ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆಗೆ ಹೊಸ ರೂಪ ನೀಡಲು ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ. ಎಲ್ಲ ರಾಜ್ಯಗಳಲ್ಲೂ ಲೋಕಸಭೆ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯೂ ಇದರ ಭಾಗವಾಗಿದೆ. 2029ರ ಲೋಕಸಭೆ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂಬ ಸರ್ಕಾರದ ಉದ್ದೇಶ ಈ ನಿರ್ಧಾರದಿಂದ ಸ್ಪಷ್ಟವಾಗಿದೆ.
ಮಹಿಳಾ ಮೀಸಲಾತಿ ಮಸೂದೆಗೆ 2023ರಲ್ಲಿ ಸಂಸತ್ತಿನ ಅನುಮೋದನೆ ದೊರೆತಿತ್ತು. ಆದರೆ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಬಳಿಕವಷ್ಟೇ ಮೀಸಲಾತಿ ಜಾರಿಗೆ ಬರಬೇಕೆಂಬ ಷರತ್ತಿನಿಂದ ಅನುಷ್ಠಾನ ವಿಳಂಬವಾಗುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗ ಹೊಸ ತಿದ್ದುಪಡಿ ಪ್ರಸ್ತಾವನೆ ಮುಂದಿಟ್ಟಿದೆ. ಲೋಕಸಭೆಯ ಈಗಿನ 543 ಸ್ಥಾನಗಳನ್ನು ಗರಿಷ್ಠ 850ಕ್ಕೆ ಹೆಚ್ಚಿಸುವುದು, 2011ರ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡುವುದು ಹಾಗೂ ರಾಜ್ಯಗಳ ನಡುವಿನ ಈಗಿನ ಪ್ರಾತಿನಿಧ್ಯದ ಅನುಪಾತವನ್ನು 2051ರವರೆಗೆ ಕಾಯ್ದುಕೊಳ್ಳುವುದು ಇದರ ಪ್ರಮುಖ ಅಂಶಗಳಾಗಿವೆ. ದಕ್ಷಿಣ ರಾಜ್ಯಗಳ ಆತಂಕವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ರಾಜ್ಯಗಳ ಸ್ಥಾನಗಳನ್ನು ಸಮಾನವಾಗಿ ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆ ಮಾಡಿರುವುದು ಗಮನಾರ್ಹ.
ಮಹಿಳಾ ಮೀಸಲಾತಿ ಎಂದರೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಕೆಲವು ಸ್ಥಾನಗಳನ್ನು ಮಹಿಳೆಯರಿಗೆ ನೀಡುವುದಷ್ಟೇ ಅಲ್ಲ. ದೇಶದ ನೀತಿ ನಿರೂಪಣೆ, ಆಡಳಿತ ಮತ್ತು ಅಭಿವೃದ್ಧಿಯ ನಿರ್ಧಾರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಕ್ರಮವಿದು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯಿಂದ ಮಹಿಳೆಯರು ಸಾರ್ವಜನಿಕ ಬದುಕಿನಲ್ಲಿ ನಾಯಕತ್ವ ವಹಿಸಲು ಅವಕಾಶ ದೊರೆತಿದೆ. ಈಗ ಇದೇ ಅವಕಾಶವನ್ನು ರಾಷ್ಟ್ರಮಟ್ಟದ ರಾಜಕೀಯದಲ್ಲೂ ವಿಸ್ತರಿಸುವ ಅಗತ್ಯವಿದೆ. ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳಾ ಸಬಲೀಕರಣವನ್ನು ಅಭಿವೃದ್ಧಿಯ ಪ್ರಮುಖ ಭಾಗವಾಗಿ ಪರಿಗಣಿಸಿದೆ. ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಗೆ ಸಾಂವಿಧಾನಿಕ ಭರವಸೆ ನೀಡುವ ಈ ಪ್ರಯತ್ನ ಅದಕ್ಕೆ ಪೂರಕವಾಗಿದೆ. ಆದರೆ ಏಪ್ರಿಲ್ನಲ್ಲಿ ಮಂಡನೆಯಾಗಿದ್ದ ಹಿಂದಿನ ಮಸೂದೆಗೆ ಲೋಕಸಭೆಯಲ್ಲಿ ಅಗತ್ಯವಾದ ಮೂರನೇ ಎರಡರಷ್ಟು ಬೆಂಬಲ ದೊರೆಯದೆ ಅಂಗೀಕಾರವಾಗಿರಲಿಲ್ಲ. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು.
ನ. 30ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಯ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಬೇಕು. ಪಕ್ಷ ರಾಜಕಾರಣ, ಆರೋಪ-ಪ್ರತ್ಯಾರೋಪ ಮತ್ತು ಗದ್ದಲಗಳಿಗೆ ಅವಕಾಶ ನೀಡದೆ ಎಲ್ಲ ಪಕ್ಷಗಳೂ ಮಹಿಳೆಯರ ಹಿತದೃಷ್ಟಿಯಿಂದ ಒಮ್ಮತಕ್ಕೆ ಬರಬೇಕು. ಸಂವಿಧಾನ ತಿದ್ದುಪಡಿಗೆ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬೆಂಬಲ ಅಗತ್ಯವಿದೆ. ಹೀಗಾಗಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮಸೂದೆಗೆ ಬೆಂಬಲ ನೀಡುವುದು ಎಲ್ಲ ಪಕ್ಷಗಳ ಜವಾಬ್ದಾರಿ. ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಈ ಐತಿಹಾಸಿಕ ಹೆಜ್ಜೆ ವಿಳಂಬವಾಗದಿರಲಿ.