ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸ್ಥಿತಿ ಕಳವಳಕಾರಿಯಾಗಿದೆ. ಸುಪ್ರೀಂಕೋರ್ಟ್ ನೇಮಿಸಿರುವ ಕಾರ್ಯಪಡೆಯ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ 2.43 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಲಾಗಿದ್ದು, ಕಳೆದ ಆರು ತಿಂಗಳಲ್ಲಿ ಶೇ. 15ರಷ್ಟು ವಿದ್ಯಾರ್ಥಿಗಳು ಹಲವು ವಾರಗಳ ಕಾಲ ತೀವ್ರ ಒತ್ತಡ, ಆತಂಕ ಅಥವಾ ಖಿನ್ನತೆಯಂತಹ ಸ್ಥಿತಿ ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಶೇ. 9ರಷ್ಟು ವಿದ್ಯಾರ್ಥಿಗಳು ಕೆಲವೊಮ್ಮೆ ಆತ್ಮಹತ್ಯೆಯ ಆಲೋಚನೆ ಮಾಡಿದ್ದಾಗಿ ಹೇಳಿದ್ದಾರೆ. ಶೇ. 34ರಷ್ಟು ವಿದ್ಯಾರ್ಥಿಗಳು ತಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ತಮಗೆ ಹೊರಗಿನವರು ಎಂಬ ಭಾವನೆ ಬಂದಿತ್ತೆಂದು ಹೇಳಿದ್ದಾರೆ. ಇದು ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯೊಳಗಿನ ಗಂಭೀರ ಸಮಸ್ಯೆಗಳ ಸೂಚನೆ.
ಶಿಕ್ಷಣ ಸಂಸ್ಥೆಗಳಲ್ಲಿನ ಒತ್ತಡಕ್ಕೆ ಕಾರಣಗಳು ಹಲವು. ಕಠಿಣ ಹಾಜರಾತಿ ನಿಯಮಗಳು, ಹೆಚ್ಚಿನ ಪಠ್ಯದ ಹೊರೆ, ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ದೀರ್ಘ ಅವಧಿಯ ಕರ್ತವ್ಯ, ಎಂಜಿನಿಯರಿಂಗ್ ಶಿಕ್ಷಣದಲ್ಲಿನ ತೀವ್ರ ಸ್ಪರ್ಧೆ, ಉದ್ಯೋಗದ ಕುರಿತ ನಿರಂತರ ಆತಂಕ, ಅಧ್ಯಾಪಕರ ಕೊರತೆ ಮತ್ತು ಸಮರ್ಪಕ ಶೈಕ್ಷಣಿಕ ಮಾರ್ಗದರ್ಶನದ ಅಭಾವ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿವೆ. ಸಂಶೋಧನಾ ವಿದ್ಯಾರ್ಥಿಗಳಲ್ಲಿ ಮಾರ್ಗದರ್ಶಕರ ಅತಿಯಾದ ನಿಯಂತ್ರಣ ಅಥವಾ ನಿರ್ಲಕ್ಷ್ಯದ ಬಗ್ಗೆಯೂ ದೂರುಗಳು ವ್ಯಕ್ತವಾಗಿವೆ. ಜಾತಿ ಮತ್ತು ಲಿಂಗ ತಾರತಮ್ಯ, ಕಿರುಕುಳ ಕೂಡ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.
ಆತ್ಮಹತ್ಯೆ ತಡೆಯಲು ವಸತಿ ನಿಲಯಗಳಲ್ಲಿನ ಸೀಲಿಂಗ್ ಫ್ಯಾನ್ಗಳನ್ನು ಬದಲಿಸುವಂತಹ ಕ್ರಮಗಳನ್ನು ಕೆಲವು ಶಿಕ್ಷಣ ಸಂಸ್ಥೆಗಳು ಕೈಗೊಳ್ಳುತ್ತಿವೆ. ಇಂತಹ ಕ್ರಮಗಳು ಈ ಸಮಸ್ಯೆಗೆ ಸೂಕ್ತ ಪರಿಹಾರ ಎನ್ನಲು ಸಾಧ್ಯವಿಲ್ಲ. ಭೌತಿಕ ಬದಲಾವಣೆಗಳಿಗಿಂತ ವಿದ್ಯಾರ್ಥಿಯ ಮನಸ್ಸಿನಲ್ಲಿರುವ ಒತ್ತಡ, ಹತಾಶೆಯನ್ನು ಗುರುತಿಸಿ ಪರಿಹರಿಸುವ ವ್ಯವಸ್ಥೆ ಅಗತ್ಯ.
ಸುಪ್ರೀಂಕೋರ್ಟ್ ನೇಮಿಸಿರುವ ಕಾರ್ಯಪಡೆಯ ಸಮೀಕ್ಷೆಯಲ್ಲೇ ಸುಮಾರು ಶೇ. 32ರಷ್ಟು ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಲ್ಲಿ ಸಮಾಲೋಚನಾ ಸೇವೆ ಇಲ್ಲವೆಂದು ತಿಳಿಸಿದ್ದಾರೆ. ಇದು ಅತ್ಯಂತ ಗಮನಾರ್ಹ ಅಂಶ. ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲೂ ತರಬೇತಿ ಪಡೆದ ಸಮಾಲೋಚಕರು, ಅಗತ್ಯವಿದ್ದಾಗ ತಜ್ಞರ ನೆರವು ಪಡೆಯುವ ವ್ಯವಸ್ಥೆ ಮತ್ತು ತುರ್ತು ಪರಿಸ್ಥಿತಿಗೆ ಸ್ಪಷ್ಟ ಕಾರ್ಯವಿಧಾನ ಇರಬೇಕು. ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಳ್ಳುವುದನ್ನು ದೌರ್ಬಲ್ಯವೆಂದು ಭಾವಿಸದಂತೆ ಮಾನಸಿಕ ಆರೋಗ್ಯದ ಕುರಿತ ಕಳಂಕವನ್ನು ಕಡಿಮೆ ಮಾಡಬೇಕು.
ವಿದ್ಯಾರ್ಥಿಗಳ ಸುರಕ್ಷತೆ ಎಂದರೆ ಕೇವಲ ಭೌತಿಕ ಸುರಕ್ಷತೆಯಲ್ಲ. ಅವರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದಾದ, ತಾರತಮ್ಯವಿಲ್ಲದೆ ನಡೆದುಕೊಳ್ಳುವ ಮತ್ತು ತಪ್ಪು ಮಾಡಿದಾಗಲೂ ಮಾರ್ಗದರ್ಶನ ಪಡೆಯಬಹುದಾದ ವಾತಾವರಣ ಅಗತ್ಯ. ಆಡಳಿತದ ಮೇಲಿನ ವಿಶ್ವಾಸವೂ ಮುಖ್ಯ. ಸಮೀಕ್ಷೆಯಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ಗಂಭೀರ ಸಮಸ್ಯೆಗಳನ್ನು ಆಡಳಿತ ನ್ಯಾಯಯುತವಾಗಿ ನಿಭಾಯಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವುದು, ಉಳಿದವರಲ್ಲಿ ವಿಶ್ವಾಸದ ಕೊರತೆಯಿರುವ ಸಾಧ್ಯತೆಯನ್ನೂ ತೋರಿಸುತ್ತದೆ.
ಉನ್ನತ ಶಿಕ್ಷಣದ ಗುರಿ ಕೇವಲ ಉತ್ತಮ ಅಂಕ ಅಥವಾ ಉದ್ಯೋಗ ಪಡೆಯುವ ವಿದ್ಯಾರ್ಥಿಗಳನ್ನು ಸೃಷ್ಟಿಸುವುದಲ್ಲ; ಆತ್ಮವಿಶ್ವಾಸದಿಂದ ಬದುಕಬಲ್ಲ ಯುವಜನರನ್ನು ರೂಪಿಸುವು ಉನ್ನತ ಶಿಕ್ಷಣದ ಕೆಲಸ. ಸ್ಪರ್ಧೆ ಇರಲಿ, ಆದರೆ ಅದು ಮಾನವೀಯತೆಯನ್ನು ಮೀರಬಾರದು. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಆದ್ಯತೆ ನೀಡುವ ಸಮಯ ಈಗ ಬಂದಿದೆ.