ಸಂಪಾದಕೀಯ: ವದಂತಿಗೆ ಕಡಿವಾಣ ಹಾಕಿ 
ದೇಶ

ಸಂಪಾದಕೀಯ: ವದಂತಿಗೆ ಕಡಿವಾಣ ಹಾಕಿ

ಸಂಪಾದಕೀಯ: ದೇಶದಲ್ಲಿ ಸೂಕ್ತ ಪ್ರಮಾಣದಲ್ಲಿ ಇಂಧನ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ಹಲವೆಡೆ ವದಂತಿಗಳನ್ನು ಹರಡಿ ಅನವಶ್ಯಕ ಆತಂಕ ಸೃಷ್ಟಿಸಲಾಗುತ್ತಿರುವುದು ಖಂಡನೀಯ. ಇಂಥ ವದಂತಿಗಳ ಪರಿಣಾಮದಿಂದ ಬುಧವಾರ ತೆಲಂಗಾಣದಲ್ಲಿ ಗೊಂದಲದ ಸ್ಥಿತಿ ನಿರ್ವಣವಾಗಿದ್ದು, ಜನರು ಪೆಟ್ರೋಲ್, ಡೀಸೆಲ್ ಖರೀದಿಗೆ ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದದ್ದು ಮಾತ್ರವಲ್ಲ, ಪಾತ್ರೆ ಹಾಗೂ ಕುಕ್ಕರ್​ಗಳಲ್ಲಿ ಸಂಗ್ರಹಿಸಿಕೊಂಡು ಹೋದ ವಿಲಕ್ಷಣ ಘಟನೆ ನಡೆದಿದೆ.
ಎಲ್​ಪಿಜಿ ಮರುಪೂರಣ ಅವಧಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂಬ ವದಂತಿ ಜನಸಾಮಾನ್ಯರ ಆತಂಕ್ಕಕೆ ಕಾರಣವಾಯಿತು. ಗೃಹಬಳಕೆ ಸಿಲಿಂಡರ್ ಮರುಪೂರಣ (ರಿಫಿಲಿಂಗ್) ಅವಧಿಯನ್ನು ಹೆಚ್ಚಿಸಿಲ್ಲ, ಈ ಬಗ್ಗೆ ಮೊದಲಿದ್ದ ನಿಯಮವೇ ಮುಂದುವರಿಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಿಲಿಂಡರ್ ಮರುಪೂರಣ ಅವಧಿಯನ್ನು 25 ದಿನದಿಂದ 35 ದಿನಕ್ಕೆ ಹೆಚ್ಚಿಸಲಾಗಿದೆ ಎಂಬ ವರದಿಗಳನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿ ಹಾಕಿದೆ. ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಖರೀದಿಯ ಬಳಿಕ 25 ದಿನಗಳ ನಂತರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 45 ದಿನಗಳ ನಂತರ ಮತ್ತೊಂದು ಸಿಲಿಂಡರ್ ಪಡೆಯಬಹುದು ಎಂದು ಸ್ಪಷ್ಟಪಡಿಸಿದೆ.
‘ಇಂಧನ ಲಾಕ್​ಡೌನ್ 2026’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳು ಜನರಲ್ಲಿ ಆತಂಕ ಮೂಡಿಸಿವೆ. ವದಂತಿಗಳನ್ನು ನಂಬಿದ ಜನರು ಏಕಾಏಕಿ ಪೆಟ್ರೋಲ್ ಬಂಕ್​ಗಳಿಗೆ ನುಗ್ಗಿದ್ದರಿಂದ, ಕೆಲವು ಬಂಕ್​ಗಳಲ್ಲಿ ತಾತ್ಕಾಲಿಕವಾಗಿ ಸ್ಟಾಕ್ ಖಾಲಿಯಾಗಿತ್ತು. ಇದು ನಿಜವಾದ ಕೊರತೆ ಎಂಬಂತೆ ಬಿಂಬಿತವಾಯಿತು. ಭಾರತದ ಅತಿದೊಡ್ಡ ತೈಲ ಕಂಪನಿಗಳಾದ ಐಒಸಿ ಹಾಗೂ ಬಿಪಿಸಿಎಲ್ ಮತ್ತು ಎಚ್​ಪಿಸಿಎಲ್​ಗಳು ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್​ಪಿಜಿ ದಾಸ್ತಾನು ಸಮರ್ಪಕವಾಗಿದೆ ಎಂದು ತಿಳಿಸಿವೆ. ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ ಮತ್ತು ಅಂತಹ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದೆ.
ದೇಶಾದ್ಯಂತ ಪೆಟ್ರೋಲಿಯಂ ಸ್ಟಾಕ್​ಗಳ ಮೇಲ್ವಿಚಾರಣೆ ಮಾಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಇಂಧನ ಕಾಳಸಂತೆ ತಡೆಗಟ್ಟಲು ಮತ್ತು ಅನಗತ್ಯ ಸಂಗ್ರಹ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಧ್ಯಪ್ರಾಚ್ಯದ ಸಂಘರ್ಷದ ನಡುವೆಯೂ ಭಾರತವು ಪಶ್ಚಿಮ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಂತಹ ವಿವಿಧ ದೇಶಗಳಿಂದ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತಿದೆ.
ಎಲ್​ಪಿಜಿ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಬೇಡಿಕೆಯ ಒತ್ತಡವನ್ನು ತಗ್ಗಿಸಲು ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್​ಜಿ) ಸಂಪರ್ಕವನ್ನು ವಿಸ್ತರಿಸಲು ವೇಗವಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶದಲ್ಲಿ ಇಂಧನದ ಯಾವುದೇ ಕೊರತೆಯಿಲ್ಲ. ಪೆಟ್ರೋಲ್ ಬಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ, ಜನರು ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ವದಂತಿಯನ್ನು ನಂಬಿ ಆತಂಕಕ್ಕೆ ಒಳಗಾಗಬಾರದು. ಅತಿಯಾದ ಇಂಧನ ಸಂಗ್ರಹಣೆ ಮಾಡಬಾರದು. ಅಲ್ಲದೆ, ವದಂತಿ, ಸುಳ್ಳು ಸುದ್ದಿ, ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.