ಸಂಪಾದಕೀಯ: ಅವಕಾಶದ ದುರ್ಬಳಕೆ ಸಲ್ಲ 
ದೇಶ

ಸಂಪಾದಕೀಯ: ಅವಕಾಶದ ದುರ್ಬಳಕೆ ಸಲ್ಲ

ಸಂಪಾದಕೀಯ: ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗಳ ದುರುಪಯೋಗದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ತೀವ್ರ ಅಸಮಾಧಾನ ಹೊರಹಾಕಿದ್ದು, ಪಿಐಎಲ್ ಎಂಬುದು ‘ಪ್ರೈವೇಟ್ ಇಂಟ್ರೆಸ್ಟ್ ಲಿಟಿಗೇಶನ್’, ‘ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಶನ್’, ‘ಪೈಸಾ ಇಂಟ್ರೆಸ್ಟ್ ಲಿಟಿಗೇಶನ್’, ‘ಪೊಲಿಟಿಕಲ್ ಇಂಟ್ರೆಸ್ಟ್ ಲಿಟಿಗೇಶನ್’ ಆಗಿದೆ ಎಂದು ಕಟುಮಾತುಗಳಲ್ಲಿ ಹೇಳಿದೆ. ಶಬರಿಮಲೆ ದೇಗುಲವೂ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರಿಗಾಗುವ ಪಕ್ಷಪಾತದ ವಿರುದ್ಧ ಮತ್ತು ವಿವಿಧ ಧರ್ಮಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಈ ಅಭಿಮತ ವ್ಯಕ್ತಪಡಿಸಿದ್ದು ಗಮನಾರ್ಹ ಮತ್ತು ಸಂಬಂಧಪಟ್ಟ ಎಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಶಬರಿಮಲೆ ದೇಗುಲಕ್ಕೆ 10-50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧ ಪ್ರಶ್ನಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ ಸಲ್ಲಿಸಿದ 2006ರ ಪಿಐಎಲ್ ವಿಚಾರಣೆಯನ್ನು ನ್ಯಾಯಪೀಠ ನಡೆಸುತ್ತಿದೆ. 2006ರ ಜೂನ್‌ನಲ್ಲಿ ಪ್ರಕಟವಾದ ನಾಲ್ಕು ಪತ್ರಿಕಾ ಲೇಖನಗಳನ್ನು ಆಧರಿಸಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ, ‘ಪಿಐಎಲ್‌ಗೆ ಈ ಲೇಖನ ಹೇಗೆ ಕಾರಣ ಆಗುತ್ತದೆ? ಪಿಐಎಲ್ ಸಲ್ಲಿಸಲು ಲೇಖನಗಳನ್ನು ಬಳಸುವುದು ಸುಲಭ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಿಸಿದರು. ‘ಪಿಐಎಲ್ ಅಗತ್ಯ ಇರುವ ಸಾರ್ವಜನಿಕರಿಗಾಗಿ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಅಂಗೀಕರಿಸಲಾಗುತ್ತದೆ’ ಎಂದು ನ್ಯಾ. ಬಿ.ವಿ. ನಾಗರತ್ನಾ ಸ್ಪಷ್ಟಪಡಿಸಿದರು. ಈ ಕುರಿತ ವಿಚಾರಣೆ ಮುಂದುವರಿಯಲಿದೆ. ಅಂದಹಾಗೆ, 10-50 ವಯೋಮಾನದ ಮಹಿಳೆಯರಿಗೆ ಶಬರಿಮಲೆಯಲ್ಲಿ ಪ್ರವೇಶ ನಿಷೇಧ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ 2018ರ ತೀರ್ಪಿನಲ್ಲಿ ಹೇಳಿದೆ.
ಪಿಐಎಲ್ ಹೆಸರೇ ಹೇಳುವಂತೆ, ಸಾರ್ವಜನಿಕ ಹಿತಾಸಕ್ತಿ ಉದ್ದೇಶ ಇರುವ ವಿಷಯಗಳ ಬಗ್ಗೆ ಅರ್ಜಿ ಸಲ್ಲಿಸಲು ಇರುವ ಅವಕಾಶ. 1980ಕ್ಕಿಂತ ಮೊದಲು, ಪ್ರತಿವಾದಿಯಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಾಧಿತರಾದವರು ಮಾತ್ರ ಕೋರ್ಟುಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಸಾರ್ವಜನಿಕ ಹಿತದ ವಿಷಯ ಒಳಗೊಂಡಿದ್ದಲ್ಲಿ ಪ್ರಕರಣದಲ್ಲಿ ನೇರವಾಗಿ ಒಳಗೊಳ್ಳದವರು ಕೂಡ ಅರ್ಜಿ ಹಾಕಬಹುದು ಎಂಬ ಅವಕಾಶವನ್ನು ಸುಪ್ರೀಂ ಕೋರ್ಟ್ ನೀಡಿತು. ಪಿಐಎಲ್ ಅನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದಾಗಿರುತ್ತದೆ.
ಪಿಐಎಲ್‌ಗಳಿಂದ ಐತಿಹಾಸಿಕ ತೀರ್ಮಾನಗಳು ಹೊರಬಿದ್ದ ನಿದರ್ಶನಗಳು ಸಹ ಇವೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವು ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯವು ಘೋಷಿಸಿ, ಈ ಕುರಿತು ಮಾರ್ಗಸೂಚಿ ರಚಿಸಲು ನಿರ್ದೇಶಿಸಿದ ವಿಶಾಖಾ ವರ್ಸಸ್ ರಾಜಸ್ಥಾನ ಸರ್ಕಾರ ಪ್ರಕರಣ ಇದಕ್ಕೊಂದು ಉತ್ತಮ ಉದಾಹರಣೆ. ಗಂಗಾ ನದಿಗೆ ಮಾಲಿನ್ಯ ಉಂಟುಮಾಡುತ್ತಿದ್ದ ಕೈಗಾರಿಕೆಗಳನ್ನು ಮುಚ್ಚಲು ಆದೇಶಿಸಿ, ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಂಡ ಮೇಲೆ ಅವುಗಳ ಪುನರಾರಂಭಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿಸಿದ ಪ್ರಕರಣ ಮತ್ತೊಂದು ನಿದರ್ಶನ. ಆದರೆ ಪಿಐಎಲ್ ಹೆಸರಿನಲ್ಲಿ ಕ್ಷುಲ್ಲಕ ಸಂಗತಿಗಳ ಬಗ್ಗೆಯೂ ಅರ್ಜಿಗಳು ಸಲ್ಲಿಕೆಯಾಗಿ ಕೋರ್ಟುಗಳು ಅಸಮಾಧಾನ ವ್ಯಕ್ತಪಡಿಸಿದ ಉದಾಹರಣೆಗಳು ಕೂಡ ಸಾಕಷ್ಟಿವೆ. ಮಾಹಿತಿ ಹಕ್ಕು ಕಾಯ್ದೆ, ಕೌಟುಂಬಿಕ ದೌರ್ಜನ್ಯ ವಿರೋಧಿ ಕಾಯ್ದೆ ದುರುಪಯೋಗದ ಬಗ್ಗೆಯೂ ಆಗೀಗ ದೂರು ಕೇಳಿಬರುವುದಿದೆ. ಯಾವುದೇ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೇ ವಿನಾ ದುರುಪಯೋಗಕ್ಕೆ ಆಸ್ಪದ ಆಗಬಾರದು.