ಸಂಪಾದಕೀಯ: ಆರ್ಥಿಕ ಆಶಾಭಾವ 
ದೇಶ

ಸಂಪಾದಕೀಯ: ಆರ್ಥಿಕ ಆಶಾಭಾವ

ಬಾಬುಪ್ರಸಾದ್​ ಮೋಡಿಸ್​
ಪ್ರಸ್ತುತ ಭಾರತಕ್ಕೆ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಯಿದ್ದು, ಸುಮಾರು 3.9 ಟ್ರಿಲಿಯನ್​ ಡಾಲರ್​ನಷ್ಟು ಜಿಡಿಪಿಯನ್ನು ಹೊಂದಿದೆ. ಇದಕ್ಕೆ ಇನ್ನಷ್ಟು ಹೆಚ್ಚುಗಾರಿಕೆ ಎನ್ನುವಂತೆ, ಈ ಆರ್ಥಿಕ ವರ್ಷದಲ್ಲೇ ದೇಶದ ಜಿಡಿಪಿ 4 ಟ್ರಿಲಿಯನ್​ ಡಾಲರ್​ ದಾಟುವ ಸಾಧ್ಯತೆಯಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್​ ಹೇಳಿದ್ದಾರೆ. ಕೇಂದ್ರ ಸರ್ಕಾರಕ್ಕೆ ಆರ್ಥಿಕ ಸಲಹೆ ನೀಡುವವರು ಸೂಕ್ತ ಆಧಾರವಿಲ್ಲದೆ ಇಂಥ ಹೇಳಿಕೆಗಳನ್ನು ನೀಡುವುದಿಲ್ಲ ಅಥವಾ ಅಂದಾಜು ಮಾಡುವುದಿಲ್ಲ. ಹೀಗಾಗಿ ಅವರ ಮಾತು ವಾಸ್ತವವಾಗಬಹುದೆಂಬ ವಿಶ್ವಾಸವಿರಿಸಬಹುದಾಗಿದೆ. ಜಾಗತಿಕವಾಗಿ ಭೌಗೋಳಿಕ&ರಾಜಕೀಯ ಪರಿಸ್ಥಿತಿ ಭಾರಿ ಅನಿಶ್ಚಿತ ಸ್ಥಿತಿಯಲ್ಲಿದೆ. ಹೀಗಿದ್ದರೂ ಈ ಪ್ರಮಾಣದ ಆರ್ಥಿಕ ಬೆಳವಣಿಗೆ ಸಾಧಿಸುವುದರಿಂದ ಭಾರತದ ಸ್ಥಾನಮಾನ ಮತ್ತು ಪ್ರಭಾವ ಜಾಗತಿಕ ವ್ಯವಸ್ಥೆಯಲ್ಲಿ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.
ಯಾವುದೇ ದೇಶದ ಆರ್ಥಿಕ ಸ್ಥಿತಿಗತಿಗೂ&ಅದು ಅನುಸರಿಸುವ ನೀತಿಗಳಿಗೂ ಅಂತರ್​ ಸಂಬಂಧವಿರುತ್ತದೆ. ಅದರಲ್ಲೂ ತಾಪಮಾನ ಏರಿಕೆಯ ದುಷ್ಪರಿಣಾಮಗಳು ಈಗಾಗಲೇ ವ್ಯಾಪಕವಾಗಿ ಕಂಡುಬರುತ್ತಿರುವುದರಿಂದಾಗಿ, ಸರ್ಕಾರದ ನೀತಿಗಳು ಕೃಷಿ, ಜನಜೀವನ, ಪರಿಸರ ಮುಂತಾದವುಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತವೆ ಎಂಬುದು ಸಹ ಮುಖ್ಯವಾಗುತ್ತದೆ.
2070ರ ಹೊತ್ತಿಗೆ ನೆಟ್​ ಝೀರೋ ಸಾಧಿಸುವುದಾಗಿ, ಗ್ಲಾಸ್ಗೋದಲ್ಲಿ 2021ರಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ಭಾರತ ಘೋಷಿಸಿದೆ. ಈ ಗುರಿ ಸಾಧನೆ ನಿಟ್ಟಿನಲ್ಲಿ, ಇಂಧನ, ಸಾರಿಗೆ, ಕೈಗಾರಿಕೆ ಇತ್ಯಾದಿ ಪ್ರಮುಖ ರಂಗಗಳಲ್ಲಿ ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಯೋಜನೆಗಳು ಬೇಕಾಗುತ್ತವೆ. ಇದಕ್ಕೆ ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯ. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಭಾರತ ಒತ್ತುನಿಡಿರುವುದು ಈ ನೀತಿಗೆ ಪೂರಕವಾಗಿದೆ. "2070ರ ವೇಳೆಗೆ ನೆಟ್​ ಝೀರೋ ಸಾಧಿಸುವುದಕ್ಕೆ ಬದ್ಧರಾಗಿದ್ದೇವೆ' ಎಂದು ಅನಂತ ನಾಗೇಶ್ವರನ್​ ಸಹ ಹೇಳಿದ್ದಾರೆ.
ಭಾರತದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಕಾರಾತ್ಮಕ ಚಿತ್ರಣ ನೀಡುವ ಇನ್ನೊಂದು ವರದಿಯೂ ಈಚೆಗೆ ಹೊರಬಂದಿದೆ. ಕರೊನಾ ನಂತರ ಭಾರತದ ಆರ್ಥಿಕ ಬೆಳವಣಿಗೆ ಉಳಿದ ದೇಶಗಳಿಗಿಂತ ಏರುಗತಿಯಲ್ಲಿದೆ. ಅಮೆರಿಕ, ಚೀನಾ, ಇಂಗ್ಲೆಂಡ್​ ಹಾಗೂ ಐರೋಪ್ಯ ಒಕ್ಕೂಟಕ್ಕಿಂತ ತ್ವರಿತ ಬೆಳವಣಿಗೆಯನ್ನು ಭಾರತ ಸಾಧಿಸಿದೆ ಎಂದು ಹಾರ್ವರ್ಡ್​ ವಿಶ್ವವಿದ್ಯಾಲಯದ ಆರ್ಥಿಕ ತಜ್ಞ ಜೇಸನ್​ ಫರ್ಮನ್​ ಹೇಳಿರುವುದು ಗಮನಾರ್ಹ. 2019ರಿಂದ 2025ರ ಅವಧಿಯ ಆರ್ಥಿಕ ಬೆಳವಣಿಗೆಯ ತೌಲನಿಕ ಅಧ್ಯಯನ ನಡೆಸಿ ಅವರು ಈ ಅಭಿಪ್ರಾಯ ನೀಡಿದ್ದಾರೆ. ಡಿಜಿಟಲ್​ ಮೂಲಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದು, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ಹೂಡಿಕೆಸ್ನೇಹಿ ನೀತಿ ಅನುಸರಿಸಿದ್ದು ಭಾರತದ ಆರ್ಥಿಕ ಸ್ಥಿತಿ ಚೇತರಿಕೆಗೆ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಸುಂಕ ನೀತಿಗಳು ಮತ್ತು ರಾಜತಾಂತ್ರಿಕ ನಿರ್ಧಾರಗಳಿಂದಾಗಿ ಜಾಗತಿಕವಾಗಿ ಹಲವು ಬಗೆಯ ಪರಿಣಾಮಗಳಾಗುತ್ತಿವೆ. ಇನ್ನೊಂದೆಡೆ, ವಿಶ್ವದ ಹಲವು ದೇಶಗಳು ಯುದ್ಧದಲ್ಲಿ ತೊಡಗಿಕೊಂಡಿವೆ. ಇದರಿಂದಾಗಿ ಆಮದು&ರಪ್ತು ವ್ಯತ್ಯಾಸ, ವಸ್ತುಗಳ ಬೆಲೆ ಏರಿಳಿತ ಮುಂತಾದ ಪರಿಣಾಮಗಳು ಕಂಡುಬರುತ್ತಿವೆ. ಇದು ನೇರವಾಗಿ ಆರ್ಥಿಕ ಸ್ಥಿತಿಗತಿ ಮೇಲೆ ಪ್ರಭಾವ ಬೀರುತ್ತದೆ. ಭಾರತ ಕೂಡ ಈ ಪರಿಣಾಮಗಳಿಂದ ಹೊರತಾಗಿಲ್ಲ. ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ ಎಚ್ಚರಿಕೆಯ ಹೆಜ್ಜೆಯಂತೂ ಅನಿವಾರ್ಯ