ಜಮ್ಮು&ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ, ಅಲ್ಲಿ ಕಾನೂನು&ಸುವ್ಯವಸ್ಥೆ ನೆಲೆಗೊಂಡಿತು. ಪರಿಣಾಮ, ಕಾಶ್ಮೀರಿ ಪಂಡಿತರು ಕ್ರಮೇಣ ತಾಯ್ನಾಡಿಗೆ ಮರಳಿ, ನೆಲೆಸಲು ಆರಂಭಿಸಿದರು. ಆದರೆ, ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆಯುತ್ತಿದ್ದು, ಕಾಶ್ಮೀರಿ ಪಂಡಿತರಿಗೆ ಮೂರು ಬಾರಿ ಬೆದರಿಕೆ ಒಡ್ಡಿದ್ದಾರೆ. "ನೀವು ಎಲ್ಲೆ ಇರಿ ಅಥವಾ ಎಲ್ಲೆ ಹೋದರೂ ನಿಮ್ಮ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇರಿಸಲಾಗಿದೆ. ಸರ್ಕಾರಕ್ಕಾಗಿ ಕೆಲಸ ಮಾಡಿ ದಾಳವಾಗಬೇಡಿ' ಎಂದು ಬೆದರಿಕೆ ಒಡ್ಡಿದ ಮೂರು ಪತ್ರಗಳು ಆಗಸ್ಟ್ 7ರಿಂದ ಸೆಪ್ಟೆಂಬರ್ 1ರ ಅವಧಿಯಲ್ಲಿ ಬಂದಿವೆ.
ಇವುಗಳಲ್ಲಿ ಕಾಶ್ಮೀರಿ ಪಂಡಿತರ ಹೆಸರುಗಳು ಮಾತ್ರವಲ್ಲದೆ ಅವರ ಮನೆಯ ವಿಳಾಸ, ವಾಹನದ ಸಂಖ್ಯೆ ಮತ್ತು ಮನೆಯ ಬಣ್ಣದವರೆಗೂ ಪ್ರತಿಯೊಂದು ವಿವರವನ್ನೂ ಉಲ್ಲೇಖಿಸಲಾಗಿದೆ. ವೈಯಕ್ತಿಕ ಮಾಹಿತಿ ಸೋರಿಕೆಯಾದ ನಂತರ ಕಾಶ್ಮೀರಿ ಪಂಡಿತರು ಇನ್ನಷ್ಟು ಭಯಭೀತರಾಗಿದ್ದು, ತನಿಖೆ ಮತ್ತು ಸೂಕ್ತ ಭದ್ರತೆಗೆ ಆಗ್ರಹಿಸಿದ್ದಾರೆ. 1990ರಲ್ಲಿ ಸಕ್ರಿಯವಾಗಿದ್ದ ಮತ್ತು ಕಾಶ್ಮೀರಿ ಪಂಡಿತರನ್ನು ಭೀಕರವಾಗಿ ಹಿಂಸಿಸಿದ "ಜಾಬಾಜ್ ಫೋರ್ಸ್' ಕೂಡ ಮತ್ತೆ ತಲೆಎತ್ತಿದ್ದು, ಸಾರ್ವಜನಿಕ ಪ್ರದೇಶಗಳಲ್ಲೇ ಪೋಸ್ಟರ್ ಅಂಟಿಸಿ, ಬೆದರಿಕೆ ಒಡ್ಡಿದೆ.
ಉಗ್ರ ಸಂಘಟನೆ ಲಷ್ಕರ್ನ ಮುಖವಾಡ ಎಂದು ಪರಿಗಣಿಸುವ ಯುನೈಟೆಡ್ ಲಿಬರೇಶನ್ ಕೌನ್ಸಿಲ್ (ಯುಎಲ್ಸಿ), ಟೆಲಿಗ್ರಾಂ ಚಾನೆಲ್ ಮೂಲಕ ಈ ಪತ್ರಗಳನ್ನು ರವಾನಿಸಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಉಗ್ರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದಕ್ಕೆ ಆಕ್ರೋಶಗೊಂಡಿರುವ ಯುಎಲ್ಸಿ ಸರ್ಕಾರಿ ಇಲಾಖೆಗಳು ಹಾಗೂ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸುವುದಾಗಿ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಸರ್ಕಾರವು ಕಾಶ್ಮೀರಿ ಪಂಡಿತರಿಗೆ ಮನೆಯಿಂದಲೇ ಕೆಲಸ ಮಾಡಲು (ವರ್ಕ್ ಫ್ರಂ ಹೋಮ್) ಸೂಚಿಸಿದೆ.
1990ರಲ್ಲಿ ನಡೆದ ಭೀಕರ ಹಿಂಸಾಚಾರ ಹಾಗೂ ದೌರ್ಜನ್ಯದ ಬಳಿಕ 2004ರವರೆಗೆ ಭಯೋತ್ಪಾದಕ ಸಂಘಟನೆಗಳು 219 ಕಾಶ್ಮೀರಿ ಪಂಡಿತರನ್ನು ಭೀಕರವಾಗಿ ಹತ್ಯೆ ಮಾಡಿವೆ. 64,827 ಪಂಡಿತರು ಕಾಶ್ಮೀರ ಕಣಿವೆಯನ್ನೇ ತೊರೆದಿದ್ದಾರೆ. 6,500 ಪಂಡಿತರು ಇನ್ನೂ ಜಮ್ಮು&ಕಾಶ್ಮೀರದಲ್ಲಿ ನೆಲೆಸಿದ್ದು, ಭದ್ರತಾ ಆತಂಕ ಎದುರಿಸುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಸಂಖ್ಯೆ ಸೀಮಿತ ಪ್ರಮಾಣದಲ್ಲಿ ಇದ್ದರೂ, ಅವರು ಒಗ್ಗಟ್ಟಾಗಿದ್ದಾರೆ ಮತ್ತು ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಭಯೋತ್ಪಾದಕರ ದಾಳಿಯಿಂದ ಹಾನಿಗೊಳಗಾದ ಮತ್ತು ಪ್ರಕೃತಿ ವಿಕೋಪದಿಂದ ನಷ್ಟವಾದ ದೇವಾಲಯಗಳ ಮರು ನಿರ್ಮಾಣ ಮತ್ತು ಕೆಲ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ವೇಗವಾಗಿ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದೆ.
ಈ ಹಿಂದೆ ಭಯೋತ್ಪಾದಕರ ಮತ್ತು ಪ್ರತ್ಯೇಕತಾವಾದಿಗಳ ಭೀತಿಯಿಂದ ಜನರು ಮಂದಿರಗಳಿಗೆ ಬರುವುದನ್ನೇ ನಿಲ್ಲಿಸಿದ್ದರು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ, ಪೂಜೆ ಸಲ್ಲಿಸುತ್ತಿದ್ದಾರೆ. ಸ್ಥಗಿತಗೊಂಡಿದ್ದ ಧಾರ್ಮಿಕ ಯಾತ್ರೆಗಳನ್ನು ಪುನರಾರಂಭಿಸಿದ್ದಾರೆ. ದೊಡ್ಡ ಹಬ್ಬ ಮತ್ತು ಉತ್ಸವಗಳನ್ನು ಒಟ್ಟಾಗಿ ಆಚರಿಸುತ್ತಿದ್ದಾರೆ. ನಿಂತುಹೋಗಿದ್ದ ರಥಯಾತ್ರೆಗಳು ಮರು ಆರಂಭಗೊಂಡಿವೆ. ಹಿಂದೂಗಳು ಮತ್ತೆ ಸಕ್ರಿಯರಾಗುವುದನ್ನು ಭಯೋತ್ಪಾದಕ ಸಂಘಟನೆಗಳು ಸಹಿಸುತ್ತಿಲ್ಲ. ಹೀಗಾಗಿ ಮತ್ತೆ ಬೆದರಿಕೆ ಒಡ್ಡುತ್ತಿದ್ದು, ಆತಂಕಿತರಾಗಿರುವ ಪಂಡಿತರು ಮುಂದೇನು ಎಂಬ ಪ್ರಶ್ನೆ ಎದುರಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಪಂಡಿತರ ರಕ್ಷಣೆಗೆ ನಿಲ್ಲಬೇಕು. ಪಂಡಿತರಿಗೆ ಬೆದರಿಕೆ ಒಡ್ಡಿರುವ ಸಂಘಟನೆಗಳು ಮತ್ತು ಅದರ ಮುಖಂಡರನ್ನು ಸದೆ ಬಡಿಯಬೇಕು.