ಸಂಪಾದಕೀಯ: ವಿಸ್ತರಿಸಿದ ಸಹಕಾರ ಪಥ 
ದೇಶ

ಸಂಪಾದಕೀಯ: ವಿಸ್ತರಿಸಿದ ಸಹಕಾರ ಪಥ

ವಿಶ್ವಾಸ್​ ಎನ್​ ಜೋಳದಾಳು
ಸಂಪಾದಕೀಯ: ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರು ಸೋಮವಾರದಂದು ಭಾರತ ಭೇಟಿಯ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಕ್ಷಣಾ ವಲಯ ಸೇರಿದಂತೆ ಬೃಹತ್ ವ್ಯಾಪಾರ ಒಪ್ಪಂದದ ಕುರಿತು ರ್ಚಚಿಸಿದ್ದಾರೆ. ಶಿಷ್ಟಾಚಾರವನ್ನು ಬದಿಗೊತ್ತಿ ಖುದ್ದು ಪ್ರಧಾನಿಯೇ ವಿಮಾನ ನಿಲ್ದಾಣಕ್ಕೆ ತೆರಳಿ ನಹ್ಯಾನ್ ಅವರನ್ನು ಸ್ವಾಗತಿಸಿರುವುದು ಉಭಯ ನಾಯಕರ ಸ್ನೇಹ, ಬಾಂಧವ್ಯಕ್ಕೆ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿಯವರು 2015ರಿಂದ ಈವರೆಗೆ ಏಳು ಬಾರಿ ಯುಎಇಗೆ ಭೇಟಿ ನೀಡಿದ್ದಾರೆ. 
ಭಾರತ ಮತ್ತು ಯುಎಇ ನಡುವಣ ಬಾಂಧವ್ಯ ಮತ್ತಷ್ಟು ಗಟ್ಟಿಪಡಿಸಲು ವಿಸõತವಾದ ಕಾರ್ಯಸೂಚಿಯನ್ನು ಈ ಭೇಟಿಯಲ್ಲಿ ನಿಗದಿ ಮಾಡಲಾಗಿದೆ. ಭಾರತ ಮತ್ತು ಯುಎಇ 2032ರವರೆಗೆ ಪ್ರತಿ ವರ್ಷ ಸುಮಾರು 18.17 ಲಕ್ಷ ಕೋಟಿ ರೂ. (200 ಬಿಲಿಯನ್ ಡಾಲರ್) ವ್ಯಾಪಾರ ನಡೆಸುವ ಗುರಿ ಹೊಂದಿದ್ದು, ಇದು ಈವರೆಗಿನ ದೊಡ್ಡ ವ್ಯಾಪಾರ ಒಪ್ಪಂದಗಳ ಪೈಕಿ ಒಂದಾಗಿದೆ. ಇದರಲ್ಲಿ ಬೃಹತ್ ರಕ್ಷಣಾ ಯೋಜನೆ ಜತೆಗೆ ದ್ರವೀಕೃತ ನೈಸರ್ಗಿಕ ಅನಿಲ (ಎನ್​ಎನ್​ಜಿ) ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತಕ್ಕೆ ಕತಾರ್ ಬಳಿಕ ಎನ್​ಎನ್​ಜಿ ಪೂರೈಸುತ್ತಿರುವ ಎರಡನೇ ದೊಡ್ಡ ರಾಷ್ಟ್ರ ಯುಎಇ ಆಗಿದೆ.
ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ 2025ರ ಸೆಪ್ಟೆಂಬರ್​ನಲ್ಲಿ ರಕ್ಷಣಾ ಒಪ್ಪಂದ ಏರ್ಪಟ್ಟ ನಾಲ್ಕೇ ತಿಂಗಳಲ್ಲಿ ಭಾರತ-ಯುಎಇ ನಡುವೆ ಸಹಕಾರ ಪಥ ವಿಸ್ತಾರಗೊಂಡಿರುವುದು ಗಮನಾರ್ಹ ಬೆಳವಣಿಗೆ. ರಕ್ಷಣಾ ಪಾಲುದಾರಿಕೆಯಡಿ ಉಭಯ ರಾಷ್ಟ್ರಗಳು ರಕ್ಷಣಾ ಕೈಗಾರಿಕಾ ಸಹಯೋಗ, ಸುಧಾರಿತ ತಂತ್ರಜ್ಞಾನ, ಸೈಬರ್​ಸ್ಪೆಸ್ ತರಬೇತಿ, ವಿಶೇಷ ಕಾರ್ಯಾಚರಣೆ ಹಾಗೂ ಭಯೋತ್ಪಾದನೆ ನಿಗ್ರಹದಲ್ಲಿ ಸಹಕಾರವನ್ನು ಎದುರು ನೋಡುತ್ತಿವೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಮುಂದಡಿ ಇಡಲು ನಿರ್ಧರಿಸಲಾಗಿದ್ದು, ಯುಎಇ ಸಹಕಾರದೊಂದಿಗೆ ಭಾರತದಲ್ಲಿ ಸೂಪರ್ ಕಂಪ್ಯೂಟರ್ ಕ್ಲಸ್ಟರ್ ರಚಿಸಲು ತೀರ್ವನಿಸಲಾಗಿದೆ.
ಇಂಧನ, ಬಾಹ್ಯಾಕಾಶ, ಮೂಲಸೌಕರ್ಯ ಅಭಿವೃದ್ಧಿ, ಆಹಾರ ಭದ್ರತೆ, ಕೃಷಿ ರಫ್ತು ಉತ್ತೇಜನ ಕುರಿತು ಎರಡೂ ರಾಷ್ಟ್ರಗಳು ಸಹಕಾರದ ನೀತಿಯನ್ನು ಅನುಸರಿಸಲು ಮುಂದಾಗಿರುವುದು, ಉತ್ತಮ ಬೆಳವಣಿಗೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಪದೇಪದೆ ಸುಂಕ ಬೆದರಿಕೆಯಂಥ ಸ್ಥಿತಿಯಲ್ಲಿ ಭಾರತ ಮತ್ತು ಯುಎಇ ಸೇರಿ ಸ್ನೇಹ ಮತ್ತು ಬಾಂಧವ್ಯವನ್ನು ಹಲವು ರಂಗಗಳಿಗೆ ವಿಸ್ತರಿಸಿವೆ. ಜಾಗತಿಕವಾಗಿ ಭಾರತ ಹೊಸ ಸ್ನೇಹಿತರನ್ನು ಸಂಪಾದಿಸುತ್ತಿರುವುದು ಮತ್ತು ಆ ಸ್ನೇಹವನ್ನು ಬಲಗೊಳಿಸುತ್ತಿರುವುದು ರಾಜತಾಂತ್ರಿಕವಾಗಿ ಮಹತ್ವದ ಮುನ್ನಡೆಯೇ ಸರಿ.
 ಭಾರತದ ಬಗ್ಗೆ ಸಕಾರಾತ್ಮಕ ಮನೋಭಾವ, ಸಹಕಾರದ ಆಶಯವನ್ನು ಹೊಂದಿರುವ ಯುಎಇ ಕೂಡ ದ್ವಿಪಕ್ಷೀಯ ಸಂಬಂಧಗಳನ್ನು ಶಕ್ತಿಯುತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ನಹ್ಯಾನ್ ಅವರ ಈ ಭೇಟಿಯಿಂದ ಭಾರತಕ್ಕೆ ಇಂಧನ, ಹೂಡಿಕೆ ಸೇರಿ ಹಲವು ರಂಗಗಳಲ್ಲಿ ಪ್ರಯೋಜನವಾಗಲಿದೆ. ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡಿದ ರಾಷ್ಟ್ರಗಳ ಪೈಕಿ ಯುಎಇ ಈಗ ನಾಲ್ಕನೇ ಸ್ಥಾನದಲ್ಲಿದೆ ಎಂಬುದು ಗಮನಾರ್ಹ.