ದೇಶ

ಸಂಪಾದಕೀಯ | ವಾಸ್ತವ ಚಿತ್ರಣ ಬಿಂಬಿಸಲಿ

ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯ ಅಧ್ಯಯನ ನಡೆಸಲು ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡದ ಮುಂದೆ ಸಂಕಷ್ಟದ ಹಲವು ಚಿತ್ರಣಗಳು ಸ್ಪಷ್ಟವಾಗಿ ಅನಾವರಣಗೊಂಡಿವೆ.

ಕೇಂದ್ರ ತಂಡದಿಂದ ಪರಿಶೀಲನಾ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಬಿಕ್ಕಟ್ಟಿನ ಗಂಭೀರತೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುಂಗಾರು ಕೃಷಿ ವಲಯ ಮತ್ತು ಆರ್ಥಿಕತೆಯ ಜೀವನಾಡಿ. ಆದರೆ, ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರಾಸರಿ ಶೇಕಡ 30ರಷ್ಟು ಮಳೆ ಕೊರತೆಯನ್ನು ಎದುರಿಸಿದ್ದು, ಶೇ.50ಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸಾಲದ ಹೊರೆ ಮತ್ತು ಬೆಳೆ ನಷ್ಟದಿಂದ ತತ್ತರಿಸಿ ಕಳೆದ ಎರಡು ತಿಂಗಳಲ್ಲೇ ರಾಜ್ಯದಲ್ಲಿ ಹತ್ತು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನೋವಿನ ಸಂಗತಿ. ಬರದ ತೀವ್ರತೆಯಿಂದಾಗಿ ಕೃಷಿ ವಲಯ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.

ಬಿತ್ತಿದ ಬೆಳೆಗಳು ಒಣಗಿ ನಿಂತಿದ್ದು, ರೈತರ ಶ್ರಮ ವ್ಯರ್ಥವಾಗಿದೆ. ತೊಗರಿ, ಸೂರ್ಯಕಾಂತಿ, ಹತ್ತಿ, ಜೋಳ, ಗೋಧಿ ಸೇರಿದಂತೆ ಹಲವು ಪ್ರಮುಖ ಬೆಳೆಗಳು ರೈತರ ಕೈಸೇರಿಲ್ಲ. ಮುಂಗಾರಿನ ನಷ್ಟವನ್ನು ಹಿಂಗಾರು ಸರಿದೂಗಿಸಬಹುದು ಎಂಬ ಆಸೆಯೂ ಮರೀಚಿಕೆಯಾಗಿದ್ದು, ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆ ಸುರಿಯಲಿದೆ ಎಂಬ ಹವಾಮಾನ ಇಲಾಖೆಯ ಅಂದಾಜು ಆತಂಕವನ್ನು ಹೆಚ್ಚಿಸಿದೆ. ಹೀಗಾಗಿ, ರೈತಾಪಿ ವರ್ಗ ಮುಂದೇನು ಎಂದು ದಿಕ್ಕು ತೋಚದೆ ಚಿಂತಾಕ್ರಾಂತವಾಗಿದೆ.

ಬೆಳೆ ಹಾನಿಯಷ್ಟೇ ಅಲ್ಲದೆ, ಗ್ರಾಮೀಣ ಭಾಗಗಳಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಮತ್ತು ಜನರಿಗೆ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಕೃಷಿ ಕಾರ್ವಿುಕರು ಉದ್ಯೋಗವಿಲ್ಲದೆ ಪಟ್ಟಣ ಹಾಗೂ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಿಂದ ವಲಸೆ ಪ್ರಮಾಣ ಹೆಚ್ಚಿದ್ದು, ಹಲವು ಹಳ್ಳಿಗಳೇ ಖಾಲಿಯಾಗಿವೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಕೇಂದ್ರ ತಂಡದ ಪಾತ್ರ ಅತ್ಯಂತ ಮಹತ್ವದ್ದು. ರಾಜ್ಯದ ಪ್ರತಿಪಕ್ಷದ ನಾಯಕರು ಕೂಡ ಮಂಗಳವಾರ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿ, ಬರ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಅಧ್ಯಯನವು ಮೇಲ್ನೋಟದ ಸಮೀಕ್ಷೆಗಳಿಗೆ ಸೀಮಿತವಾಗದೆ, ಹಳ್ಳಿಗಳಲ್ಲಿ ಜನರು ಎದುರಿಸುತ್ತಿರುವ ವಾಸ್ತವ ಸಂಕಷ್ಟವನ್ನು ಕೇಂದ್ರ ತಂಡವು ತನ್ನ ವರದಿಯಲ್ಲಿ ಯಥಾವತ್ತಾಗಿ ಬಿಂಬಿಸಬೇಕಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್​ಡಿಆರ್​ಎಫ್) ರಾಜ್ಯಕ್ಕೆ ಶೀಘ್ರವಾಗಿ, ಅರ್ಹವಾದ ಗರಿಷ್ಠ ಅನುದಾನ ಬಿಡುಗಡೆಯಾಗುವಂತೆ ಶಿಫಾರಸು ಮಾಡುವುದು ಈ ಹೊತ್ತಿನ ತುರ್ತು ಅಗತ್ಯ. ಬರ ಎಂಬುದು ನೈಸರ್ಗಿಕ ವಿಕೋಪವೇ ಹೊರತು ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆರೋಪ-ಪ್ರತ್ಯಾರೋಪಗಳು ರೈತರ ಸಂಕಷ್ಟಕೆ ಮುಲಾಮಾಗಲಾರವು. ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಪ್ರಬುದ್ಧ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ. ಶಾಶ್ವತ ಬರ ಪರಿಹಾರ ಕಾಮಗಾರಿಗಳು, ಮೇವು ಬ್ಯಾಂಕ್​ಗಳ ಸ್ಥಾಪನೆ, ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಉದ್ಯೋಗ ಖಾತರಿ ಯೋಜನೆಯ ವಿಸ್ತರಣೆಯಂತಹ ಕ್ರಮಗಳು ಯುದ್ಧೋಪಾದಿಯಲ್ಲಿ ಜಾರಿಯಾಗಬೇಕು. ಆಡಳಿತ ವ್ಯವಸ್ಥೆ ಸೂಕ್ಷ್ಮ ಸಂವೇದನೆಯಿಂದ ವರ್ತಿಸಿ ನೆರವಿನ ಹಸ್ತ ಚಾಚುವುದು ಕೇವಲ ಕರ್ತವ್ಯವಲ್ಲ, ನೈತಿಕ ಜವಾಬ್ದಾರಿಯೂ ಹೌದು.