ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಆ ಪರಿಣಾಮ ಆಗುತ್ತಿರುವ ಅಪಘಾತಗಳ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ. ‘ಸಂಚಾರ ನಿಯಮಗಳನ್ನು ಪಾಲಿಸಿ’ ಎಂದು ಅರಿವು ಮೂಡಿಸಿದರೂ, ದಂಡ ಹಾಕಿ ಎಚ್ಚರಿಸಿದರೂ, ಹೇಳಿಕೊಳ್ಳುವಂಥ ಪ್ರಯೋಜನವಾಗಿಲ್ಲ. ಹಾಗಾಗಿಯೇ, ಸರ್ಕಾರ ಪರಿಣಾಮಕಾರಿ ಹೆಜ್ಜೆ ಇರಿಸಿದ್ದು, ದೇಶದಲ್ಲಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸುವ ಉದ್ದೇಶದಿಂದ, ಅಂಕ ಆಧಾರಿತ ದಂಡ ಪದ್ಧತಿ’ಯನ್ನು ಶೀಘ್ರದಲ್ಲೇ ಜಾರಿಗೆ ತರಲು ಮುಂದಾಗಿದೆ. ಪ್ರತಿ ಬಾರಿ ನಿಯಮ ಉಲ್ಲಂಘಿಸಿದಾಗ ಚಾಲನಾ ಪರವಾನಗಿಯಿಂದ ನಿರ್ದಿಷ್ಟ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಅಥವಾ ನಕಾರಾತ್ಮಕ ಅಂಕಗಳನ್ನು ಸೇರಿಸಲಾಗುತ್ತದೆ. ಒಬ್ಬ ಚಾಲಕನು ಗರಿಷ್ಠ ಮಿತಿಯನ್ನು (ಉದಾಹರಣೆಗೆ 12 ಅಂಕಗಳು) ತಲುಪಿದರೆ, ಅವರ ಡಿಎಲ್ ತಕ್ಷಣವೇ ಅಮಾನತುಗೊಳಿಸಲಾಗುತ್ತದೆ. ಮದ್ಯ ಕುಡಿದು ವಾಹನ ಚಾಲನೆ ಅಥವಾ ಅತಿ ವೇಗದಂತಹ ಗಂಭೀರ ಅಪರಾಧಗಳಿಗೆ ಹೆಚ್ಚಿನ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಕೇಂದ್ರೀಕೃತ ಸಾಫ್ಟ್ವೇರ್ ಮೂಲಕ ಡಿಜಿಟಲ್ ಟ್ರಾ್ಯಕಿಂಗ್ ನಡೆಯುವುದರಿಂದ, ಬೇರೆ ರಾಜ್ಯದಲ್ಲಿ ನಿಯಮ ಉಲ್ಲಂಘಿಸಿದರೂ ಡಿಎಲ್ ಖಾತೆಗೆ ಅಂಕಗಳು ದಾಖಲಾಗುತ್ತವೆ.
ವೇಗದ ಚಾಲನೆ, ಅಜಾಗರೂಕ ಚಾಲನೆ, ಅಪ್ರಾಪ್ತ ವಯಸ್ಸಿನವರಿಂದ ವಾಹನ ಚಾಲನೆ, ಸಿಗ್ನಲ್ ಜಂಪ್ ಮಾಡುವುದು, ವಿರುದ್ಧ ಮಾರ್ಗದಲ್ಲಿ ವಾಹನ ಚಲಾಯಿಸುವುದು (ರಾಂಗ್ ವೇ) ಸೇರಿದಂತೆ ಅಪಸವ್ಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಕಠಿಣವಾದ ನಿಯಮವೇ ಒಂದಿಷ್ಟು ಬದಲಾವಣೆ ತರಬಲ್ಲದು. ಏಕೆಂದರೆ, ಭಾರತದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಎಂಬುದು ಕೇವಲ ದಂಡದ ವಿಷಯವಾಗಿರದೆ, ಗಂಭೀರ ಸಾಮಾಜಿಕ ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗೆ ರೋಡ್ ರೇಜ್ ಘಟನೆಗಳು ಹೆಚ್ಚಿದ್ದು, ತಾಳ್ಮೆ ಕಳೆದುಕೊಳ್ಳುತ್ತಿರುವ ಜನರು ರಸ್ತೆಯಲ್ಲೇ ವಾಗ್ವಾದ, ಹಲ್ಲೆಗೆ ಮುಂದಾಗುತ್ತಿದ್ದಾರೆ. ಅವೈಜ್ಞಾನಿಕ ರಸ್ತೆ ವಿನ್ಯಾಸಗಳು ಮತ್ತು ಸರಿಯಾದ ಫಲಕಗಳಿಲ್ಲದಿರುವುದು ಕೂಡ ಚಾಲಕರನ್ನು ಗೊಂದಲಕ್ಕೀಡುಮಾಡುತ್ತದೆ.
ಅಂಕ ಆಧಾರಿತ ದಂಡ ಪದ್ಧತಿ ವ್ಯವಸ್ಥೆ ಜಾರಿಗೆ ಬರುವುದರಿಂದ ಕೆಲ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಕೇವಲ ದಂಡ ಕಟ್ಟಿದರೆ ಸಾಲದು, ಡಿಎಲ್ ಕಳೆದುಕೊಳ್ಳಬಹುದು ಎಂಬ ಭೀತಿಯಿಂದ ಚಾಲಕರು ನಿಯಮ ಪಾಲಿಸಲು ಮುಂದಾಗುತ್ತಾರೆ. ಮುಖ್ಯವಾಗಿ, ಸತತವಾಗಿ ತಪ್ಪು ಮಾಡುವವರನ್ನು ರಸ್ತೆಯಿಂದ ದೂರವಿಡಲು ಇದು ಸಹಕಾರಿ. ಡಿಜಿಟಲ್ ವ್ಯವಸ್ಥೆ ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ ಮತ್ತು ಚಾಲಕನ ಹಳೆಯ ದಾಖಲೆಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಅಪಘಾತಗಳ ಸಂಖ್ಯೆ ಕಡಿಮೆಯಾಗಿ, ರಸ್ತೆಗಳು ಸುರಕ್ಷಿತವಾಗಲು ಪೂರಕವಾಗುತ್ತದೆ.
ನಗರಗಳಲ್ಲಿ ಅಳವಡಿಸಲಾಗುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮರಾ ತಾವಾಗಿಯೇ ವಾಹನದ ನಂಬರ್ ಪ್ಲೇಟ್ ಗುರುತಿಸಿ, ತಪ್ಪಿತಸ್ಥ ಸವಾರರ ಲೈಸನ್ಸ್ಗೆ ಅಂಕಗಳನ್ನು ಸೇರಿಸುತ್ತದೆ. ಆದ್ದರಿಂದ, ಇನ್ನು ಮುಂದೆ ರಸ್ತೆಯಲ್ಲಿ ಪೊಲೀಸರು ಇಲ್ಲದಿದ್ದರೂ ನಿಯಮ ಪಾಲಿಸುವುದು ಅನಿವಾರ್ಯ. ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಸರಾಸರಿ 1.8 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಶೇಕೆ 66ರಷ್ಟು ಜನರು 18ರಿಂದ 34 ವರ್ಷದೊಳಗಿನವರು. ಈ ಪ್ರಾಣಹಾನಿ ಮತ್ತು ಗಾಯಾಳುಗಳ ವೇದನೆ ತಡೆಯಲು, ರಸ್ತೆಗಳನ್ನು ಸುರಕ್ಷಿತವಾಗಿಸಲು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಇದು ನಾಗರಿಕಪ್ರಜ್ಞೆಯ ದ್ಯೋತಕವೂ ಹೌದು.