ಜಗತ್ ಪ್ರಸಿದ್ಧ ತಿರುಪತಿ&ತಿರುಮಲ ದೇವಸ್ಥಾನವು ಭಾರತದ ಆಧ್ಯಾತ್ಮಿಕ, ಧಾರ್ಮಿಕ ವಲಯದ ಅತಿ ಪ್ರಮುಖ ಸ್ಥಳಗಳಲ್ಲಿ ಒಂದು. ಪ್ರತಿ ವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಾರೆ. ದೇವರ ಪ್ರಸಾದವಾಗಿ ವಿತರಿಸುವ ಲಡ್ಡು ಅತ್ಯಂತ ಮಧುರ ಮತ್ತು ರುಚಿಕರ ಎಂಬುದೇನೋ ನಿಜವೇ; ಜತೆಗೆ, ಅದು ಪಾವಿತ್ರ್ಯವು ಮತ್ತು ಭಕ್ತರ ನಂಬಿಕೆಯ ದ್ಯೋತಕವೂ ಹೌದು. ಪ್ರತಿದಿನ ಸುಮಾರು 3.5 ಲ ಲಡ್ಡುಗಳನ್ನು ತಯಾರಿಸಿ ವಿತರಿಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಲಡ್ಡುಗಳನ್ನು ತಯಾರಿಸಲು ಪ್ರತಿದಿನ 11,500 ಕೆ.ಜಿ. ತುಪ್ಪ ಬೇಕಾಗುತ್ತದೆ. ವಾರ್ಷಿಕವಾಗಿ ಲಡ್ಡುಗಳ ಮಾರಾಟದಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ಸುಮಾರು 500 ಕೋಟಿ ರೂ. ಆದಾಯವೂ ಬರುತ್ತದೆ. ಆದರೆ ಈ ಪವಿತ್ರ ಪ್ರಸಾದದ ತಯಾರಿಕೆಯಲ್ಲಿ 2019ರಿಂದ 2024ರವರೆಗೆ ನಡೆದ ಬೃಹತ್ ಹಗರಣ ಈಗ ಭಕ್ತರ ಮನಸ್ಸುಗಳನ್ನು ಘಾಸಿಗೊಳಿಸಿದೆ. ಕಲಬೆರಕೆ ತುಪ್ಪ ಬಳಸಿ ಲಡ್ಡು ತಯಾರಿಸಿದ್ದು ಮತ್ತು ಅವುಗಳನ್ನು ಕೋಟ್ಯಂತರ ಭಕ್ತರಿಗೆ ವಿತರಿಸಿದ್ದು ನಂಬಿಕೆಯೊಂದಿಗಿನ ಚೆಲ್ಲಾಟ ಮಾತ್ರವಲ್ಲ, ಭಕ್ತರಿಗೆ ಮಾಡಿರುವ ಭಾರಿ ವಿಶ್ವಾಸದ್ರೋಹ.
2024ರಲ್ಲಿ ಪ್ರಯೋಗಾಲಯ ಪರೀಕ್ಷೆಯೊಂದರಿಂದ ಬಯಲಾದ ಈ ಹಗರಣ "ಬೇಲಿಯೇ ಎದ್ದು ಹೊಲ ಮೇಯ್ದಂತೆ' ಎಂಬ ನಾಣ್ಣುಡಿಯನ್ನು ನೆನಪಿಸುತ್ತದೆ. 5 ವರ್ಷಗಳಲ್ಲಿ ಟಿಟಿಡಿಗೆ ಖಾಸಗಿ ಕಂಪನಿಗಳಿಂದ 68 ಲಕ್ಷ ಕೆ.ಜಿ. ಕಲಬೆರಕೆ ತುಪ್ಪ ಪೂರೈಕೆಯಾಗಿದೆ. ಇದರ ಮೌಲ್ಯ 250 ಕೋಟಿ ರೂ.! ಉತ್ತರಾಖಂಡದ ಭೋಲೆ ಬಾಬಾ ಆರ್ಗ್ಯಾನಿಕ್ ಡೇರಿಯ ಹೆಸರು ಈ ದುರಾಸೆಯ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿದೆ. ಸ್ವಲ್ಪವೂ ಹಾಲು ಖರೀದಿಸದೇ ತಾಳೆ ಎಣ್ಣೆ, ಪ್ರಾಣಿಗಳ ಕೊಬ್ಬು, ರಾಸಾಯನಿಕಗಳಾದ ಮಾನೋಡಿಗ್ಲಿಸರೈಡ್ಸ್, ಅಸೆಟಿಕ್ ಆ್ಯಸಿಡ್ ಮಿಶ್ರಣದಿಂದ ಕೃತ್ರಿಮವಾದ ತುಪ್ಪವನ್ನು ತಯಾರಿಸಿ ಅದು ಟಿಟಿಡಿಗೆ ಕಳಿಸಿದೆ. ಇದರಿಂದ 48.76 ಕೋಟಿ ಲಡ್ಡುಗಳಲ್ಲಿ 20 ಕೋಟಿಗೂ ಹೆಚ್ಚು ಲಡ್ಡುಗಳು ಕಲಬೆರಕೆಯಾದಂತಾಗಿದೆ. ಇದು ಭಕ್ತರ ಆರೋಗ್ಯಕ್ಕೂ ಧಕ್ಕೆ ಉಂಟು ಮಾಡುವ ಕೃತ್ಯವಾಗಿದೆ.
ಆಂಧ್ರಪ್ರದೇಶ ಸರ್ಕಾರದ ವಿಶೇಷ ತನಿಖಾ ತಂಡದ (ಎಸ್ಐಟಿ) ವಿಚಾರಣೆಯಲ್ಲಿ ಈ ಕೃತ್ಯ ಬಹಿರಂಗವಾಗಿದೆ. ಸಿಬಿಐ ತನಿಖೆ ನಂತರ ಭೋಲೆ ಬಾಬಾ ಡೇರಿಯ ಮಾಜಿ ನಿರ್ದೇಶಕರಾದ ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್, ವೈಷ್ಣವಿ ಡೇರಿಯ ಅಪೂರ್ವಾ ಚೌಧಾ, ಎಆರ್ ಡೇರಿಯ ರಾಜು ರಾಜಶೇಖರನ್ ಅವರನ್ನು ಬಂಧಿಸಲಾಗಿದೆ. ರಾಸಾಯನಿಕಗಳ ಸರಬರಾಜುದಾರ, ದೆಹಲಿಯ ವ್ಯಾಪಾರಿ ಅಜಯ್ ಕುಮಾರ್ ಸುಗಂಧ ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಟಿಟಿಡಿ ಮಾಜಿ ಅಧ್ಯ ವೈ.ವಿ. ಸುಬ್ಬಾರೆಡ್ಡಿ ಅವರನ್ನು 8 ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಟಿಟಿಡಿ ಮಾಜಿ ಸಿಇಓ ಮೇಲೂ ಶಂಕೆ ವ್ಯಕ್ತವಾಗಿದೆ.
ಭಕ್ತರ ನಂಬಿಕೆಯ ವಿಷಯದಲ್ಲಿ ಈ ರೀತಿ ಚೆಲ್ಲಾಟ ಆಡಿರುವುದು ಅಕ್ಷಮ್ಯ ಅಪರಾಧ. ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ. ಸರಬರಾಜುದಾರರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು. ಪ್ರಯೋಗಾಲಯ ಪರೀಕ್ಷೆಗಳನ್ನು ಕಡ್ಡಾಯಗೊಳಿಸಬೇಕು.