ರಾಜ್ಯಗಳ ನಡುವೆ ಇರುವ ಜಲ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಸಲಹೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿರುವುದು ಸೂಕ್ತವಾಗಿದೆ. ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು ಇದಕ್ಕೆ ನಿದರ್ಶನವಾಗಿ ನೀಡಿರುವ ಅವರು, ಜಲಶಕ್ತಿಯ ಗರಿಷ್ಠ ಬಳಕೆಯನ್ನೂ ಪ್ರತಿಪಾದಿಸಿದ್ದಾರೆ. ವಿವಿಧ ಯೋಜನೆಗಳ ಜಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯಕ್ಕಾಗಿ ಸ್ಥಾಪಿಸಿರುವ ‘ಪ್ರಗತಿ’ ಉಪಕ್ರಮದ ಸಭೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ. ಸೌರಶಕ್ತಿ ಬಳಕೆ, ಸ್ವಚ್ಛ ಭಾರತ ಯೋಜನೆ, ತ್ಯಾಜ್ಯ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆಯೂ ಪ್ರಧಾನಿ ಈ ಸಭೆಯಲ್ಲಿ ಒತ್ತು ನೀಡಿ ಮಾತನಾಡಿದ್ದಾರೆ.
ಮಧ್ಯಪ್ರದೇಶದ ಕೆನ್ ನದಿಯ ಹೆಚ್ಚುವರಿ ನೀರನ್ನು ಉತ್ತರ ಪ್ರದೇಶದ ಬೆಟ್ವಾ ನದಿಗೆ ಹರಿಸಿ, ಬರಪೀಡಿತ ಬುಂದೇಲ್ಖಂಡ ಪ್ರದೇಶಕ್ಕೆ ನೀರೊದಗಿಸುವ ಯೋಜನೆಯನ್ನು ಮೋದಿಯವರು ಪ್ರಸ್ತಾಪಿಸಿ, ಜಲವಿವಾದವನ್ನು ಸಹಕಾರದ ಮೂಲಕ ಬಗೆಹರಿಸಿಕೊಳ್ಳಲು, ಕಾಲಮಿತಿಯಲ್ಲಿ ಯೋಜನೆಗೆ ಒಪ್ಪಿಗೆ, ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ ಮತ್ತು ತ್ವರಿತಗತಿಯ ಅನುಷ್ಠಾನಕ್ಕೆ ಈ ಯೋಜನೆ ಒಂದು ನಿದರ್ಶನ ಎಂದು ಹೇಳಿದರು. ಇತರ ರಾಜ್ಯಗಳು ಸಹ ಇದೇ ರೀತಿಯಲ್ಲಿ ನದಿ ಜೋಡಣೆ, ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ದೀರ್ಘಕಾಲೀನ ಜಲ ಸುಸ್ಥಿರತೆಗಾಗಿ ದಕ್ಷ ನೀರಾವರಿ ಯೋಜನೆಗಳ ಜಾರಿ ಮಾದರಿ ಅನುಸರಿಸುವಂತೆ ಮೋದಿ ಸಲಹೆ ನೀಡಿದ್ದು ಗಮನಾರ್ಹ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಒಡಿಶಾ, ಛತ್ತೀಸ್ಗಢ ಮುಂತಾಗಿ ವಿವಿಧ ರಾಜ್ಯಗಳು ನದಿ ನೀರು ಹಂಚಿಕೆ ವಿವಾದಗಳನ್ನು ಹೊಂದಿದ್ದು, ಕೆಲವು ವಿವಾದಗಳಂತೂ ದಶಕಗಳ ಕಾಲದಿಂದ ಬಗೆಹರಿಯದೆ ಉಳಿದುಕೊಂಡಿವೆ. ಇದರಿಂದ ಎಲ್ಲ ಪಕ್ಷಗಾರರಿಗೂ ಅನಗತ್ಯ ವಿಳಂಬ, ಕಾನೂನು ಹೋರಾಟ, ಯೋಜನೆಯ ವೆಚ್ಚ ಏರಿಕೆ ಇತ್ಯಾದಿ ಸಮಸ್ಯೆಗಳಲ್ಲದೆ, ಯೋಜನೆಯು ಕಾಲಮಿತಿಯಲ್ಲಿ ಜಾರಿಯಾಗದೆ ಇದ್ದರೆ ನೈಜ ಫಲಾನುಭವಿಗಳು ವಂಚಿತರಾಗಬೇಕಾಗುತ್ತದೆ. ತೀರ ಈಚಿನ ಉದಾಹರಣೆಯನ್ನೇ ನೋಡುವುದಾದರೆ, ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆಗೆ ತಮಿಳುನಾಡು ತಕರಾರು ತೆಗೆದಿದ್ದು, ಡಿಪಿಆರ್ ಕುರಿತು ಅದು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ. ಆ ರಾಜ್ಯದ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಪ್ರಧಾನಿ ಭೇಟಿ ಸಂದರ್ಭದಲ್ಲಿಯೂ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ.
ಈ ಯೋಜನೆಯಿಂದ ತಮಿಳುನಾಡಿಗೆ ಏನೂ ತೊಂದರೆಯಾಗದು ಎಂದು ಕರ್ನಾಟಕದ ಸ್ಪಷ್ಟಪಡಿಸಿದೆ. ನೀರಾವರಿ ಇರಲಿ ಅಥವಾ ಇತರ ಯಾವುದೇ ಯೋಜನೆ ಇರಲಿ, ಅದು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಂಡು, ಕಾರ್ಯಾರಂಭಿಸಿದಾಗಲೇ ಅದರ ಮೂಲ ಉದ್ದೇಶದತ್ತ ಹೆಜ್ಜೆಯಿಟ್ಟ ಹಾಗೆ. ಇಲ್ಲವಾದಲ್ಲಿ ಯೋಜನಾ ವೆಚ್ಚ ಹೆಚ್ಚಿ ಸರ್ಕಾರಕ್ಕೆ ಹೊರೆ ಮತ್ತು ಹಾಗೂ ಉತ್ಪಾದಕತೆ ಕಮ್ಮಿಯಾಗಿ ಫಲಾನುಭವಿಗಳು ನಷ್ಟ ಅನುಭವಿಸಬೇಕಾಗುತ್ತದೆ. ನದಿಯೊಂದು ಬೇರೆ ಬೇರೆ ಪ್ರದೇಶಗಳಲ್ಲಿ ಹರಿಯುವಾಗ ಯೋಜನೆಗಳು, ನೀರು ಹಂಚಿಕೆ ಇತ್ಯಾದಿ ವಿಚಾರಗಳಲ್ಲಿ ವಿವಾದಗಳು ಉಂಟಾಗುವುದು ಸಹಜ. ನ್ಯಾಯಾಲಯದ ಮೆಟ್ಟಿಲೇರಿದರೆ ಇತ್ಯರ್ಥವಾಗಲು ಬಹು ಸಮಯ ಹಿಡಿಯುತ್ತದೆ. ನ್ಯಾಯಮಂಡಳಿ ರಚನೆಯಾದರೂ ವಿವಾದ ಪರಿಹಾರಕ್ಕೆ ಸಮಯ ಬೇಕು. ನಮ್ಮದು ಒಕ್ಕೂಟ ವ್ಯವಸ್ಥೆ. ರಾಜ್ಯ-ರಾಜ್ಯಗಳ ನಡುವೆ ಅಥವಾ ರಾಜ್ಯ-ಕೇಂದ್ರದ ನಡುವೆ ವಿವಾದವೇನಾದರೂ ಉಂಟಾದಲ್ಲಿ, ಚರ್ಚೆ ಮುಖಾಂತರ ಬಗೆಹರಿಸಿಕೊಂಡರೆ ಒಳಿತು. ಅಲ್ಲಿ ಇತ್ಯರ್ಥವಾಗದಿದ್ದರೆ ಬೇರೆ ಮಾರ್ಗಗಳು ಇದ್ದೇ ಇವೆ.