ಸಂಪಾದಕೀಯ | ಸದನದ ಘನತೆ ರಕ್ಷಿಸಿ  
ದೇಶ

ಸಂಪಾದಕೀಯ | ಸದನದ ಘನತೆ ರಕ್ಷಿಸಿ

ಬೆಂಗಳೂರು: ಸಾಂವಿಧಾನಿಕ ಘನತೆಯನ್ನು ಹೊಂದಿರುವ ವಿಧಾನ ಪರಿಷತ್ ‘ಚಿಂತಕರ ಚಾವಡಿ’ ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಆದರೆ, ರಾಜಕೀಯ ಆಟಾಟೋಪದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಕತ್ತನ್ನೇ ಹಿಸುಕುತ್ತಿರುವುದು, ಅಸಂಸದೀಯ ನಡವಳಿಕೆಯ ಮೂಲಕ ಉದ್ಧಟತನವನ್ನು ಪ್ರದರ್ಶಿಸುತ್ತಿರುವುದು ತೀವ್ರ ಖಂಡನಾರ್ಹ.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಅಡ್ಡಿ, ರಾಷ್ಟ್ರಗೀತೆಗೆ ರಾಜ್ಯಪಾಲರ ಅಗೌರವದ ಆರೋಪ, ಆಡಳಿತ ಪಕ್ಷದ ಸದಸ್ಯರೊಬ್ಬರಿಂದ ರಾಜ್ಯಪಾಲರ ಬಗ್ಗೆ ಕೆಟ್ಟ ಪದ ಬಳಕೆ, ವಿಧಾನ ಪರಿಷತ್​ನಲ್ಲಿ ದಿನಪೂರ್ತಿ ಗದ್ದಲ, ಆಕ್ರೋಶ, ಆರೋಪ, ವಾಗ್ವಾದದ ನಡುವೆ ಗುರುವಾರದ ಕಲಾಪ ಯಾವುದೇ ಚರ್ಚೆಯಿಲ್ಲದೆ ಮುಗಿದಿದೆ. ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ ವಿಷಯವಾಗಿ ಪರಿಷತ್​ನಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದವರ ನಡುವೆ ನಡೆದ ವಾಗ್ವಾದಗಳು ಕೀಳುಮಟ್ಟದ ಪದಪ್ರಯೋಗಳಿಗೆ ಆಸ್ಪದ ವಾಗಿದ್ದು ತೀವ್ರ ಕಳವಳಕಾರಿ ಬೆಳವಣಿಗೆ. ಕೇವಲ ರಾಜಕೀಯ ಲಾಭಕ್ಕಾಗಿ ಅಸಾಂವಿಧಾನಿಕ ಭಾಷೆ ಬಳಸುವುದು ಇಡೀ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕುಗ್ಗಿ ಸುತ್ತದೆ ಎಂದು ಹಿರಿಯ ಸದಸ್ಯರು ಆತಂಕವನ್ನೂ ಹೊರಹಾಕಿದ್ದು, ಆ ಕಳಕಳಿಯನ್ನು ಅರ್ಥ ಮಾಡಿಕೊಳ್ಳಬೇಕು.

ಸುಸಂವಾದಕ್ಕೆ ವೇದಿಕೆಯಾಗಬೇಕಾದ ಕಲಾಪಗಳು ಗದ್ದಲ, ಗೊಂದಲಕ್ಕೆ ಬಲಿಯಾಗುತ್ತಿರುವುದು ದುರ್ದೈವದ ಸಂಗತಿ. ಈ ರೀತಿಯ ವರ್ತನೆಯಿಂದ ಏನು ಸಾಧಿಸಿದಂತಾಗುತ್ತದೆ? ರ್ಚಚಿಸಲು ಹಲವು ಜ್ವಲಂತ ಸಮಸ್ಯೆಗಳು ಇರುವಾಗ ರಾಜಕೀಯ ಪ್ರತಿಷ್ಠೆಗಾಗಿ ಹೀಗೆ ಸದನದ ಕಲಾಪವನ್ನು ಬಲಿ ಕೊಡುತ್ತಿರುವುದು ಸರಿಯಲ್ಲ. ಈ ವಿಷಯದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ವಿವೇಚನೆಯಿಂದ ನಡೆದುಕೊಳ್ಳಬೇಕು. ಕಲಾಪ ಸುಗಮವಾಗಿ ನಡೆಯಬೇಕು. ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಸಹಜವೇ. ಇದರ ನಿವಾರಣೆಗೆ ಚರ್ಚೆ ವೇದಿಕೆಯಾಗಬೇಕೆ ಹೊರತು ಕಲಹ, ಕೂಗಾಟ-ಚೀರಾಟವಲ್ಲ. ರಾಜಕೀಯ ಪ್ರತಿಷ್ಠೆಯಲ್ಲಿ ತಮ್ಮದೇ ಗೆಲುವಾಗಬೇಕು ಎಂಬ ಧೋರಣೆಯೇ ಇಂಥ ಅಪಸವ್ಯಗಳಿಗೆ ನಾಂದಿಯಾಗುತ್ತಿದೆ.

ಹಿರಿಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ವಿಧಾನ ಪರಿಷತ್​ನಲ್ಲಿ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ವಿಷಯಗಳಲ್ಲಿ ವಿದ್ವತ್​ಪೂರ್ಣ ಚರ್ಚೆಗಳನ್ನು ನಡೆಸಿದ್ದರು. ಸಾಹಿತಿ ಸಿದ್ದಲಿಂಗಯ್ಯ, ಚಂದ್ರಶೇಖರ ಕಂಬಾರ, ಹಿರಿಯ ನಾಯಕ ಡಾ.ಎಂ.ಆರ್.ತಂಗಾ ಸೇರಿದಂತೆ ಪರಿಷತ್​ನ ಹಿರಿಯ ಸದಸ್ಯರು ತಮ್ಮ ಪ್ರಜ್ಞಾವಂತಿಕೆಯ ಮೂಲಕ ಗಂಭೀರ ವಿಚಾರಗಳ ಚರ್ಚೆಯಿಂದ ಇಡೀ ನಾಡಿನ ಗಮನ ಸೆಳೆಯುತ್ತಿದ್ದರು. ಅವರ ವಿದ್ವತ್ಪೂರ್ಣ ಮಾತುಗಳು ಹೊಸದೃಷ್ಟಿಯನ್ನು ನೀಡಿ ವಿಷಯದ ಹೊಸ ಆಯಾಮವನ್ನು ಪರಿಚಯಿಸುತ್ತಿದ್ದವು. ಆದರೆ, ಪರಿಸ್ಥಿತಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದರೆ ವ್ಯಕ್ತಿಗತ ನಿಂದನೆ ಮತ್ತು ಕೀಳುಮಟ್ಟದ ಶಬ್ದಪ್ರಯೋಗಗಳು ಅಬ್ಬರಿಸುತ್ತಿವೆ.

ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಕೆಲ ವರ್ಷಗಳ ಹಿಂದೆ ಉಪ ಸಭಾಪತಿ ಆಗಿದ್ದ ಜೆಡಿಎಸ್ನ ದಿವಂಗತ ಎಸ್.ಎಲ್. ಧಮೇಗೌಡ ಅವರನ್ನು ಪೀಠದಿಂದ ಎಳೆದು ಹಾಕಿದ್ದ ಘಟನೆ ಮಾಸುವ ಮೊದಲೇ ಈ ಘಟನೆ ನಡೆದಿದೆ. ಶಾಸಕಾಂಗದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸದಸ್ಯರು ಪಕ್ಷಾತೀತವಾಗಿ ದನಿ ಎತ್ತಬೇಕಿದೆ. ಮೇಲ್ಮನೆಯ ಘನತೆಯನ್ನು ರಕ್ಷಿಸಬೇಕಿದೆ.