ದೇಶ

ಸಂಪಾದಕೀಯ | ಮಹತ್ವದ ಮೈಲಿಗಲ್ಲು

ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ಅಧಿಕಾರದ ಸ್ಥಾನವನ್ನು ಅಲಂಕರಿಸಿ 25 ವರ್ಷಗಳನ್ನು ಪೂರ್ಣಗೊಳಿಸಿರುವುದು ಭಾರತದ ರಾಜಕೀಯ ಇತಿಹಾಸದಲ್ಲಿ ಗಮನಾರ್ಹ ಮೈಲಿಗಲ್ಲು. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅವರ ಆಡಳಿತದ ಪಯಣ ಆರಂಭವಾಯಿತು. ನಂತರ ಕೇಂದ್ರ ರಾಜಕಾರಣದಲ್ಲಿ ಪ್ರಧಾನಿಯ ಹೊಣೆಗಾರಿಕೆ ವಹಿಸಿಕೊಂಡು ಈಗ ಮೂರನೇ ಅವಧಿಯಲ್ಲೂ ಯಶಸ್ವಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಹಲವು ಚುನಾವಣೆಗಳನ್ನು ಎದುರಿಸಿ ಸತತವಾಗಿ ಅಧಿಕಾರದ ಕೇಂದ್ರದಲ್ಲಿ ಉಳಿದಿರುವುದು ಅವರ ರಾಜಕೀಯ ಸಾಮರ್ಥ್ಯ ಮತ್ತು ಜನಬೆಂಬಲಕ್ಕೆ ಸಾಕ್ಷಿಯಾಗಿದೆ.

ಬುಧವಾರ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ತಮ್ಮ 25 ವರ್ಷಗಳ ಪಯಣವನ್ನು ಸ್ಮರಿಸುವಾಗ ಮೋದಿ ಅವರು ‘ವಿ ವಿಲ್ ಡು ಇಟ್... ನಾವು ಮಾಡಿ ತೋರಿಸುತ್ತೇವೆ’ ಎಂದು ಪದೇಪದೆ ಘೊಷಣೆ ಮಾಡಿರುವುದು ಗಮನಾರ್ಹ. ದೇಶದ ಅಭಿವೃದ್ಧಿಯ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಇದರ ಉದ್ದೇಶ. ‘ಭಾರತವು ಅಭಿವೃದ್ಧಿ ಹೊಂದುವವರೆಗೂ ನಾನು ದಣಿಯುವುದಿಲ್ಲ, ನಿಲ್ಲುವುದೂ ಇಲ್ಲ’ ಎಂಬ ಅವರ ಮಾತು ವೈಯಕ್ತಿಕ ಬದ್ಧತೆಯ ದ್ಯೋತಕ. ಆದರೆ ವಿಕಸಿತ ಭಾರತದ ಗುರಿಯನ್ನು ಸಾಧಿಸಲು ನಾಯಕನ ಬದ್ಧತೆಯಷ್ಟೇ ಸಾಲದು; ಸರ್ಕಾರ, ಕೈಗಾರಿಕೆ, ರೈತರು, ಕಾರ್ವಿುಕರು, ಯುವಜನರು ಸೇರಿದಂತೆ ಎಲ್ಲ ವರ್ಗಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ.

ಮೋದಿ ಅವರು ತಮ್ಮ 25 ವರ್ಷಗಳ ಸಾರ್ವಜನಿಕ ಜೀವನವನ್ನು ಹಿಂತಿರುಗಿ ನೋಡಿದಾಗ ಸಾಧನೆಗಳಿಗಿಂತ ಕೃತಜ್ಞತೆಯ ಭಾವವೇ ಹೆಚ್ಚು ಮೂಡುತ್ತದೆ ಎಂದು ಹೇಳಿದ್ದಾರೆ. ಇದು ರಾಜಕೀಯ ಯಶಸ್ಸನ್ನು ಮೀರಿ ಜನರ ವಿಶ್ವಾಸ ಮತ್ತು ಸಹಕಾರದ ಮಹತ್ವವನ್ನು ಒತ್ತಿಹೇಳುವ ಮಾತು. ಪ್ರಜಾಪ್ರಭುತ್ವದಲ್ಲಿ ಯಾವುದೇ ನಾಯಕನ ದೀರ್ಘ ಪಯಣದ ಹಿಂದೆ ಮತದಾರರ ನಿರ್ಣಯವೇ ಪ್ರಮುಖ ಶಕ್ತಿಯಾಗಿರುತ್ತದೆ. ಹೀಗಾಗಿ ಈ ಮೈಲಿಗಲ್ಲು ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಭಾರತದ ಮತದಾರರ ರಾಜಕೀಯ ಆಯ್ಕೆಯನ್ನೂ ಪ್ರತಿಬಿಂಬಿಸುತ್ತದೆ.

2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಗುರಿ ಮಹತ್ವಾಕಾಂಕ್ಷೆಯದು. ಅದನ್ನು ಸಾಧಿಸಲು ತಲಾ ಆದಾಯದಲ್ಲಿ ಗಮನಾರ್ಹ ಏರಿಕೆ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ, ಹೆಚ್ಚಿನ ಉದ್ಯೋಗಾವಕಾಶ, ಆಧುನಿಕ ಮೂಲಸೌಕರ್ಯ, ಬಲಿಷ್ಠ ಉತ್ಪಾದನಾ ವಲಯ ಮತ್ತು ಕೃಷಿಯ ಸುಧಾರಣೆ ಅಗತ್ಯ.

ಇದೇ ಸಂದರ್ಭದಲ್ಲಿ ಸ್ವಾವಲಂಬಿ ಭಾರತದ ಪರಿಕಲ್ಪನೆಯೂ ಮಹತ್ವ ಪಡೆಯುತ್ತದೆ. ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು, ದೇಶೀಯ ಉತ್ಪಾದನೆ ಹೆಚ್ಚಿಸುವುದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಹಾಗೂ ಭಾರತೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಿಸುವುದು ಸ್ವಾವಲಂಬನೆಯ ಪ್ರಮುಖ ಅಂಶಗಳಾಗಬೇಕು.

ಪ್ರಧಾನಿ ಹಂಚಿಕೊಂಡಿರುವ ವಿಕಸಿತ ಭಾರತದ ಕನಸು ದೇಶದ ಮುಂದಿನ ಪೀಳಿಗೆಗೆ ದಿಕ್ಸೂಚಿ. ಕನಸಿನ ಯಶಸ್ಸು ಅದರ ಅನುಷ್ಠಾನದ ಗುಣಮಟ್ಟದ ಮೇಲೆ ಅವಲಂಬಿತ. ಆಡಳಿತದಲ್ಲಿರುವ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಗುಣದಿಂದ ಅಭಿವೃದ್ಧಿಯ ಫಲ ಎಲ್ಲರಿಗೂ ತಲುಪುತ್ತದೆ. 25 ವರ್ಷಗಳ ಸಾರ್ವಜನಿಕ ಜೀವನದ ಈ ಮೈಲಿಗಲ್ಲು ಮುಂದಿನ 25 ವರ್ಷಗಳ ಭಾರತದ ಗುರಿಗಳ ಕುರಿತು ಗಂಭೀರವಾಗಿ ಚಿಂತಿಸುವುದಕ್ಕೆ ವೇದಿಕೆಯಾಗಲಿ. 2047ರ ಭಾರತವು ಆರ್ಥಿಕವಾಗಿ ಬಲಿಷ್ಠವಾಗಿರುವುದರ ಜತೆಗೆ ಜನರಿಗೆ ಉತ್ತಮ ಜೀವನಮಟ್ಟವನ್ನು ಖಾತ್ರಿಪಡಿಸಲಿ.