ಬಾಂಗ್ಲಾದೇಶ 
ದೇಶ

ಸಂಪಾದಕೀಯ: ಅಯೋಮಯ ಬಾಂಗ್ಲಾದೇಶ

‘ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಭಾರತಕ್ಕೆ 1971ರ ನಂತರದ ಅತಿದೊಡ್ಡ ವ್ಯೂಹಾತ್ಮಕ ಸವಾಲು. ಭಾರತದ ಪಾಲಿಗೆ ಬಾಂಗ್ಲಾದೇಶ ಬೆದರಿಕೆಯಾಗಿ ಬದಲಾಗುತ್ತಿದೆ’ ಎಂದು ಸಂಸದ ಶಶಿ ಥರೂರ್ ಅಧ್ಯಕ್ಷತೆಯ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿ ಗುರುವಾರವಷ್ಟೇ ವರದಿ ನೀಡಿ, ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಮತ್ತೊಂದೆಡೆ, ಗುರುವಾರ ರಾತ್ರಿಯಿಂದಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭವಾಗಿದ್ದು, ಅಲ್ಲೀಗ ಅರಾಜಕತೆಯೇ ತಾಂಡವವಾಡುತ್ತಿದೆ. ಬಾಂಗ್ಲಾದೇಶದಲ್ಲಿರುವ ಭಾರತೀಯರು ಮನೆಯಲ್ಲೇ ಇರುವಂತೆ ಹಾಗೂ ಸ್ಥಳೀಯವಾಗಿ ಹೆಚ್ಚು ಓಡಾಟ ನಡೆಸದಂತೆ ಢಾಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.

ಕಳೆದ ವರ್ಷ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿ, ಮಧ್ಯಂತರ ಸರ್ಕಾರ ರಚನೆಯಾದಾಗಲೇ ಹಿಂಸಾಚಾರದಿಂದ ಪರಿಸ್ಥಿತಿ ಕೈ ಮೀರಿತ್ತು. ಆದರೆ, 2024ರಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ನಡೆದಿದ್ದ ಬೃಹತ್ ಪ್ರತಿಭಟನೆ ನೇತೃತ್ವ ವಹಿಸಿದ್ದ ಭಾರತವಿರೋಧಿ ನಾಯಕ ಷರೀಫ್ ಒಸ್ಮಾನ್ ಹದಿ ಕಳೆದ ವಾರ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆಗಾಗಿ ಸಿಂಗಾಪುರ ಆಸ್ಪತ್ರೆಗೆ ಸೇರಿದ್ದ. ಆತ ಮೃತಪಟ್ಟ ಬಳಿಕ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಒಸ್ಮಾನ್ ಹದಿ ಹಂತಕರಿಗೆ ಭಾರತ ಆಶ್ರಯ ನೀಡಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಭಾರತೀಯ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅಲ್ಲದೆ, ಹಿಂದೂ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಲವು ಮಾಧ್ಯಮ ಸಂಸ್ಥೆಗಳ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಪಾರ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದ ಹಿನ್ನೆಲೆಯಲ್ಲಿ ಹಸೀನಾ ಹಿಂದಿರುಗುವಿಕೆಗೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. 2024ರ ಆಗಸ್ಟ್​ನಿಂದ ಬಾಂಗ್ಲಾದೇಶದಲ್ಲಿ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರದಲ್ಲಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಮತ್ತು ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿರುವುದಕ್ಕೆ ಈಗಿನ ಸನ್ನಿವೇಶಗಳೇ ಸಾಕ್ಷಿ.

ಬಾಂಗ್ಲಾದೇಶದ ಆಂತರಿಕ ವಿಪ್ಲವ ಮೇಲ್ನೋಟಕ್ಕೆ ಕಂಡಷ್ಟು ಸರಳವಲ್ಲ. ಇದು ಹಲವು ಒಳಸುಳಿಗಳನ್ನು ಹೊಂದಿದ್ದು, ಹೆಚ್ಚುತ್ತಿರುವ ಹಿಂಸಾಚಾರ ಕಳವಳವನ್ನು ಸೃಷ್ಟಿಸಿದೆ. ಅಮೆರಿಕ ಮತ್ತು ಚೀನಾದ ಅತಿಯಾದ ಹಸ್ತಕ್ಷೇಪ ಕೂಡ ಸ್ಥಿತಿಯನ್ನು ಬಿಗಡಾಯಿಸಿದೆ. ಇತಿಹಾಸವನ್ನು ಮರೆತು, ಭವಿಷ್ಯವನ್ನು ನಿರ್ಲಕ್ಷಿಸಿರುವ ಬಾಂಗ್ಲಾ ನಾಯಕರು ಪ್ರಮಾದಗಳನ್ನು ಮಾಡುತ್ತಲೇ ಇದ್ದಾರೆ. ಪಾಕಿಸ್ತಾನದೊಂದಿಗೆ ಹೋರಾಡಿ, ಯುದ್ಧ ಮಾಡಿ ಭಾರತದ ನೆರವಿನಿಂದ ಸ್ವಾತಂತ್ರ್ಯ ಗಳಿಸಿದ ಬಾಂಗ್ಲಾದೇಶ ಅದೇ ಪಾಕಿಸ್ತಾನದೊಂದಿಗೆ ಸ್ನೇಹಹಸ್ತ ಚಾಚಿದ್ದು ನೋಡಿ, ವಿದೇಶಾಂಗ ವ್ಯವಹಾರಗಳ ತಜ್ಞರೇ ಹೌಹಾರಿದ್ದರು. ಬಾಂಗ್ಲಾ ನಾಗರಿಕರಲ್ಲಿ ಅಲ್ಲಿನ ನಾಯಕರು ನಿರಂತರವಾಗಿ ಭಾರತವಿರೋಧಿ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಹಾಗಾಗಿ, ಈ ಎಲ್ಲ ಬೆಳವಣಿಗೆಗಳನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕಿದೆ ಮತ್ತು ಪರಿಸ್ಥಿತಿ ನಿರ್ವಹಣೆಗೆ ಕಾರ್ಯತಂತ್ರ ರೂಪಿಸಬೇಕಿದೆ. ಬಾಂಗ್ಲಾದೇಶದ ನಿರಾಶ್ರಿತರು ಅಥವಾ ನುಸುಳುಕೋರರು ಅಸ್ಥಿರತೆಯ ನೆಪದಲ್ಲಿ ಮತ್ತೆ ಭಾರತಕ್ಕೆ ಬರದಂತೆ ನಿಗಾ ವಹಿಸುವುದು ಅಗತ್ಯ.