ಕೇಂದ್ರೀಯ ಚುನಾವಣಾ ಆಯೋಗವು ದೇಶವ್ಯಾಪಿಯಾಗಿ ವಿವಿಧ ಹಂತಗಳಲ್ಲಿ ನಡೆಸುತ್ತಿರುವ ಮತಪಟ್ಟಿ ಶುದ್ಧೀಕರಣ ಅರ್ಥಾತ್ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್)ಯನ್ನು ಬಿಜೆಪಿ-ಮಿತ್ರಪಕ್ಷಗಳನ್ನು ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳು ಆರಂಭದಿಂದಲೂ ವಿರೋಧಿಸುತ್ತ ಬಂದಿವೆ. ಈ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂಬುದು ಅವುಗಳ ಆರೋಪ. ಚುನಾವಣಾ ಆಯೋಗವು ಈ ಆರೋಪ-ಆಕ್ಷೇಪಗಳಿಗೆ ಉತ್ತರ, ಸಮಜಾಯಿಷಿ ನೀಡುತ್ತ ಬಂದಿದೆಯಾದರೂ, ಎಸ್ಐಆರ್ ಮತ್ತಿತರ ವಿಚಾರವಾಗಿ ಚುನಾವಣಾ ಆಯೋಗದ ಇಬ್ಬರು ಆಯುಕ್ತರು ಅನೇಕ ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರದಲ್ಲಿ ಈ ವಿಷಯ ಮತ್ತೊಮ್ಮೆಗದ್ದಲವೆಬ್ಬಿಸಿತು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಆಗ್ರಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಹಾಗೂ ಇಬ್ಬರು ಆಯುಕ್ತರು ಶನಿವಾರ ತುರ್ತು ಸಭೆ ನಡೆಸಿದರು. ಹಾಗೆಂದಾಕ್ಷಣ ವಿವಾದ ಇಲ್ಲಿಗೇ ನಿಲ್ಲುತ್ತದೆ ಎಂದಲ್ಲ. ‘ಇದೊಂದು ತೇಪೆಹಚ್ಚುವ ಯತ್ನ’ ಎಂದು ವಿಪಕ್ಷಗಳು ಟೀಕಿಸಿವೆ. ಆದರೂ, ವಿವಾದದ ಹಿನ್ನೆಲೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ನಿಟ್ಟಿನಲ್ಲಿ ಆಯೋಗವು ಸಭೆ ನಡೆಸಿದ್ದು ಗಮನಾರ್ಹ. ಈ ಸಭೆಯಲ್ಲಿನ ನಿರ್ಣಯಗಳ ಕುರಿತು ಆಯೋಗವು ಪ್ರಕಟಣೆ ಹೊರಡಿಸಿದೆ. ಬಿಹಾರ, ಪಶ್ಚಿಮ ಬಂಗಾಳ ಸೇರಿ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಎಸ್ಐಆರ್ ನಡೆಸುವ ಆದೇಶವನ್ನು ಆಯೋಗದ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಎಸ್ಐಆರ್ ಸಮಯದಲ್ಲಿ ಮ್ಯಾಪ್ ಮಾಡದಿರುವ ಅಥವಾ ರ್ತಾಕ ವ್ಯತ್ಯಾಸಗಳಿರುವ ಕಾರಣಕ್ಕೆ ಲಕ್ಷಾಂತರ ಜನರಿಗೆ ನೋಟಿಸ್ ನೀಡಲಾಗಿದ್ದು, ಅವರು ಅಗತ್ಯ ದಾಖಲೆಗಳೊಂದಿಗೆ ಬಿಎಲ್ಒಗಳ ಬಳಿ ತೆರಳಬೇಕಿದೆ. ಈ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಜನರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಯೋಗ ಪರಿಶೀಲನಾ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದೆ. ಇದರನ್ವಯ, ನೋಟಿಸ್ ಸ್ವೀಕರಿಸಿದ ಮತದಾರರು ವಿಚಾರಣೆಗೆ ತೆರಳುವ ಬದಲು ಬೂತ್ ಮಟ್ಟದ ಅಧಿಕಾರಿಗಳೇ ಅಂಥ ಮತದಾರರ ಮನೆಗಳಿಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸಿ, ಇಆರ್ಒ ನಿರ್ಧಾರಕ್ಕಾಗಿ ಆಯೋಗದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.
ನೋಟಿಸ್ ಪಡೆದವರನ್ನು ವಿಚಾರಣೆಗಾಗಿ ಇಆರ್ಒ ಕಚೇರಿಗೆ ಕರೆಯುವ ಅಗತ್ಯವಿಲ್ಲ. ಅಗತ್ಯವಿದ್ದರೆ ಆನ್ಲೈನ್ನಲ್ಲಿ ವಿಚಾರಣೆ ನಡೆಯಲಿದೆ. ನಮೂನೆ 6ಕ್ಕೆ ಸಂಬಂಧಿಸಿ, ಪಾಲಕರ ಹೆಸರಿನ ಮೂಲಕ ಹಿಂದಿನ ಎಸ್ಐಆರ್ಗೆ ಮ್ಯಾಪ್ ಮಾಡಲು ಕೇಳಿದ್ದ ಘೋಷಣೆಯ ಬಗ್ಗೆ ತಕರಾರು ಉದ್ಭವಿಸಿತ್ತು. ಈ ಕ್ರಮವನ್ನು ಸವೋಚ್ಚ ನ್ಯಾಯಾಲಯವೂ ಎತ್ತಿಹಿಡಿದಿದೆ. ಎಸ್ಐಆರ್ ಅವಧಿಯ ಹೊರತಾಗಿ, 1960ರ ಮತದಾರರ ನೋಂದಣಿ ನಿಯಮಗಳಡಿ ನಿಗದಿಪಡಿಸಿದ ನಮೂನೆ ಬಳಸಲಾಗುತ್ತದೆ. ಆಯೋಗದ ಇಸಿಐನೆಟ್ ವೆಬ್ಸೈಟ್ನಲ್ಲಿ ಮತದಾರರ ಪಟ್ಟಿಯ ಡೇಟಾಬೇಸ್ ಪ್ರವೇಶ, ಪೋರ್ಟಲ್ ಕಾರ್ಯವೈಖರಿ ಬಗ್ಗೆ ಕೇಳಿಬಂದ ಆಕ್ಷೇಪಗಳ ಕುರಿತೂ ಆಯೋಗ ಸ್ಪಷ್ಟನೆ ನೀಡಿದೆ. ಕಾಲಕಾಲಕ್ಕೆ ಮತದಾರರ ಪಟ್ಟಿ ಶುದ್ಧೀಕರಣ ನಡೆಯಬೇಕೆಂಬುದರಲ್ಲಿ ಯಾರದೂ ತಕರಾರಿಲ್ಲ. ಆದರೆ ಈ ಪ್ರಕ್ರಿಯೆ ಜನರಲ್ಲಿ ಆತಂಕ ಉಂಟುಮಾಡುವಂತಿರಬಾರದು ಮತ್ತು ಅರ್ಹ ಮತದಾರರು ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಕಟ್ಟೆಚ್ಚರ ಅಗತ್ಯ. ಏಕೆಂದರೆ ಮತಹಕ್ಕು ಸಂವಿಧಾನದಿಂದಲೇ ಜನರಿಗೆ ಕೊಡಮಾಡಲ್ಪಟ್ಟಿದ್ದು, ಪ್ರಜಾಪ್ರಭುತ್ವ ದೇಶದಲ್ಲಿ ಜನರಿಗೆ ಬಹುಮುಖ್ಯ ಹಕ್ಕುಗಳಲ್ಲಿ ಒಂದಾಗಿದೆ.