ದೇಶ

ಸಂಪಾದಕೀಯ | ಮಾನದಂಡ ಬದಲಾಗಲಿ

ಭಾರತದಲ್ಲಿ ಬಡತನದ ಪ್ರಮಾಣ ವೇಗವಾಗಿ ಕಡಿಮೆಯಾಗುತ್ತಿದೆ ಎಂಬ ವಿಶ್ವಬ್ಯಾಂಕ್​ನ ಇತ್ತೀಚಿನ ಬಡತನ ಮತ್ತು ಸಮಾನತೆಯ ಸಂಕ್ಷಿಪ್ತ ವರದಿಯು ಹೊರನೋಟಕ್ಕೆ ಹರ್ಷ ತರುವ ಅಂಕಿ-ಅಂಶವಾಗಿದೆ. ಆದರೆ, ಇದೇ ವರದಿಯು ತೆರೆದಿಟ್ಟಿರುವ ಮತ್ತೊಂದು ಕಟು ವಾಸ್ತವವು ನಮ್ಮ ನೀತಿ ನಿರೂಪಕರನ್ನು ಗಂಭೀರ ಆತ್ಮಾವಲೋಕನಕ್ಕೆ ಹಚ್ಚಬೇಕಿದೆ.

ದೇಶದ ಒಟ್ಟು ಜನಸಂಖ್ಯೆಯ ಶೇಕಡ 35ರಷ್ಟಿರುವ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್​ಗಳನ್ನು ಒಳಗೊಂಡ ಕಾರಿಡಾರ್​ನಲ್ಲಿಯೇ ದೇಶದ ಒಟ್ಟು ಬಡವರ ಪೈಕಿ ಶೇಕಡ 57ರಷ್ಟು ಮಂದಿ ನೆಲೆಸಿದ್ದಾರೆ. ಈ ತೀವ್ರ ಪ್ರಾದೇಶಿಕ ಅಸಮಾನತೆಯು, ನಮ್ಮ ಆರ್ಥಿಕ ವೃದ್ಧಿಯ ಲಾಭಗಳು ಎಲ್ಲ ವರ್ಗ ಹಾಗೂ ಪ್ರದೇಶಗಳಿಗೆ ಸಮಾನವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಕಾಲ ಬದಲಾದಂತೆ ಬಡತನವನ್ನು ವ್ಯಾಖ್ಯಾನಿಸುವ ದೃಷ್ಟಿಕೋನವೂ ವಿಕಸನಗೊಳ್ಳಬೇಕಾಗುತ್ತದೆ. 1960ರ ದಶಕದವರೆಗೆ ಅಥವಾ ಹಸಿರು ಕ್ರಾಂತಿಯ ಪೂರ್ವದಲ್ಲಿ, ದೇಶದ ಪ್ರಮುಖ ಕಾಳಜಿ ಹಸಿವು ನೀಗಿಸುವುದು ಹಾಗೂ ದಿನನಿತ್ಯದ ಧಾನ್ಯ ಪೂರೈಕೆಯಾಗಿತ್ತು. ಅಂದಿನ ಪರಿಸ್ಥಿತಿಯಲ್ಲಿ ಕನಿಷ್ಠ ಕ್ಯಾಲೊರಿ ಸೇವನೆ ಅಥವಾ ದೈನಂದಿನ ಗ್ರಾಹಕ ವೆಚ್ಚದ ಆಧಾರದ ಮೇಲೆ ಬಡತನ ರೇಖೆಯನ್ನು ನಿರ್ಧರಿಸಿದ್ದು ಪ್ರಸ್ತುತವಾಗಿತ್ತು. ಆದರೆ, ಇಂದಿನ ಇಪ್ಪತ್ತೊಂದನೇ ಶತಮಾನದ ಆಕಾಂಕ್ಷೆಯ ಭಾರತದಲ್ಲಿ ನಾಗರಿಕರ ಅಗತ್ಯಗಳು ಹೊಟ್ಟೆ ತುಂಬಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನ, ಸುರಕ್ಷತೆ ಮತ್ತು ಸಾಮಾಜಿಕ ಚಲನಶೀಲತೆಯನ್ನು ಬಯಸುತ್ತಿದ್ದಾನೆ.

ಇಂದು ಬಡ ಕುಟುಂಬಗಳಿಗೆ ಬೇಕಿರುವುದು ಕೇವಲ ಜೀವ ಉಳಿಸಿಕೊಳ್ಳುವ ಧಾನ್ಯವಲ್ಲ. ಬದಲಿಗೆ ಮುಂದಿನ ಪೀಳಿಗೆಯನ್ನು ಬಡತನದ ವಿಷವರ್ತಲದಿಂದ ಶಾಶ್ವತವಾಗಿ ಪಾರುಮಾಡಬಲ್ಲ ಸಾಧನಗಳು. ಸರ್ಕಾರಗಳು ನೀಡುವ ಐದು ಕೆಜಿಯ ಉಚಿತ ಪಡಿತರವು ಹಸಿವಿನಿಂದ ರಕ್ಷಣೆ ನೀಡಬಲ್ಲದೇ ಹೊರತು ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಉದ್ಯೋಗಾವಕಾಶವನ್ನು ಕರುಣಿಸಲಾರದು. ಇಂದಿನ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆಧುನಿಕ ಕೌಶಲಗಳು ಮತ್ತು ತಾಂತ್ರಿಕ ಜ್ಞಾನ ಅನಿವಾರ್ಯ. ದುರಂತವೆಂದರೆ, ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ತೀವ್ರವಾಗಿ ವಾಣಿಜ್ಯೀಕರಣಗೊಂಡು ದುಬಾರಿಯಾಗುತ್ತಿವೆ.

ಬಡ ಕುಟುಂಬದ ಸದಸ್ಯರೊಬ್ಬರು ಗಂಭೀರ ಅನಾರೋಗ್ಯಕ್ಕೆ ತುತ್ತಾದರೆ, ಆಸ್ಪತ್ರೆಯ ವೈದ್ಯಕೀಯ ವೆಚ್ಚಗಳನ್ನು ಭರಿಸಲಾಗದೆ ಇಡೀ ಕುಟುಂಬವೇ ಸಾಲದ ಕೂಪಕ್ಕೆ ಸಿಲುಕುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇತ್ತ, ಗುಣಮಟ್ಟದ ಉನ್ನತ ಶಿಕ್ಷಣ ಭರಿಸಲಾಗದ ಕಾರಣ ಯುವಕ-ಯುವತಿಯರು ಶಾಲೆ-ಕಾಲೇಜುಗಳನ್ನು ಅರ್ಧಕ್ಕೇ ತೊರೆಯುತ್ತಿದ್ದಾರೆ. ಪರಿಣಾಮವಾಗಿ, ಅಲ್ಪಾವಧಿಯ ಆರ್ಥಿಕ ಅನಿವಾರ್ಯತೆಗಾಗಿ ಎಳೆಯ ವಯಸ್ಸಿನಲ್ಲೇ ಅಸುರಕ್ಷಿತ, ಸಾಮಾಜಿಕ ಭದ್ರತೆಯಿಲ್ಲದ ಗಿಗ್ ಆರ್ಥಿಕತೆಯ ತಾತ್ಕಾಲಿಕ ಕಾರ್ವಿುಕರಾಗಿ ಸಿಲುಕಿಕೊಳ್ಳುತ್ತಿದ್ದಾರೆ.

ಕಲ್ಯಾಣ ಯೋಜನೆಗಳು ಕೇವಲ ಮತಬ್ಯಾಂಕ್ ಆಧಾರಿತ ತುರ್ತು ಪರಿಹಾರಗಳಾಗದೆ, ಜನರ ಸ್ವಾವಲಂಬನೆ ಹಾಗೂ ಸಾಮರ್ಥ್ಯ ವೃದ್ಧಿಯ ಕಡೆಗೆ ಮುಖಮಾಡಬೇಕು. ಕೇವಲ ಹಣದುಬ್ಬರ ಮತ್ತು ಆಹಾರ ವೆಚ್ಚವನ್ನು ಆಧರಿಸಿ ಬಡತನ ರೇಖೆ ಎಳೆಯುವ ಹಳೆಯ ಮಾದರಿಗಳಿಂದ ನಾವು ಹೊರಬರಬೇಕಿದೆ. ವಿಶ್ವಸಂಸ್ಥೆಯ ಬಹುಆಯಾಮದ ಬಡತನ ಸೂಚ್ಯಂಕದ ಮಾದರಿಯಲ್ಲಿ, ಶಿಕ್ಷಣದ ಅವಕಾಶ, ಆರೋಗ್ಯ ರಕ್ಷಣೆ, ಪೌಷ್ಟಿಕಾಂಶ, ಕುಡಿಯುವ ನೀರು, ಸ್ವಚ್ಛತೆ ಹಾಗೂ ಯೋಗ್ಯ ಆವಾಸಸ್ಥಾನಗಳನ್ನು ಸಮಗ್ರ ಮಾನದಂಡಗಳನ್ನಾಗಿ ಅಳವಡಿಸಿಕೊಳ್ಳಬೇಕು.