ಸಂಪಾದಕೀಯ: ಅರ್ಹರಿಗೆ ಅನ್ಯಾಯವಾಗದಿರಲಿ 
ದೇಶ

ಸಂಪಾದಕೀಯ: ಅರ್ಹರಿಗೆ ಅನ್ಯಾಯವಾಗದಿರಲಿ

ಸಂಪಾದಕೀಯ: ರಾಜಕೀಯ ಪಕ್ಷಗಳಲ್ಲಿ ತೀವ್ರ ಸಂಚಲನ ಮತ್ತು ವಿವಾದಕ್ಕೆ ಕಾರಣವಾಗಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ನಾಳೆಯಿಂದ (ಜೂನ್​ 30) ಕರ್ನಾಟಕದಲ್ಲಿ ಆರಂಭವಾಗಲಿದೆ. ಮೃತರ ಹೆಸರನ್ನು ಪಟ್ಟಿಯಿಂದ ತೆಗೆಯಲು ಮತ್ತು ಇತರ ದೋಷಗಳ ನಿವಾರಣೆಗೆ ಚುನಾವಣಾ ಆಯೋಗ ಕಾಲಕಾಲಕ್ಕೆ ಎಸ್​ಐಆರ್​ ನಡೆಸುತ್ತದೆ ಎಂಬುದೇನೋ ಹೌದು. ಆದರೆ, ಈ ಪ್ರಕ್ರಿಯೆ ನಡೆಸುವಾಗ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಬಾರದು ಮತ್ತು ಈ ಇಡೀ ಪ್ರಕ್ರಿಯೆ ರಾಜಕೀಯ ನೆರಳಿನ ಹಸ್ತಕ್ಷೇಪವಿಲ್ಲದೆ ಪಾರದರ್ಶಕವಾಗಿ ನಡೆಯಬೇಕು. ಜನಸಾಮಾನ್ಯರಿಗೆ ಎಸ್​ಐಆರ್​ ಬಗ್ಗೆ ಸ್ಪಷ್ಟ ಅರಿವು ಮೂಡಿಸುವ ಕೆಲಸವೂ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಮಾಹಿತಿಯ ಕೊರತೆಯಿಂದ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು.
ಕರ್ನಾಟಕದಾದ್ಯಂತ ಇರುವ 5.50 ಕೋಟಿಗೂ ಅಧಿಕ ಮತದಾರರನ್ನು ತಲುಪಲು ಆಯೋಗವು ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ರಾಜ್ಯಾದ್ಯಂತ 59,050 ಬೂತ್​ ಮಟ್ಟದ ಅಧಿಕಾರಿಗಳನ್ನು ಮತ್ತು ಅವರಿಗೆ ಮಾರ್ಗದರ್ಶನ ನೀಡಲು 5,905 ಬಿಎಲ್​ಒ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಜೂನ್​ 20ರಿಂದ ಜೂನ್​ 29ರವರೆಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಅರ್ಜಿಗಳ ಮುದ್ರಣ ಮತ್ತು ಡಿಜಿಟಲ್ ತಂತ್ರಜ್ಞಾನದ ಬಳಕೆ ಕುರಿತು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಕಲಿ ಮತದಾರರನ್ನು ತಡೆಯಲು ಕುಟುಂಬದ ವಂಶಾವಳಿ ಆಧರಿಸಿ 86%ಕ್ಕೂ ಹೆಚ್ಚು ಮತದಾರರ ಮ್ಯಾಪಿಂಗ್​ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಉಳಿದ ಪ್ರಕ್ರಿಯೆಯನ್ನು ಈ ಮನೆ-ಮನೆ ಸಮೀಕ್ಷೆಯಲ್ಲಿ ಮಾಡಲಾಗುತ್ತದೆ.
ಜೂನ್​ 30ರಿಂದ ಜುಲೈ 29ರವರೆಗೆ ಬೂತ್​ ಮಟ್ಟದ ಅಧಿಕಾರಿಗಳು (ಬಿಎಲ್​ಒ) ಪ್ರತಿಯೊಂದು ಮನೆಗೂ ಮೂರು ಬಾರಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಕ್ರಿಯೆಯ ಉದ್ದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ತಂತ್ರಜ್ಞಾನದ ಅರಿವಿಲ್ಲದ ಅಥವಾ ಗ್ರಾಮೀಣ ಭಾಗದ ಜನರಿಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳು, ನಾಡಕಚೇರಿಗಳು ಮತ್ತು ತಹಸೀಲ್ದಾರ್​ ಕಚೇರಿಗಳಲ್ಲಿ ವಿಶೇಷ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಇದರ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಈ ಬಾರಿ ಮತದಾರರಿಗೆ ನೀಡಲಾಗುವ 2 ಅರ್ಜಿ ನಮೂನೆಗಳಲ್ಲಿ ಪ್ರತ್ಯೇಕ ಕ್ಯೂಆರ್​ ಕೋಡ್​ ಇರಲಿದೆ. ಇದರ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಲು ಜನರಿಗೆ ಸುಲಭವಾಗಲಿದೆ. ಡಿಜಿಟಲ್​ ಮತ್ತು ಸಮೂಹ ಮಾಧ್ಯಮಗಳ ಮೂಲಕ, "ಇದು ಹೆಸರು ತೆಗೆದುಹಾಕುವ ಪ್ರಕ್ರಿಯೆಯಲ್ಲ, ಬದಲಿಗೆ ಪಟ್ಟಿಯನ್ನು ದೋಷಮುಕ್ತಗೊಳಿಸುವ ಪ್ರಕ್ರಿಯೆ' ಎಂಬ ಸಕಾರಾತ್ಮಕ ಸಂದೇಶವನ್ನು ಚುನಾವಣಾ ಆಯೋಗ ಬಿತ್ತರಿಸಬೇಕು.
ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಪ್ರತಿ ಬೂತ್​ಗೂ ಬೂತ್​ ಮಟ್ಟದ ಏಜೆಂಟರನ್ನು ನೇಮಿಸುವಂತೆ ಆಯೋಗವು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಮುಖ್ಯವಾಗಿ, ವಲಸೆ ಹೋದವರು, ಬಾಡಿಗೆ ಮನೆಯವರು ಅಥವಾ ತಾಂತ್ರಿಕ ದೋಷವಿರುವ ಕಾರಣಕ್ಕೆ ಯಾವುದೇ ಒಬ್ಬ ಅರ್ಹ ಮತದಾರನೂ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಆಯೋಗದ ಪರಮೋಚ್ಚ ಕರ್ತವ್ಯ. ಅಕ್ಟೋಬರ್​ 7ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದ್ದು, ರಾಜ್ಯ ರಾಜಕೀಯಕ್ಕೆ ದಿಕ್ಸೂಚಿ ಎಂದೇ ಭಾವಿಸಲಾಗಿದೆ.