ಸಂಪಾದಕೀಯ: ಸುರಕ್ಷೆ ಜತೆ ಚೆಲ್ಲಾಟ ಸಲ್ಲ
ಸಂಪಾದಕೀಯ: ಗುಜರಾತ್ನ ಅಹಮದಾಬಾದ್ನಲ್ಲಿ 2025ರ ಜೂನ್ 12ರಂದು ಸಂಭವಿಸಿದ ವಿಮಾನ ದುರಂತದ ಕಹಿನೆನಪನ್ನು ದೇಶ ಇನ್ನೂ ಮರೆತಿಲ್ಲ. ಈ ಅಪಘಾತದಲ್ಲಿ 242 ಪ್ರಯಾಣಿಕರು, ವಿಮಾನ ಸಿಬ್ಬಂದಿ ಸೇರಿದಂತೆ ಒಟ್ಟು 270 ಜನರು ಪ್ರಾಣ ಕಳೆದುಕೊಂಡರು. ಆದರೆ, ಈ ಘಟನೆಯಿಂದ ಪಾಠ ಕಲಿತು, ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಿಕೊಳ್ಳಬೇಕಾದ ವಿಮಾನಯಾನ ಸಂಸ್ಥೆಗಳು ಮಾತ್ರ ಎಚ್ಚೆತ್ತುಕೊಳ್ಳದಿರುವುದು ನಿಜಕ್ಕೂ ದುರ್ದೈವದ ಸಂಗತಿ. ವಿಮಾನಯಾನ ಉದ್ಯಮದಲ್ಲಿ ಲಾಭದತ್ತ ಮಾತ್ರ ಗಮನಹರಿಸುವ ಕಂಪನಿಗಳ ಬೇಜವಾಬ್ದಾರಿಗೂ ಇದು ಜ್ವಲಂತ ಸಾಕ್ಷಿ. ಇತ್ತೀಚಿನ ದಿನಗಳಲ್ಲಿ ವಿಮಾನದ ಇಂಜಿನ್ ವೈಫಲ್ಯದ ಘಟನೆಗಳು ಪದೇಪದೆ ನಡೆಯುತ್ತಿದ್ದು, ತುರ್ತು ಲ್ಯಾಂಡಿಂಗ್ ಆಗಾಗ ನಡೆಯುತ್ತಲೇ ಇದೆ. ವಿಮಾನಗಳ ನಿರ್ವಹಣೆಯಲ್ಲಿ ಸಮಸ್ಯೆ ಇದೆಯೇ ಅಥವಾ ಹಳೆಯ ವಿಮಾನಗಳು ಕಾರ್ಯಾಚರಿಸುತ್ತಿವೆಯೇ ಎಂಬುದರ ಬಗ್ಗೆ ಸಂಬಂಧಪಟ್ಟವರು ಸ್ಪಷ್ಟೀಕರಣ ನೀಡಿಲ್ಲ. ಇಂಥ ಘಟನೆಗಳ ಪರಿಣಾಮ ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ವಿಮಾನದಲ್ಲಿ ಪಯಣಿಸುವಂತಾಗಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇತ್ತೀಚೆಗಷ್ಟೇ ಖಾಸಗಿ ಜೆಟ್ ವಿಮಾನ ಅಪಘಾತದಲ್ಲಿ ಮೃತರಾಗಿದ್ದು, ಈ ದುರಂತದ ಬಗ್ಗೆ ತನಿಖೆ ನಡೆಯುತ್ತಿದೆ.
ಕೆಲವು ನಿರ್ದಿಷ್ಟ ಮಾದರಿಯ ಇಂಜಿನ್ಗಳಲ್ಲಿ (ಉದಾಹರಣೆಗೆ, ಪ್ರ್ಯಾಟ್ ಆಂಡ್ ವ್ಹಿಟ್ನಿ) ಜಾಗತಿಕವಾಗಿ ವಿನ್ಯಾಸದ ದೋಷಗಳು ಕಂಡುಬಂದಿವೆ. ಇವು ಅತಿಯಾದ ಶಾಖ ಅಥವಾ ಘರ್ಷಣೆಯಿಂದಾಗಿ ಹಾರಾಟದ ಮಧ್ಯೆ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ. ಕೆಲವು ವಿಮಾನಯಾನ ಸಂಸ್ಥೆಗಳು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಹಳೆಯ ವಿಮಾನಗಳನ್ನು ದೀರ್ಘಕಾಲ ಬಳಸುತ್ತಿವೆ. ಕೋವಿಡ್ ನಂತರ ವಿಮಾನದ ಬಿಡಿಭಾಗಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಬಿಡಿಭಾಗಗಳನ್ನು ಬದಲಾಯಿಸಲು ಸಾಧ್ಯವಾಗದೆ ನಿರ್ವಹಣೆಯಲ್ಲಿ ಹಿನ್ನಡೆಯಾಗುತ್ತಿದ್ದು, ಬಿಡಿಭಾಗಗಳ ಸಮರ್ಪಕ ಪೂರೈಕೆಗೆ ಆದ್ಯತೆ ನೀಡಬೇಕಿದೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ವಿಮಾನಯಾನ ಸಂಸ್ಥೆಗಳ ಮೇಲೆ ಹಠಾತ್ ದಾಳಿ ನಡೆಸಿ ವಿಮಾನಗಳ ಸುರಕ್ಷತೆಯನ್ನು ಪರಿಶೀಲಿಸುತ್ತಿದೆ. ಸುರಕ್ಷತಾ ನಿಯಮ ಪಾಲಿಸದ ಸಂಸ್ಥೆಗಳಿಗೆ ಭಾರಿ ದಂಡ ವಿಧಿಸಲಾಗುತ್ತಿದೆ. ನಿರ್ದಿಷ್ಟ ದೋಷವಿರುವ ಇಂಜಿನ್ಗಳನ್ನು ಹೊಂದಿರುವ ವಿಮಾನಗಳನ್ನು ಹಾರಾಟದಿಂದ ತಡೆಹಿಡಿಯಲು ಸೂಚನೆ ನೀಡಲಾಗಿದೆ. ಪ್ರತಿಯೊಂದು ವಿಮಾನವು ಹಾರಾಟಕ್ಕೆ ಮುನ್ನ ಫಿಟ್ನೆಸ್ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೂ, ಅಪಸವ್ಯಗಳು ಕಡಿಮೆಯಾಗುತ್ತಿಲ್ಲ ಎಂಬುದು ಶೋಚನೀಯ.
ಈ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಜವಾಬ್ದಾರಿ ಮತ್ತು ಉತ್ತರದಾಯಿತ್ವದಿಂದ ನುಣುಚಿಕೊಳ್ಳುವಂತಿಲ್ಲ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಗೆ ಸೂಕ್ತ ತರಬೇತಿ ಒದಗಿಸಬೇಕು. ಇಂಜಿನ್ನ ಆರೋಗ್ಯವನ್ನು ಹಾರಾಟದ ಸಮಯದಲ್ಲಿಯೇ ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುವ ಸಾಫ್ಟ್ವೇರ್ಗಳನ್ನು ಬಳಸಲಾಗುತ್ತಿದ್ದು, ಈ ಸಂಖ್ಯೆ ಹೆಚ್ಚಿಸಬೇಕಿದೆ. ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ ಹಳೆಯ ವಿಮಾನಗಳ ಬದಲಿಗೆ ಹೊಸ ತಂತ್ರಜ್ಞಾನದ ವಿಮಾನಗಳನ್ನು ಖರೀದಿಸಲು ಉತ್ತೇಜನ ನೀಡಬೇಕಿದೆ. ಒಟ್ಟಾರೆ, ವಿಮಾನಯಾನ ಪ್ರಯಾಣವನ್ನು ಸುರಕ್ಷಿತ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆಯಬೇಕಿದ್ದು, ಈ ಸಮಸ್ಯೆಗಳು ಮುಂಬರುವ ದಿನಗಳಲ್ಲಿ ಮರುಕಳಿಸದಂತೆ ಕಾಳಜಿ ವಹಿಸಬೇಕಿದೆ.