ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಣದುಬ್ಬರದ ಮುನ್ನೋಟದ ಅಂದಾಜನ್ನು ಹೆಚ್ಚಿಸಿರುವುದು ದೇಶದ ಆರ್ಥಿಕತೆಯ ಮುಂದಿನ ಹಾದಿ ಸುಲಭವಲ್ಲ ಎಂಬುದಕ್ಕೆ ಸ್ಪಷ್ಟ ಮುನ್ಸೂಚನೆ. 2026-27ರಲ್ಲಿ ಹಣದುಬ್ಬರ ದರವು ಶೇ.5.2ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ, ಇದು ಈ ಹಿಂದೆ ಶೇ.5.0 ಇತ್ತು. ಮುಂಬರುವ ದಿನಗಳಲ್ಲಿ ಬೆಲೆಯೇರಿಕೆಯ ತೀವ್ರತೆ ಇನ್ನಷ್ಟು ಹೆಚ್ಚಲಿದೆ ಎಂಬ ಕಳವಳ ಕೇವಲ ಅಂಕಿ-ಅಂಶಗಳ ಆಟವಲ್ಲ. ಅದು ಪ್ರತಿಯೊಬ್ಬ ಜನಸಾಮಾನ್ಯನ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಗಂಭೀರ ವಾಸ್ತವ.
ಹಣದುಬ್ಬರವನ್ನು ಹಳಿಗೆ ತರಲು ಆರ್ಬಿಐ ರೆಪೊ ದರವನ್ನು 5.25%ರಿಂದ 5.50%ಕ್ಕೆ ಏರಿಸಿದ ಬೆನ್ನಲ್ಲೇ ದೇಶದ ಪ್ರಮುಖ ವಾಣಿಜ್ಯ ಬ್ಯಾಂಕ್ಗಳು ಸಾಲದ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಕ್ಷಣಮಾತ್ರವೂ ತಡಮಾಡಲಿಲ್ಲ. ಪರಿಣಾಮವಾಗಿ, ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲ ಪಡೆದ ಮಧ್ಯಮ ವರ್ಗದ ಜನರ ಮಾಸಿಕ ಕಂತುಗಳ (ಇಎಂಐ) ಹೊರೆ ಗಣನೀಯವಾಗಿ ಹೆಚ್ಚಿದೆ. ಒಂದೆಡೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ, ಇನ್ನೊಂದೆಡೆ ಸಾಲದ ಮೇಲಿನ ಬಡ್ಡಿ ಹೊರೆಯೂ ಹೆಚ್ಚಿರುವುದರಿಂದ ಸಂಕಷ್ಟ ಮತ್ತಷ್ಟು ತೀವ್ರಗೊಂಡಿದೆ. ಇದು ಮಾರುಕಟ್ಟೆಯಲ್ಲಿ ಜನರ ಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಮೇಲೆಯೇ ಮಂಕು ಕವಿಯುವಂತೆ ಮಾಡುವ ಅಪಾಯವೂ ಇದೆ.
ಹಣದುಬ್ಬರ ನಿಯಂತ್ರಣಕ್ಕೆ ಕೇವಲ ಹಣಕಾಸು ನೀತಿಯ ದರ ಏರಿಕೆಯ ಅಸ್ತ್ರವೊಂದೇ ಸಾಲದು ಎಂಬುದನ್ನು ನೀತಿ ನಿರೂಪಕರು ಅರಿಯಬೇಕಿದೆ. ಬಡ್ಡಿದರ ಏರಿಕೆಯು ಮಾರುಕಟ್ಟೆಯಲ್ಲಿನ ನಗದಿನ ಹರಿವನ್ನು ನಿಯಂತ್ರಿಸಬಹುದೇ ಹೊರತು, ಪೂರೈಕೆ ಕೊರತೆಯಿಂದ ಉಂಟಾಗುವ ಬೆಲೆಯೇರಿಕೆಗೆ ಶಾಶ್ವತ ಉತ್ತರವಲ್ಲ. ಪ್ರಸ್ತುತ ಜಾಗತಿಕ ವಲಯದಲ್ಲಿ ಭೌಗೋಳಿಕ-ರಾಜಕೀಯ ಸಂಘರ್ಷಗಳು, ಪೂರೈಕೆ ಸರಪಳಿಯ ಬಿಕ್ಕಟ್ಟು ಮತ್ತು ಕಚ್ಚಾ ತೈಲ ದರಗಳ ಏರಿಳಿತಗಳು ನಿರಂತರ ಅನಿಶ್ಚಿತತೆಯನ್ನು ಸೃಷ್ಟಿಸಿವೆ. ಇಂತಹ ಜಾಗತಿಕ ಆಘಾತಗಳು ನಮ್ಮ ದೇಶೀಯ ಮಾರುಕಟ್ಟೆಯ ಮೇಲೂ ಒತ್ತಡ ಹೇರಿವೆ. ಆದ್ದರಿಂದ, ದೇಶದ ಆರ್ಥಿಕತೆಯ ಸುಧಾರಣೆಗೆ ಮತ್ತು ಹಣದುಬ್ಬರದ ನಿಯಂತ್ರಣಕ್ಕೆ ಇನ್ನಷ್ಟು ಪರ್ಯಾಯ ಕ್ರಮಗಳ ಅಗತ್ಯವಿದೆ.
ಕೃಷಿ ಉತ್ಪನ್ನಗಳು ಮತ್ತು ಅಗತ್ಯ ದಿನಬಳಕೆಯ ವಸ್ತುಗಳ ಸಾಗಣೆ, ಶೇಖರಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಬಲಪಡಿಸಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ. ಇಂಧನ ಮತ್ತು ಕಚ್ಚಾವಸ್ತುಗಳ ಮೇಲಿನ ತೆರಿಗೆ ಹೊರೆಯನ್ನು ತುಸು ತಗ್ಗಿಸುವ ಮೂಲಕ ಉತ್ಪಾದನಾ ಮತ್ತು ಸಾರಿಗೆ ವೆಚ್ಚ ಇಳಿಕೆಗೆ ಸರ್ಕಾರ ಮುಂದಾಗಬೇಕು. ಬಡ್ಡಿದರ ಏರಿಕೆಯಿಂದ ತತ್ತರಿಸುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಬಂಡವಾಳದ ಕೊರತೆಯಾಗದಂತೆ ವಿಶೇಷ ರಕ್ಷಣಾ ಕ್ರಮಗಳನ್ನು ಒದಗಿಸುವುದು ತುರ್ತು ಅಗತ್ಯ.
ಬೆಲೆಯೇರಿಕೆಯನ್ನು ಹತೋಟಿಗೆ ತರುವ ಪ್ರಯತ್ನದಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತವಾಗದಂತೆ ಸಮತೋಲನ ಕಾಯ್ದುಕೊಳ್ಳುವುದು ಇಂದಿನ ಸವಾಲು. ಆರ್ಬಿಐನ ಹಣಕಾಸು ಕ್ರಮಗಳಿಗೆ ಪೂರಕವಾಗಿ ಕೇಂದ್ರ ಸರ್ಕಾರವು ದೃಢವಾದ ಆಡಳಿತಾತ್ಮಕ ಮತ್ತು ನೀತಿಪರ ನಿರ್ಧಾರಗಳನ್ನು ಕೈಗೊಂಡಾಗ ಮಾತ್ರ ದೇಶದ ಅರ್ಥವ್ಯವಸ್ಥೆ ಮತ್ತು ಜನಸಾಮಾನ್ಯರು ಈ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯ.