ಮಾದಕದ್ರವ್ಯ ನಿಯಂತ್ರಣ ದಳ (ಎನ್ಸಿಬಿ) ಮುಂಬೈಯಲ್ಲಿ 349 ಕೆಜಿ ಉನ್ನತ ದರ್ಜೆಯ ಕೊಕೇನ್ ಅನ್ನು ಶುಕ್ರವಾರ ವಶಪಡಿಸಿಕೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 1,745 ಕೋಟಿ ರೂಪಾಯಿ ಆಗಿದೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
‘ಮಾದಕದ್ರವ್ಯ ಜಾಲಗಳನ್ನು ಸರ್ಕಾರ ನಿರ್ದಯವಾಗಿ ಮಟ್ಟ ಹಾಕಲಿದೆ’ ಎಂದು ಮುಂಬೈ ಎನ್ಸಿಬಿ ಕಾರ್ಯಾಚರಣೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾದಕವಸ್ತು ಜಾಲದ ವಿರುದ್ಧ ಇದೊಂದು ಪ್ರಮುಖ ಯಶಸ್ಸಾಗಿದೆ ಎಂದು ಷಾ ವರ್ಣಿಸಿದ್ದಾರೆ. ನಿಜಕ್ಕೂ ಇದೊಂದು ಮಹತ್ವದ ಕಾರ್ಯಾಚರಣೆಯೇ ಹೌದು. ದೇಶದ ಎಲ್ಲ ರಾಜ್ಯಗಳಲ್ಲೂ ಈ ಪಿಡುಗು ವ್ಯಾಪಕವಾಗಿ ಬೆಳೆಯುತ್ತಿರುವುದು ಕಳವಳಕಾರಿ. ಕರ್ನಾಟಕದಲ್ಲಿ ಕೂಡ ಮಾದಕದ್ರವ್ಯ ಜಾಲ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿರುವುದು ಸಮಾಧಾನಕರ ಸಂಗತಿ. ಕಳೆದ ಮೂರು ವರ್ಷ 4 ತಿಂಗಳಲ್ಲಿ ರಾಜ್ಯದಲ್ಲಿ 653 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಪತ್ತೆ ಮಾಡಿದ್ದು, 18,593 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಡ್ರಗ್ಸ್ ಮಾರಾಟ ದಂಧೆ ನಡೆಯುತ್ತಿದ್ದು, ಪ್ರಸಕ್ತ ಸಾಲಿನ ನಾಲ್ಕು ತಿಂಗಳಲ್ಲೇ 130.18 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಪೆಡ್ಲರ್ಗಳಿಂದ ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಜಾಲವು ದೇಶದ ಯುವಶಕ್ತಿಯನ್ನು ಹಾಳುಗೆಡಹುವ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಭಾರತವು ‘ಗೋಲ್ಡನ್ ಕ್ರೆಸೆಂಟ್’ (ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾನ್) ಮತ್ತು ‘ಗೋಲ್ಡನ್ ಟ್ರಯಾಂಗಲ್’ (ಮ್ಯಾನ್ಮಾರ್, ಲಾವೋಸ್, ಥಾಯ್ಲೆಂಡ್) ಎಂಬ ಎರಡು ಪ್ರಮುಖ ಮಾದಕದ್ರವ್ಯ ಉತ್ಪಾದನಾ ವಲಯಗಳ ನಡುವೆ ಇರುವುದರಿಂದ ಇದರ ಹಾವಳಿ ಹೆಚ್ಚಿದೆ.
ಅಂತಾರಾಷ್ಟ್ರೀಯ ಜಾಲವನ್ನು ಹತ್ತಿಕ್ಕಲು ಗಡಿ ಭಾಗಗಳಲ್ಲಿ ಡ್ರೋನ್ ಪತ್ತೆ ಹಚ್ಚುವ ತಂತ್ರಜ್ಞಾನ, ಸುಧಾರಿತ ಸ್ಕಾ್ಯನರ್ಗಳು ಮತ್ತು ಲೇಸರ್ ಗೋಡೆಗಳನ್ನು ಅಳವಡಿಸಬೇಕು. ವಿಶೇಷವಾಗಿ ಸಮುದ್ರ ಮಾರ್ಗವಾಗಿ ಬರುವ ಮಾದಕದ್ರವ್ಯಗಳನ್ನು ತಡೆಯಲು ಕೋಸ್ಟ್ ಗಾರ್ಡ್ ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕು.
ಭಾರತವು ಇಂಟರ್ಪೋಲ್ ಮತ್ತು ನೆರೆಯ ದೇಶಗಳ ಮಾದಕದ್ರವ್ಯ ವಿರೋಧಿ ದಳಗಳೊಂದಿಗೆ ನಿಕಟ ಸಂಪರ್ಕ ಹೊಂದುವುದು ಅಗತ್ಯವಾಗಿದೆ. ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಮೂಲದಲ್ಲೇ ಜಾಲವನ್ನು ಕತ್ತರಿಸಬೇಕು. ಎನ್ಡಿಪಿಎಸ್ ಕಾಯಿದೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ದೊಡ್ಡ ತಿಮಿಂಗಿಲಗಳಿಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪೆಡ್ಲರ್ಗಳಿಗೆ ಕಠಿಣ ಶಿಕ್ಷೆ ಮತ್ತು ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ವೇಗವಾಗಿ ನಡೆದರೆ, ಈ ಕರಾಳ ದಂಧೆಯಲ್ಲಿ ತೊಡಗಿಕೊಂಡವರಿಗೆ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿದಂತಾಗುತ್ತದೆ. ಮಾದಕದ್ರವ್ಯಗಳ ದುಷ್ಪರಿಣಾಮಗಳ ಕುರಿತು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಾರ್ಯಾಗಾರಗಳನ್ನು ನಡೆಸಬೇಕು. ಪಠ್ಯಪುಸ್ತಕಗಳಲ್ಲಿ ಇದರ ಭೀಕರತೆಯ ಬಗ್ಗೆ ಪಾಠಗಳನ್ನು ಅಳವಡಿಸುವುದು ಸೂಕ್ತ. ಅಲ್ಲದೆ, ಡ್ರಗ್ಸ್ ವಿರುದ್ಧದ ಸಮರದಲ್ಲಿ ಪಾಲಕರ ಪಾತ್ರವೂ ಮಹತ್ವದ್ದು. ಮಕ್ಕಳ ವರ್ತನೆಯಲ್ಲಿ ಸಣ್ಣ ಬದಲಾವಣೆ ಕಂಡುಬಂದರೂ ಪಾಲಕರು ಗಮನಿಸಬೇಕು. ಕೇವಲ ನಗರಗಳಿಗೆ ಸೀಮಿತವಾಗದೆ, ಹಳ್ಳಿಗಳಲ್ಲಿ ಬೀದಿ ನಾಟಕಗಳು ಮತ್ತು ಗ್ರಾಮಸಭೆಗಳ ಮೂಲಕ ಮಾದಕದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಬೇಕು.