ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದವರ ಪತ್ತೆಗೆ ದೇಶಾದ್ಯಂತ ಅಭಿಯಾನ ನಡೆಯುತ್ತಿದೆ. ಕರ್ನಾಟಕದಲ್ಲಿ 20 ಲಕ್ಷಕ್ಕೂ ಅಧಿಕ ಬಾಂಗ್ಲಾದೇಶ ಪ್ರಜೆಗಳು ನೆಲೆಸಿದ್ದಾರೆ ಎಂಬ ಆತಂಕಕಾರಿ ಸಂಗತಿ ಪೊಲೀಸ್ ವಾರ್ಷಿಕ ಸಭೆಯಲ್ಲಿ ಬಹಿರಂಗಗೊಂಡಿದೆ. ಇಷ್ಟು ಭಾರಿ ಪ್ರಮಾಣದಲ್ಲಿ ಬಾಂಗ್ಲಾದೇಶಿಯರು ರಾಜ್ಯದಲ್ಲಿ ನೆಲೆಸಿರುವುದು ಕಳವಳ ಮೂಡಿಸಿದೆ. ಈ ಬೆಳವಣಿಗೆ ಆಂತರಿಕ ಭದ್ರತೆಗೂ ಮಾರಕ. ಗಡಿಪಾರಿಗೆ ಪ್ರತ್ಯೇಕ ಕಾನೂನನ್ನು ರೂಪಿಸಿ, ನಿರ್ದಾಕ್ಷಿಣ್ಯವಾಗಿ ಇವರನ್ನು ಹೊರಗಟ್ಟಬೇಕು.
ಭದ್ರತೆಯೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ನೆಲೆಸಿದ್ದರೂ, ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂಬುದು ಯಕ್ಷಪ್ರಶ್ನೆ. ಬೆಂಗಳೂರು ಹೊರವಲಯ, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕೊಡಗು, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ನಗರದಲ್ಲಿ ಬಾಂಗ್ಲಾ ನುಸುಳುಕೋರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದಲ್ಲದೆ ಡ್ರಗ್ಸ್ ಸಾಗಾಣಿಕೆ, ಮಾರಾಟ, ಸೈಬರ್ ಅಪರಾಧ, ಮಕ್ಕಳು ಮತ್ತು ಮಹಿಳೆಯರ ಕಳ್ಳಸಾಗಾಣಿಕೆ, ವೇಶ್ಯಾವಾಟಿಕೆ ದಂಧೆಯಲ್ಲೂ ಇವರ ಪಾತ್ರ ಹೆಚ್ಚಿದೆ. ಯಾವುದೇ ಅಪರಾಧ ಪ್ರಕರಣವನ್ನು ಭೇದಿಸಿದರೂ, ಅದರಲ್ಲಿ ವಿದೇಶಿ ಪ್ರಜೆಗಳ ಪಾತ್ರ ಪತ್ತೆಯಾಗುತ್ತಿದೆ ಎಂಬುದು ಕಾನೂನು-ಸುವ್ಯವಸ್ಥೆಗೆ ಅಕ್ರಮ ವಲಸಿಗರು ಗಂಭೀರ ಸವಾಲಾಗಿರುವುದಕ್ಕೆ ಸಾಕ್ಷಿ.
ಈ ಇಡೀ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಕೂಡ ಗಂಭೀರವಾಗಿ ಪರಿಗಣಿಸಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಕಚೇರಿಯಲ್ಲಿ (ಎಫ್ಆರ್ಆರ್ಒ) ನೋಂದಣಿ ಮಾಡಿಸದೆ ಬೆಂಗಳೂರಿನಲ್ಲಿ ಉಳಿದುಕೊಂಡಿರುವ ವಿದೇಶಿ ಪ್ರಜೆಗಳನ್ನು ನಿಭಾಯಿಸಲು ರಾಜ್ಯದ ಕಡೆಯಿಂದ ಕರ್ತವ್ಯಲೋಪವಾಗಿದೆ. ಇಂತಹ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ದಿಗ್ಭಮೆಗೊಳಿಸುವಷ್ಟು ಮೌನ ಪ್ರದರ್ಶಿಸುತ್ತಿರುವುದು ಹಾಗೂ ಮೂಕಪ್ರೇಕ್ಷಕರಾಗಿರುವುದು ಆತಂಕದ ಸಂಗತಿ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಪತ್ತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇನ್ನಾದರೂ ಈ ವಿಷಯದಲ್ಲಿ ನಿರ್ಲಕ್ಷ್ಯದ ಧೋರಣೆ ತಳೆಯಬಾರದು.