WEB
ದೇಶ

ಸಂಪಾದಕೀಯ: ಸುರಕ್ಷತೆ ನಿರ್ಲಕ್ಷ್ಯ ಅಕ್ಷಮ್ಯ

ಉತ್ತರ ಕೋಲ್ಕತದ ಚೋರ್​ಬಾಗನ್ ದುರ್ಗಾ ಪೂಜಾ ಪೆಂಡಾಲ್​ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 19 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಪ್ತಮಿ ಸಂಜೆ ಪೂಜೆ ವೇಳೆ ಈ ದುರಂತ ಘಟಿಸಿದೆ. ಪೊಲೀಸರು ದುರ್ಗಾ ಪೂಜಾ ಆಯೋಜಕರು ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ್ದಾರೆ.

ಉತ್ತರ ಕೋಲ್ಕತದ ಚೋರ್​ಬಾಗನ್ ದುರ್ಗಾ ಪೂಜಾ ಪೆಂಡಾಲ್​ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 19 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಪ್ತಮಿ ಸಂಜೆ ಪೂಜೆ ವೇಳೆ ಈ ದುರಂತ ಘಟಿಸಿದೆ. ಪೊಲೀಸರು ದುರ್ಗಾ ಪೂಜಾ ಆಯೋಜಕರು ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ್ದಾರೆ. ಶನಿವಾರ ರಾತ್ರಿ 7.40ರ ಸುಮಾರಿಗೆ ಆಯೋಜಕರು ‘ಪೆಂಡಾಲ್ ಕುಸಿಯುತ್ತಿದೆ, ಓಡಿಹೋಗಿ’ ಎಂದು ಲೌಡ್​ಸ್ಪೀಕರ್​ನಲ್ಲಿ ಅನಿರೀಕ್ಷಿತ ಪ್ರಕಟಣೆ ಹೊರಡಿಸಿದ್ದರಿಂದ ಜನರು ಭೀತಿಯಿಂದ ಓಡಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ವಿಸõತ ತನಿಖೆಗೆ ಬಂಗಾಳ ಸರ್ಕಾರ ಆದೇಶಿಸಿದೆ. ಪೆಂಡಾಲ್​ಗಳಲ್ಲಿ ಸಮರ್ಪಕ ಬೆಳಕು ಹಾಗೂ ಪ್ರವೇಶ-ನಿರ್ಗಮನ ದ್ವಾರಗಳನ್ನು ಕಲ್ಪಿಸುವಂತೆ ಆಯೋಜಕರಿಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೂಚಿಸಿದ್ದಾರೆ. ಬಂಗಾಳದಲ್ಲಿ ದುರ್ಗಾಪೂಜೆ ಸಾರ್ವಜನಿಕ ಸಂಭ್ರಮಾಚರಣೆಯಾಗಿದ್ದು, ಬೃಹತ್ ಸಂಖ್ಯೆಯ ಜನರು ಸೇರುತ್ತಾರೆ. ಇದೆಲ್ಲ ಗೊತ್ತಿರುವಂತಹುದೇ. ಹೀಗಿದ್ದರೂ ಎಲ್ಲಿ ಲೋಪವಾಗಿದೆ ಎಂದು ತಿಳಿಯಬೇಕಿದೆ. ಇನ್ನೊಂದು ದುರಂತದಲ್ಲಿ, ಮಧ್ಯಪ್ರದೇಶದ ಗ್ವಾಲಿಯರ್​ನ ಶೀತ್ಲಾ ಮಾತಾ ದೇವಾಲಯದ ಬಳಿ ಶನಿವಾರ ಮಧ್ಯರಾತ್ರಿ 1.30ರ ಸುಮಾರಿಗೆ ವೇಗವಾಗಿ ಬಂದ ಟ್ರಕ್ ಭಕ್ತರು ಮತ್ತು ರಸ್ತೆ ಬದಿಯ ಅಂಗಡಿಗಳಿಗೆ ಡಿಕ್ಕಿ ಹೊಡೆದಿದ್ದರಿಂದ 15 ಜನರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನವರಾತ್ರಿ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನದ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಇಂಥ ದುರಂತಗಳು ಹಿಂದೆಯೂ ನಡೆದಿದ್ದು, ನಮಗೆ ಪಾಠವಾಗಬೇಕಿದೆ.

2025ರ ಆಗಸ್ಟ್ ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್​ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. 2025ರ ಸೆಪ್ಟೆಂಬರ್​ನಲ್ಲಿ ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಟಿವಿಕೆ ರ‍್ಯಾಲಿ ವೇಳೆ ಕಾಲ್ತುಳಿತದಲ್ಲಿ 40 ಜನರು ದುರ್ಮರಣಕ್ಕೀಡಾಗಿದ್ದರು. 2025ರ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ 30 ಜನರು ಮೃತರಾಗಿದ್ದರು. 2024ರ ಜುಲೈನಲ್ಲಿ ಉತ್ತರ ಪ್ರದೇಶದ ಹಾಥರಸ್​ನಲ್ಲಿ ಭೋಲೆ ಬಾಬಾ ಪ್ರವಚನ ನಡೆಯುವಾಗ ಕಾಲ್ತುಳಿತ ಘಟಿಸಿ 121 ಜನರು ಸಾವಿಗೀಡಾಗಿದ್ದರು. ಇದಲ್ಲದೆ, ಮೆರವಣಿಗೆಯಲ್ಲಿ ತೆರಳುವಾಗ ವಿದ್ಯುತ್ ರ್ಸ³ಸಿ ಸಾವು ಉಂಟಾಗುವುದು, ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಮರಣಿಸುವುದು- ಇತ್ಯಾದಿ ಘಟನೆಗಳೂ ವರದಿಯಾಗುತ್ತಿರುತ್ತವೆ. ಇಂಥ ದುರ್ಘಟನೆಗಳು ಆಗೀಗ ಸಂಭವಿಸುತ್ತಲೇ ಇರುವುದು ಖೇದಕರ. ಈಚಿನ ವರ್ಷಗಳಲ್ಲಿ ಧಾರ್ವಿುಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಜನರು ದೊಡ್ಡ ಪ್ರಮಾಣದಲ್ಲಿ ಸೇರುತ್ತಾರೆ. ಇಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಎಲ್ಲ ವಯೋಮಾನದವರೂ ಇರುತ್ತಾರೆ. ಹಾಗೇ, ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಕೂಡ. ಇಂಥ ಸಂದರ್ಭದಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಹಾಗೂ ಆಯೋಜಕರು ಕಟ್ಟೆಚ್ಚರ ವಹಿಸಬೇಕಾಗುತ್ತದೆ.

ಜನಸಂದಣಿ ನಿರ್ವಹಣೆಗೆ ಪಕ್ಕಾ ಯೋಜನೆ ಇರಬೇಕಾಗುತ್ತದೆ. ಜತೆಗೆ, ಜನರು ಸಹ ಕೆಲ ಮುನ್ನೆಚ್ಚರಿಕೆಗಳನ್ನು ಸ್ವಯಂ ಆಗಿ ಪಾಲಿಸಬೇಕು. ಅವಸರ ಮಾಡದಿರುವುದು, ವದಂತಿಗಳಿಗೆ ಕಿವಿಗೊಡದಿರುವುದು, ಸರದಿ ಸಾಲನ್ನು ಪಾಲಿಸುವುದು ಮುಂತಾದ ಕ್ರಮಗಳನ್ನು ಅನುಸರಿಸಿದರೆ ಎಷ್ಟೋ ಸಂಭಾವ್ಯ ಅಪಾಯಗಳನ್ನು ತಪ್ಪಿಸಬಹುದಾಗಿದೆ. ಒಟ್ಟಿನಲ್ಲಿ ಹಬ್ಬ, ಧಾರ್ವಿುಕ ಆಚರಣೆಗಳು ಅಥವಾ ಸಾರ್ವಜನಿಕ ಸಭೆಸಮಾರಂಭಗಳು ದುರಂತವಾಗದೆ ಸಂಭ್ರಮದ ಸಂದರ್ಭವಾಗುವಂತಾಗಬೇಕು.