ ನಿರಾಶಾದಾಯಕವಾಗಿದೆ. ಗೋವಾ 41 ದೊಡ್ಡ ಕ್ಲಬ್​ಗಳು ಮತ್ತು 1747 ಬಾರ್​ಗಳನ್ನು ಹೊಂದಿದೆ. ಹೊಸ ನಿರ್ವಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಕ್ರಿಸ್​ವುಸ್ ಮತ್ತು ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಅಸುರಕ್ಷಿತ ಕಟ್ಟಡ, ಪ್ರದೇಶಗಳಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆದರೆ ಜೀವರಕ್ಷಣೆಯ ಹೊಣೆ ಯಾರದ್ದು? ಪ್ರವಾಸೋದ್ಯಮದಿಂದ ಆದಾಯ ಪಡೆಯುವ ಕ್ಲಬ್, ರೆಸ್ಟೋರೆಂಟ್​ಗಳು ಸುರಕ್ಷೆಯ ನಿಯಮಗಳನ್ನು ಪರಿಣಾಮಕಾರಿಯಾಗಿ ಪಾಲಿಸಬೇಕು. ಅಗ್ನಿ ಶಮನಕ್ಕೆ ಸಂಬಂಧಿಸಿ ಸೂಕ್ತ ವ್ಯವಸ್ಥೆ ಮಾಡಿರಬೇಕು. ಕಟ್ಟಡ ನಿರ್ಮಾಣ ಇಕ್ಕಟ್ಟಾದ ಪ್ರದೇಶದಲ್ಲಿ ಅಥವಾ ತಪು್ಪ ವಿನ್ಯಾಸದಲ್ಲಿ ಮಾಡಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂಬುದಕ್ಕೆ ಗೋವಾದ ದುರಂತ ಸಾಕ್ಷಿಯಾಗಿದ್ದು, ಈ ಘಟನೆಯಿಂದ ಸಂಬಂಧಿತ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ.
ಇದು ಗೋವಾಕ್ಕೆ ಸೀಮಿತ ಸಮಸ್ಯೆಯಲ್ಲ. ಅಕ್ರಮ ಕಟ್ಟಡ ನಿರ್ಮಾಣ ಮತ್ತು ನಿಯಮಗಳ ಉಲ್ಲಂಘನೆ ದೇಶದ ಮಹಾನಗರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ.