Editorial | ಸಂಪಾದಕೀಯ: ವಂಚನೆಗೆ ಕಡಿವಾಣ ಹಾಕಿ
ಪ್ರತಿನಿತ್ಯ ವಾಹನಗಳಿಗೆ ಇಂಧನ ತುಂಬಿಸುವ ಲಕ್ಷಾಂತರ ನಾಗರಿಕರ ಜೇಬಿಗೆ ಕೆಲವು ಪೆಟ್ರೋಲ್ ಬಂಕ್ಗಳು ಸದ್ದಿಲ್ಲದೆ ಕನ್ನ ಹಾಕುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ತೈಲ ವಿತರಣಾ ಯಂತ್ರಗಳ ಅಳತೆಯಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ಕಡಿಮೆ ಇಂಧನ ಪೂರೈಸಿ ವಂಚಿಸುತ್ತಿದ್ದ ಜಾಲದ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ರಾಜ್ಯಾದ್ಯಂತ ತಪಾಸಣೆ ನಡೆಸಿ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದು ಸಮಯೋಚಿತವಾಗಿದೆ. ದಿನದಿಂದ ದಿನಕ್ಕೆ ಇಂಧನ ದರಗಳು ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ, ಸಾರ್ವಜನಿಕರು ತಾವು ತೆತ್ತ ಹಣಕ್ಕೆ ಸರಿಯಾದ ಪ್ರಮಾಣದ ಪೆಟ್ರೋಲ್ ಅಥವಾ ಡೀಸೆಲ್ ಪಡೆಯಲು ಸಾಧ್ಯವಾಗದಿರುವುದು ದುರದೃಷ್ಟಕರ. ಇಂತಹ ಅಕ್ರಮಗಳನ್ನು ತಾಂತ್ರಿಕ ದೋಷವೆಂದು ನಿರ್ಲಕ್ಷಿಸುವಂತಿಲ್ಲ.
ಹಲವು ಪೆಟ್ರೋಲ್ ಬಂಕ್ಗಳಲ್ಲಿ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಗ್ರಾಹಕರನ್ನು ಮರುಳು ಮಾಡುವ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ. ಯಂತ್ರಗಳ ಪಲ್ಸರ್ ಆ್ಯಂಪ್ಲಿಫೈಯರ್ ಚಿಪ್ಗಳಲ್ಲಿ ಬದಲಾವಣೆ ಮಾಡುವುದು, ಡಿಜಿಟಲ್ ಡಿಸ್ಪ್ಲೇಯಲ್ಲಿ ತೋರಿಸುವ ಅಳತೆಗೂ ಕೊಳವೆಯ ಮೂಲಕ ವಾಹನದ ಟ್ಯಾಂಕ್ ಸೇರುವ ಇಂಧನದ ಪ್ರಮಾಣಕ್ಕೂ ವ್ಯತ್ಯಾಸ ಇಡುವುದು ಹಾಗೂ ಬಂಕ್ ಸಿಬ್ಬಂದಿ ಗ್ರಾಹಕರ ಗಮನ ಬೇರೆಡೆ ಸೆಳೆದು ಜೀರೋ ತೋರಿಸದೆ ಇಂಧನ ತುಂಬುವುದು ಸಾಮಾನ್ಯವಾಗಿಬಿಟ್ಟಿದೆ. ಒಬ್ಬ ಗ್ರಾಹಕನಿಗೆ ಪ್ರತಿ ಲೀಟರ್ಗೆ ಕೆಲವೇ ಮಿಲಿಲೀಟರ್ಗಳಷ್ಟು ಇಂಧನ ಕಡಿಮೆ ಸಿಕ್ಕರೂ, ದಿನಕ್ಕೆ ಸಾವಿರಾರು ಲೀಟರ್ ಮಾರಾಟವಾಗುವ ದೊಡ್ಡ ಬಂಕ್ಗಳಲ್ಲಿ ಮಾಲೀಕರು ಅಕ್ರಮವಾಗಿ ದಿನಂಪ್ರತಿ ಲಕ್ಷಾಂತರ ರೂ. ಸಂಪಾದಿಸುತ್ತಾರೆ. ಬಡ ಮತ್ತು ಮಧ್ಯಮ ವರ್ಗದ ಜನರ ಬೆವರಿನ ದುಡಿಮೆ ಹೀಗೆ ಪೋಲಾಗುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಈ ನಿಟ್ಟಿನಲ್ಲಿ, ಕಾನೂನು ಮಾಪನಶಾಸ್ತ್ರ ಇಲಾಖೆಯು ಸಾರ್ವಜನಿಕರಿಂದ ದೂರುಗಳು ಬಂದಾಗ ಅಥವಾ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದಾಗ ಮಾತ್ರ ಜಾಗೃತಗೊಂಡು ಕಾರ್ಯಾಚರಣೆ ನಡೆಸುವುದಕ್ಕೆ ಸೀಮಿತವಾಗಬಾರದು. ರಾಜ್ಯಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಯೊಂದು ಇಂಧನ ಬಂಕ್ಗಳ ಮೇಲೆ ದಿಢೀರ್ ದಾಳಿ ನಡೆಸಿ ತಪಾಸಣೆ ಮಾಡಬೇಕು. ತಪಾಸಣೆಯ ಸಮಯದಲ್ಲಿ ಅಳತೆ ಲೋಪ ಅಥವಾ ತಂತ್ರಜ್ಞಾನ ದುರ್ಬಳಕೆ ಪತ್ತೆಯಾದ ತಕ್ಷಣವೇ ಅಂತಹ ಬಂಕ್ಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು. ಸಣ್ಣ ಪ್ರಮಾಣದ ದಂಡ ವಿಧಿಸಿ ಬಿಟ್ಟುಬಿಟ್ಟರೆ ಇಂತಹ ಅಕ್ರಮಗಳು ಮುಂದುವರಿಯುತ್ತವೆ. ವಂಚಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
ಮತ್ತೊಂದೆಡೆ, ತೈಲ ಕಂಪನಿಗಳು ಸಹ ಜವಾಬ್ದಾರಿ ಹೊರಬೇಕು. ಡಿಜಿಟಲ್ ತಂತ್ರಜ್ಞಾನದ ಈ ಯುಗದಲ್ಲಿ, ತೈಲ ವಿತರಣಾ ಯಂತ್ರಗಳಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಅಳತೆ ವ್ಯತ್ಯಾಸವಾದ ತಕ್ಷಣ ಕೇಂದ್ರೀಯ ವ್ಯವಸ್ಥೆಗೆ ಸೂಚನೆ ರವಾನೆಯಾಗುವಂತಹ ಸ್ವಯಂಚಾಲಿತ ಡಿಜಿಟಲ್ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಬೇಕು. ಗ್ರಾಹಕರು ಸಹ ಜಾಗೃತರಾಗಿ, ಸಂಶಯ ಬಂದ ತಕ್ಷಣ 5 ಲೀಟರ್ ಪ್ರಮಾಣಿತ ಅಳತೆ ಕಪ್ ಮೂಲಕ ತಪಾಸಣೆ ನಡೆಸುವಂತೆ ಒತ್ತಾಯಿಸಬೇಕು. ಸರ್ಕಾರವು ಈ ವಂಚನೆ ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕಿ, ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು ಶೂನ್ಯ ಸಹಿಷ್ಣುತಾ ನೀತಿಯನ್ನು ಜಾರಿಗೆ ತರಬೇಕು.