ಸಂಪಾದಕೀಯ: ನಕಲಿ ಎಐ ತೀರ್ಪುಗಳ ಆತಂಕ
ಸಂಪಾದಕೀಯ: ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ವಕೀಲರು ಕೃತಕ ಬುದ್ಧಿಮತ್ತೆ ಬಳಸಿ ಸಿದ್ಧಪಡಿಸಿದ ದಾಖಲೆಗಳಲ್ಲಿ ‘ಅಸ್ತಿತ್ವದಲ್ಲೇ ಇಲ್ಲದ’ ಅಥವಾ ನಕಲಿ ತೀರ್ಪಗಳನ್ನು ಉಲ್ಲೇಖಿಸುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ವಕೀಲರು ಸಂಶೋಧನೆಗಾಗಿ ಎಐ ಬಳಸುವಾಗ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸದಿದ್ದರೆ, ಅದು ನ್ಯಾಯದಾನದ ಹಾದಿಯನ್ನು ತಪ್ಪಿಸಬಹುದು. ಚಾಟ್ ಜಿಪಿಟಿಯಂತಹ ತಂತ್ರಜ್ಞಾನಗಳು ಅಸ್ತಿತ್ವದಲ್ಲಿಲ್ಲದ ಪ್ರಕರಣಗಳನ್ನು ಸೃಷ್ಟಿಸುವ ಅಪಾಯ ಹೊಂದಿವೆ. ತಂತ್ರಜ್ಞಾನವು ಪೂರಕವಾಗಿರಬೇಕೇ ಹೊರತು, ಮಾನವನ ವಿವೇಚನೆ ಮತ್ತು ನೈಜ ಕಾನೂನು ದಾಖಲೆಗಳಿಗೆ ಪರ್ಯಾಯವಾಗಬಾರದು. ವಿಶ್ವದಾದ್ಯಂತ ಈ ಬಗ್ಗೆ ಜಾಗೃತಿ ಮತ್ತು ಕಟ್ಟುನಿಟ್ಟಿನ ನಿಯಮಾವಳಿಗಳ ಅಗತ್ಯವಿದೆ. ನ್ಯಾಯಾಂಗದ ಪಾವಿತ್ರ್ಯ ಉಳಿಸಲು ಎಐ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಅನಿವಾರ್ಯ.
ಎಐ ಸಾಧನಗಳು ವಕೀಲರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಭರದಲ್ಲಿ, ಅತ್ಯಂತ ನೈಜವಾಗಿ ಕಾಣುವ ಆದರೆ ವಾಸ್ತವದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಪ್ರಕರಣದ ಹೆಸರುಗಳು ಮತ್ತು ಸೈಟೇಶನ್ಗಳನ್ನು ಸೃಷ್ಟಿಸುತ್ತವೆ. ಈ ನಕಲಿ ತೀರ್ಪಗಳನ್ನು ಹುಡುಕಲು ಮತ್ತು ಅವುಗಳ ಸತ್ಯಾಸತ್ಯತೆ ಪರಿಶೀಲಿಸಲು ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿಯ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಮುಖ್ಯವಾಗಿ, ಸಂಶೋಧನೆ ಮಾಡದೆಯೇ ಕೇವಲ ತಂತ್ರಜ್ಞಾನದ ಮೇಲೆ ಅವಲಂಬಿತವಾಗುವುದು ವೃತ್ತಿಪರ ಜವಾಬ್ದಾರಿಯನ್ನು ಕುಂದಿಸುತ್ತದೆ.
ಸುಳ್ಳು ದಾಖಲೆಗಳ ಆಧಾರದ ಮೇಲೆ ತೀರ್ಪು ನೀಡಲ್ಪಟ್ಟರೆ, ಅದು ಇಡೀ ನ್ಯಾಯದಾನ ಪ್ರಕ್ರಿಯೆಯನ್ನೇ ಕಲುಷಿತಗೊಳಿಸುತ್ತದೆ ಎಂಬ ಎಚ್ಚರಿಕೆ ಇರಲೇಬೇಕು. ಈಗಾಗಲೇ ವಿದೇಶಗಳಲ್ಲಿ ಮತ್ತು ಭಾರತದ ಕೆಲವು ಹೈಕೋರ್ಟ್ಗಳಲ್ಲಿ ನಕಲಿ ತೀರ್ಪು ನೀಡಿದ ವಕೀಲರಿಗೆ ಭಾರಿ ದಂಡ ವಿಧಿಸಲಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ವಕೀಲರು ತಾವು ಸಿದ್ಧಪಡಿಸಿದ ಅರ್ಜಿಯಲ್ಲಿರುವ ಎಲ್ಲ ತೀರ್ಪುಗಳು ನೈಜವಾಗಿವೆ ಮತ್ತು ಎಐನಿಂದ ಸೃಷ್ಟಿಯಾದವುಗಳಲ್ಲ ಎಂದು ಪ್ರಮಾಣೀಕರಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿರುವುದು ಸೂಕ್ತವಾಗಿದೆ. ಅಲ್ಲದೆ, ಎಐ ನೀಡುವ ಮಾಹಿತಿಯನ್ನು ಅಂತಿಮ ಎಂದು ನಂಬದೆ, ಅಧಿಕೃತ ಕಾನೂನು ವರದಿಗಳ ಮೂಲಕ ಮರು-ಪರಿಶೀಲಿಸುವುದು ಅಗತ್ಯ. ವಕೀಲರಿಗೆ ಎಐ ತಂತ್ರಜ್ಞಾನದ ಮಿತಿಗಳು ಮತ್ತು ಅದರ ಅಪಾಯಗಳ ಬಗ್ಗೆ ಬಾರ್ ಕೌನ್ಸಿಲ್ ಮೂಲಕ ತರಬೇತಿ ನೀಡಬೇಕಿದೆ.
ನ್ಯಾಯಾಲಯಗಳಲ್ಲಿ ಎಐ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶೀಘ್ರದಲ್ಲೇ ಅಧಿಕೃತ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ. ತಂತ್ರಜ್ಞಾನದ ವೇಗಕ್ಕಿಂತ ನ್ಯಾಯದ ನಿಖರತೆ ಮುಖ್ಯ ಎಂಬುದು ಸುಪ್ರೀಂ ಕೋರ್ಟ್ನ ನಿಲುವಾಗಿದೆ. ಒಟ್ಟಾರೆ, ತಂತ್ರಜ್ಞಾನದ ನೆರವು ನ್ಯಾಯದಾನದ ವೇಗವನ್ನು ಹೆಚ್ಚಿಸಬೇಕೆ ಹೊರತು ಅತಿಯಾದ ಅವಲಂಬನೆ ಸಲ್ಲ. ಮಾನವನ ವಿವೇಚನೆ, ಸಂವೇದನೆ ಹಾಗೂ ಪ್ರಬುದ್ಧತೆಯನ್ನು ಯಾವುದೇ ತಂತ್ರಜ್ಞಾನ ಮೀರಲು ಸಾಧ್ಯವಿಲ್ಲ. ವಿದೇಶಗಳಲ್ಲಿ ನಕಲಿ ತೀರ್ಪಗಳ ಅಥವಾ ತಪು್ಪ ಮಾಹಿತಿಗಳ ಸಮಸ್ಯೆ ಹಲವು ಗೊಂದಲ ಸೃಷ್ಟಿಸಿದ್ದು, ನಮ್ಮಲ್ಲೂ ಈಗಲೇ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.